More

    ರಸ್ತೆ ಬದಿಯ ಕಂದಕ ಮುಚ್ಚಲು ಜನರ ಒತ್ತಾಯ

    ಸಿದ್ದಾಪುರ: ತಾಲೂಕಿನ ಹದಿನಾರನೇ ಮೈಲಕಲ್​ನಿಂದ ಯಲುಗಾರ್ ಕ್ರಾಸ್​ವರೆಗಿನ ಪಿಎಂಜಿಎಸ್​ವೈ (ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ) ರಸ್ತೆಯ ಮರುಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿಯೇ ರಸ್ತೆ ಪಕ್ಕ ಬಿದ್ದಿರುವ ಅಪಾಯದ ಕಂದಕಗಳನ್ನು ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

    19.5 ಕಿ.ಮೀ. ಇರುವ ಈ ರಸ್ತೆ ಕೆಲವೆಡೆ ಸಂಪೂರ್ಣ ಹೊಂಡ ಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ. ಈಗಾಗಲೇ ಪಿಎಂಜಿಎಸ್​ವೈ ಇಲಾಖೆ ರಸ್ತೆಯಲ್ಲಿನ ಹೊಂಡ ಮುಚ್ಚಿ ನಂತರ ಮರುಡಾಂಬರೀರಣ ಕಾಮಗಾರಿ ಆರಂಭಿಸಿದೆ. ಈ ಕಾರ್ಯ ಸ್ವಾಗತಾರ್ಹ. ಆದರೆ, ರಸ್ತೆಗೆ ತಾಗಿಕೊಂಡೆ ಕೆಲವೆಡೆಗಳಲ್ಲಿ ಅಪಾಯದ ಕಂದಕ ಬಿದ್ದು ವಾಹನ ಸವಾರರಿಗೆ ಕಂಟಕಪ್ರಾಯವಾಗಿದೆ. ಈಗಾಗಲೆ ಕೆಲವು ದ್ವಿಚಕ್ರ ಸವಾರರು ಕಂದಕಕ್ಕೆ ಬಿದ್ದು ಅಪಾಯದಿಂದ ಪಾರಾಗಿದ್ದಾರೆ.

    ಹಾಲ್ಕಣಿ, ಕುರವಂತೆ, ಭಂಡಾರಿಕೇರಿ, ಕಂಚೀಮನೆ- ಮಲ್ಕಾರ ಮತ್ತಿತರ ಕಡೆಗಳಲ್ಲಿ ರಸ್ತೆಗೆ ಹೊಂದಿಕೊಂಡೇ ಏಳೆಂಟು ಅಡಿ ಆಳದ ಕಂದಕ ಬಿದ್ದಿವೆ. ಇಂತಹ ಅಪಾಯದ ಸ್ಥಳವನ್ನು ಸರಿಪಡಿಸಿಕೊಂಡು ಮರುಡಾಂಬರೀಕರಣ ಕಾಮಗಾರಿ ನಡೆಸಬೇಕಿತ್ತು ಎಂದು ಕಿಲಾರ, ಕುರವಂತೆ, ಮುಠ್ಠಳ್ಳಿ, ಹಾರ್ಸಿಕಟ್ಟಾ, ವಾಜಗದ್ದೆ ಮತ್ತಿತರ ಭಾಗದ ಜನರು ಆಗ್ರಹಿಸಿದ್ದಾರೆ.

    ಹದಿನಾರನೇ ಮೈಲಕಲ್​ನಿಂದ ಯಲುಗಾರ್ ಕ್ರಾಸ್​ವರೆಗಿನ 19.5 ಕಿಲೋ ಮೀಟರ್ ರಸ್ತೆಯನ್ನು 1.95 ಕೋ.ರೂ. ವೆಚ್ಚದಲ್ಲಿ ಮರುಡಾಂಬರೀಕರಣ ಮಾಡಲಾಗುತ್ತಿದೆ. ರಸ್ತೆ ಪಕ್ಕ ಕಂದಕ ಬಿದ್ದಿರುವುದನ್ನು ಸರಿಪಡಿಸಲು ಹಾಗೂ ಹಾರ್ಸಿಕಟ್ಟಾದಲ್ಲಿನ 150 ಮೀಟರ್ ರಸ್ತೆ ಮರುಡಾಂಬರೀಕರಣ ಕಾಮಗಾರಿ ನಡೆಸಲು ಕ್ರಿಯಾಯೋಜನೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮೋದನೆ ಬಂದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ತೊಂದರೆ ಉಂಟಾಗುವ ಸ್ಥಳದಲ್ಲಿ ‘ಅಪಾಯ’ ಎಚ್ಚರಿಕೆಯ ನಾಮಫಲಕ ಅಳವಡಿಸಲಾಗವುದು.
    | ಶರಣಬಸಪ್ಪ ಎಇಇ ಪಿಎಂಜಿಎಸ್​ವೈ ಇಲಾಖೆ ಶಿರಸಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts