More

    ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ಮೋಸ

    ಸಾಲಿಗ್ರಾಮ: ಅಧಿಕಾರಿಗಳು ಮಧ್ಯವರ್ತಿಗಳ ಜತೆ ಸೇರಿ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ಆರೋಪಿಸಿದರು.

    ಮಂಗಳವಾರ ರೈತ ಸಂಘಟನೆಗಳ ಮುಖಂಡರೊಂದಿಗೆ ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ರಾಗಿ ಖರೀದಿ ಅಧಿಕಾರಿ ಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.

    ರೈತರು ರಾಗಿಯನ್ನು ವೇಬ್ರಿಡ್ಜ್‌ನಲ್ಲಿ ತೂಕ ಹಾಕಿಸಿದಾಗ ಬರುವ ತೂಕಕ್ಕೆ ರೈತರಿಗೆ ಹಣವನ್ನು ನೀಡದೆ ಒಂದು ಕ್ವಿಂಟಾಲ್ ರಾಗಿಗೆ ಕನಿಷ್ಠ 3 ಕೆಜಿ ರಾಗಿಯನ್ನು ಕಳೆದು ಉಳಿದ ತೂಕಕ್ಕೆ ಹಣವನ್ನು ನೀಡಲಾಗುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

    ಪ್ರತಿ ಕ್ವಿಂಟಾಲ್ಗೆ 25 ರೂ.ಗಳನ್ನು ರೈತರಿಂದ ವಸೂಲಿ ಮಾಡಲಾಗುತ್ತಿದೆ. ವೇ ಬ್ರಿಡ್ಜ್ ಬಳಿಯಲ್ಲಿ ಸಾಲುಗಟ್ಟಿ ವಿವಿಧ ವಾಹನಗಳು ರಾಗಿಯನ್ನು ತುಂಬಿಕೊಂಡು ಬಂದು ಸಾಲಿಗ್ರಾಮ- ಕೆ.ಆರ್.ನಗರ ಮುಖ್ಯರಸ್ತೆಯ ಪಕ್ಕದಲ್ಲೇ ಸಾಲು ಸಾಲಾಗಿ ನಿಲ್ಲುತ್ತಿವೆ. ರಾತ್ರಿ ಆಗಲು ರೈತರು ತಂದಿರುವ ರಾಗಿಯನ್ನು ಕಾಯ್ದು ಕುಳಿತಿದ್ದಾರೆ. ಹೆಚ್ಚು ವಾಹನ ಸಂಚಾರದ ಈ ರಸ್ತೆಯಲ್ಲಿ ರೈತರಿಗೆ ಏನಾದರೂ ಅನಾಹುತ ಆದರೆ ಅದಕ್ಕೆ ಕೇಂದ್ರದ ಅಧಿಕಾರಿಗಳೇ ನೇರ ಹೊಣೆ ಆಗಬೇಕಾಗುತ್ತದೆ. ಜತೆಗೆ ರಾಗಿ ಖರೀದಿ ಕೇಂದ್ರದಲ್ಲಿಯೂ ಮಧ್ಯವರ್ತಿಗಳ ಹಾವಳಿ ಇರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

    ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯ ಮೇಲಧಿಕಾರಿಗಳು ಅಗತ್ಯ ಕ್ರಮ ವಹಿಸುವ ಮೂಲಕ ರೈತರಿಗೆ ನೆರವಾಗಬೇಕೆಂದು ಒತ್ತಾಯಿಸಿದರು.ಕಬ್ಬು ಬೆಳೆಗಾರರ ಸಂಘದ ಮೇಲೂರು ಗ್ರಾಮ ಘಟಕದ ಉಪಾಧ್ಯಕ್ಷ ದೇವರಾಜ್, ನಿರ್ದೇಶಕರಾದ ಸ್ವಾಮಿಗೌಡ, ಮಂಜು, ಪವನ್, ಪಶುಪತಿ ಶಾಂತಕುಮಾರ್, ಪಶುಪತಿ ಕೊಪ್ಪಲು ಗ್ರಾಮ ಘಟಕದ ಅಧ್ಯಕ್ಷ ಶಿವರಾಂ ಸೇರಿದಂತೆ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts