More

    ರಸ್ತೆ ಸಂಚಾರ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

    ಕೊಳ್ಳೇಗಾಲ: ಪಟ್ಟಣದಿಂದ ಹನೂರಿಗೆ ಸಂಚರಿಸುವ ಸಾರಿಗೆ ಬಸ್‌ಗಳು ಕಾಮಗಾರೆ ಗ್ರಾಮದಲ್ಲಿ ನಿಲ್ಲಸದಿರುವುದರಿಂದ ಶಾಲಾ-ಕಾಲೇಜಿಗೆ ತೆರಳಲು ತೊಂದರೆಯಾಗಿದೆ ಎಂದು ನೂರಾರು ವಿದ್ಯಾರ್ಥಿಗಳು ಶುಕ್ರವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

    ಕಾಮಗೆರೆ ಗ್ರಾಮದ ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಲ್ಲಿ ಬೆಳಗ್ಗೆ 8.30 ರಿಂದ 10 ಗಂಟೆವರೆಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಡೆದು ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳಿಗೆ ಸ್ಥಳೀಯರು ಸಾಥ್ ನೀಡಿದರು. ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರಿಗೆ ಇಲಾಖೆ ವಿದ್ಯಾರ್ಥಿ ಸ್ನೇಹಿಯಾಗಿ ವರ್ತಿಸಲಿ ಎಂದು ಒತ್ತಾಯಿಸಿದರು.

    ಹನೂರು ಭಾಗಕ್ಕೆ ಸಮರ್ಪಕವಾಗಿ ಸಾರಿಗೆ ಬಸ್ ವ್ಯವಸ್ಥೆ ಒದಗಿಸಬೇಕು. ಕಾಮಗೆರೆಯಿಂದ ನೂರಾರು ವಿದ್ಯಾರ್ಥಿಗಳು ಕೊಳ್ಳೇಗಾಲ ಪಟ್ಟಣದ ವಿವಿಧ ಶಾಲಾ-ಕಾಲೇಜುಗಳಿಗೆ ತೆರಳುವುದರಿಂದ ಶಾಲಾ ಮಕ್ಕಳಿಗಾಗಿ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೆಎಸ್‌ಆರ್‌ಟಿಸಿಯಿಂದಲೇ ಬಸ್ ಪಾಸ್ ವ್ಯವಸ್ಥೆ ಮಾಡಲಾಗಿದ್ದರೂ ವಿದ್ಯಾರ್ಥಿಗಳನ್ನು ಕಡೆಗಣಿಸುವ ಕೆಲಸ ಮಾಡಲಾಗುತ್ತಿದೆ. ಪಾಸ್ ಇರುವ ಮಕ್ಕಳನ್ನು ಹತ್ತಲು ಬಿಡುವುದಿಲ್ಲ. ಎಕ್ಸ್‌ಪ್ರೆಸ್ ಬಸ್ ಎಂದು ತಿಳಿಸಿ ಹೊರಟು ಹೋಗುತ್ತಾರೆ. ಈ ಬಗ್ಗೆ ಹನೂರು ಹಾಗೂ ಕೊಳ್ಳೇಗಾಲದಲ್ಲೂ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.

    ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಟ್ಟಣ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಚೇತನ್, ಸ್ಥಳದಲ್ಲೇ ಕೆಎಸ್‌ಆರ್‌ಟಿಸಿ ಡಿಪೋ ಮೇಲ್ವಿಚಾರಕ ಚರಣ್‌ಗೆ ಕರೆ ಮಾಡಿ ಮಕ್ಕಳ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಸಂಬಂಧಪಟ್ಟ ಅಧಿಕಾರಿಗಳನ್ನು ಪೊಲೀಸ್ ಠಾಣೆಗೆ ಕರೆಸುವುದಾಗಿ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.

    ಬಳಿಕ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಗೆ ಆಗಮಿಸಿದ ಡಿಪೋ ಮ್ಯಾನೇಜರ್ ಮುತ್ತುರಾಜ್ ಹಾಗೂ ಮೇಲ್ವಿಚಾರಕ ಚರಣ್ ಅವರಿಗೆ ಸಬ್‌ಇನ್ಸ್‌ಪೆಕ್ಟರ್ ಚೇತನ್ ಸಮಸ್ಯೆಯನ್ನು ವಿವರಿಸಿದರು. ಬಸ್ ವ್ಯವಸ್ಥೆಯಲ್ಲಿ ಸ್ವಲ್ಪ ತೊಂದರೆಯಾಗಿದೆ. ಚಿಕ್ಕಲ್ಲೂರು ಜಾತ್ರೆ ಮುಗಿದ ಬಳಿಕ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಮಕ್ಕಳು ಈ ಬಾರಿ ಸಹಕರಿಸಬೇಕು ಎಂದು ಮುತ್ತುರಾಜ್ ಮನವಿ ಮಾಡಿದರು. ಬಳಿಕ ವಿದ್ಯಾರ್ಥಿಗಳು ಠಾಣೆಯಿಂದ ಹೊರ ನಡೆದರು.

    ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಹೇಮಂತ್, ಲಿಖಿತ್, ವಿರೇಶ್, ನಿತಿನ್, ನವೀನ್, ಪ್ರೀತಮ್, ರಾಹುಲ್, ಶ್ರೀನಿವಾಸ್, ವಿವೇಕ್ , ಬಾಲು ಹಾಗೂ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts