More

    ರಸ್ತೆ ಮೇಲೆ ಸಂಚಾರ ಬಲು ದುಸ್ತರ



    ರೋಣ: ತಾಲೂಕಿನ ಬೆಳವಣಿಕಿ ಗ್ರಾಮದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ರಸ್ತೆಗಳೆಲ್ಲಾ ಹಾಳಾಗಿವೆ. ಈ ರಸ್ತೆಯಲ್ಲಿ ಸಂಚಾರ ಕಷ್ಟಕರವಾಗಿದೆ.

    ರಸ್ತೆ ತುಂಬೆಲ್ಲ ಗುಂಡಿಗಳು, ಚದುರಿಬಿದ್ದ ಕಡಿಕಲ್ಲುಗಳು, ಕೆಸರಿನ ಹೊಂಡಗಳು ಸೃಷ್ಟಿಯಾಗಿವೆ. ರಸ್ತೆ ಮೇಲೆ ವಾಹನ ಸಂಚಾರ ಒತ್ತಟ್ಟಿಗಿರಲಿ ಕಾಲ್ನಡಿಗೆಗೂ ಯೋಗ್ಯ ಇಲ್ಲದಂತಾಗಿದೆ. ಇಂತಹ ರಸ್ತೆಯಲ್ಲಿ ವೃದ್ಧರು, ಮಕ್ಕಳು ಆತಂಕದಲ್ಲಿಯೇ ಪ್ರಯಾಣಿಸುವ ಸ್ಥಿತಿ ನಿರ್ವಣವಾಗಿದೆ. ಗ್ರಾಮದ ಲಕ್ಷ್ಮೀ ದೇವಸ್ಥಾನದಿಂದ ಶಿವಾನಂದಮಠದವರೆಗಿನ ರಸ್ತೆಯಲ್ಲಿನ ಸಂಚಾರವಂತೂ ಕಡುಕಷ್ಟಕರವಾಗಿದೆ.

    ಮನೆಯಿಂದ ಹೊರಹೋದ ವೃದ್ಧರು, ಮಕ್ಕಳು ಸುರಕ್ಷಿತವಾಗಿ ವಾಪಸಾಗುವ ಖಾತ್ರಿ ಇಲ್ಲದಂತಹ ಪರಿಸ್ಥಿತಿಯಿದೆ. ವಾಹನ ಸವಾರರು, ಪಾದಚಾರಿಗಳು ಇಷ್ಟೆಲ್ಲ ತೊಂದರೆ ಅನುಭವಿಸುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಇನ್ನಾದರೂ ಹದಗೆಟ್ಟ ರಸ್ತೆ ದುರಸ್ತಿಗೊಳಿಸದಿದ್ದರೆ ವಿವಿಧ ಪ್ರಗತಿಪರ ಸಂಘಟನೆಗಳು, ಗ್ರಾಮಸ್ಥರೂ ಒಟ್ಟುಗೂಡಿ ಹೋರಾಟ ನಡೆಸಬೇಕಾಗುತ್ತದೆ ಎಂದು ಸ್ಥಳೀಯ ನಿವಾಸಿ ಸೋಮು ಚರೇದ ಎಚ್ಚರಿಸಿದ್ದಾರೆ.

    ಗ್ರಾಮದ ಲಕ್ಷ್ಮೀ ದೇವಸ್ಥಾನದಿಂದ ಶಿವಾನಂದ ಮಠದವರೆಗಿನ ರಸ್ತೆಯನ್ನು ಎನ್​ಆರ್​ಇಜಿ ಅಭಿವೃದ್ಧಿಪಡಿಸಲಾಗಿತ್ತು, ಆದರೆ, ಗ್ರಾಮದ ಎಸ್.ಬಿ. ಶಿರೋಳ ಅವರ ಜಮೀನಿನಲ್ಲಿ ಈ ರಸ್ತೆ ಬಂದಿದೆ ಎಂದು ಅದನ್ನು ಅಗೆದು ವಿರೂಪಗೊಳಿಸಿದ್ದಾರೆ. ಈ ಬಗ್ಗೆ ತಹಸೀಲ್ದಾರ್ ಅವರು ಬಂದು ಸ್ಥಳ ಪರಿಶೀಲಿಸಿ ಸರ್ವೆ ಇಲಾಖೆಗೆ ವರದಿ ಸಲ್ಲಿಸಿದ್ದಾರೆ. ಈಗಾಗಲೇ ಸರ್ವೆ ಇಲಾಖೆಯವರು ಅಳತೆ ಮಾಡಿಕೊಂಡು ಹೋಗಿದ್ದಾರೆ. ಅವರು ವರದಿ ನೀಡಿದ ನಂತರ ಮತ್ತೆ ರಸ್ತೆ ಅಭಿವೃದ್ಧಿ ಪಡಿಸಲಾಗುವುದು.

    | ಹಣಮಂತಪ್ಪ ಸೈದಾಪೂರ ಗ್ರಾಪಂ ಅಧ್ಯಕ್ಷ , ಬೆಳವಣಿಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts