More

    ರಸ್ತೆ ದುರಸ್ತಿಗೆ ಸರ್ವ ಸದಸ್ಯರ ಒತ್ತಾಯ


    ಯಾದಗಿರಿ: ನಗರದ ಪ್ರಮುಖ ಬಡಾವಣೆ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ನಗರಸಭೆ ಅಧಿಕಾರಿಗಳು ದುರಸ್ತಿ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸದಸ್ಯರೆಲ್ಲರೂ ಪಕ್ಷಭೇದ ಮರೆತು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಸೋಮವಾರ ಕರೆದಿದ್ದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕಂಡುಬಂದಿತು.

    ಸುರೇಶ ಅಂಬಿಗೇರ ಅಧ್ಯಕ್ಷತೆಯಲ್ಲಿ ಸಭೆ ಶುರುವಾಗುತ್ತಿದ್ದಂತೆ ರಸ್ತೆ ದುಸ್ಥಿತಿ ವಿಷಯ ಪ್ರಸ್ತಾಪಿಸಿದ ಮನ್ಸೂರ್ ಅಹ್ಮದ್, ನಗರಸಭೆ ವ್ಯಾಪ್ತಿಯ ಬಹುತೇಕ ಒಳಚರಂಡಿಗಳು ದುವರ್ಾಸನೆ ಬೀರುತ್ತಿವೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವುದು ಅಧಿಕಾರಿಗಳ ಕರ್ತವ್ಯ. ಇದನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ತಾಕೀತು ಮಾಡಿದರು.

    ಇದಕ್ಕೆ ಧ್ವನಿಗೂಡಿಸಿದ ವಿಲಾಸ ಪಾಟೀಲ್, ಘನತ್ಯಾಜ್ಯ ವಿಲೇವಾರಿ ಸಮರ್ಪಕ ಮಾಡಬೇಕು. ಇದರಿಂದ ಸಾಕಷ್ಟು ಆದಾಯ ಕೂಡ ಬರುತ್ತದೆ. ಬೇರೆ ಬೇರೆ ಸ್ಥಳೀಯ ಸಂಸ್ಥೆಗಳು ಈ ಮೂಲಕವೇ ವರ್ಷಕ್ಕೆ 2 ಕೋಟಿ ರೂ. ಲಾಭ ಮಾಡಿಕೊಳ್ಳುತ್ತಿವೆ ಎಂದು ಸಲಹೆ ನೀಡಿದರು.

    ಕೆಲ ಕಾಮಗಾರಿಗಳು ಸಮರ್ಪಕ ನಡೆಯದ್ದರಿಂದ ಅಭಿವೃದ್ಧಿಗೆ ಹೊಡೆತ ಬೀಳುತ್ತಿದೆ. ಕಾಲಮಿತಿಯೊಳಗೆ ಕಾಮಗಾರಿ ಮಾಡದ ಗುತ್ತಿಗೆದಾರರಿಗೆ ನೋಟಿಸ್ ಕೊಡಬೇಕು. ಅಲ್ಲದೆ ತಪ್ಪೆಸಗಿರುವವರನ್ನು ಮುಲಾಜಿಲ್ಲದೆ ಕಪ್ಪು ಪಟ್ಟಿಗೆ ಸೇರಿಸುವಂತೆ ಕಾಂಗ್ರೆಸ್ನ ಚನ್ನಕೇಶವಗೌಡ ಬಾಣತಿಹಾಳ ಮತ್ತು ವೆಂಕಟರಡ್ಡಿ ಹೊನಿಕೇರಿ ಆಗ್ರಹಿಸಿದರು.

    ಇದಲ್ಲದೆ ಸರ್ವ ಸದಸ್ಯರ ನಿಯೋಗ ಸಿಎಂ ಬಳಿ ಕೊಂಡೊಯ್ದು ನಗರಸಭೆಗೆ ವಿಶೇಷ ಅನುದಾನ ತರಲು ಸಾಕಷ್ಟು ಬಾರಿ ಸಲಹೆ ನೀಡಿದ್ದೇನೆ. ಆದರೆ ಬಿಜೆಪಿ ಸದಸ್ಯರು ಒಪ್ಪುತ್ತಿಲ್ಲ. ಬಹುಶಃ ಅವರಿಗೆ ನಗರದ ಅಭಿವೃದ್ಧಿ ಬೇಕಿಲ್ಲದಂತಿದೆ ಎಂದು ಬಾಣತಿಹಾಳ ಟೀಕಿಸಿದರು.

    ಇದಕ್ಕೆ ಉತ್ತರಿಸಿದ ಅಧ್ಯಕ್ಷ ಅಂಬಿಗೇರ, ಸಕರ್ಾರ ನಗರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ. ಮುಂದೆಯೂ ನೀಡುತ್ತದೆ. ಕಾಂಗ್ರೆಸ್ ಸದಸ್ಯರ ಈ ಆರೋಪದಲ್ಲಿ ಹುರುಳಿಲ್ಲ ಎಂದು ಟಾಂಗ್ ನೀಡಿದರು.

    ಪ್ರಭಾವತಿ ಕಲಾಲ್ ಮಾತನಾಡಿ, ವಾರ್ಡ್​ 9ರ ವ್ಯಾಪ್ತಿಯಲ್ಲಿ ನೀರಿನ ಟ್ಯಾಂಕ್ ದುರಸ್ತಿ ಮಾಡಬೇಕಿದೆ. ಇಲ್ಲಿಂದಲೇ ಸಾಕಷ್ಟು ಜನರಿಗೆ ಕುಡಿಯಲು ನೀರು ಪೂರೈಕೆ ಆಗುತ್ತದೆ. ನಮ್ಮ ವಾರ್ಡ್​ ಪರಿಶೀಲನೆ ವಿಷಯದಲ್ಲಿ ಪೌರಾಯುಕ್ತರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನಗರಸಭೆ ಅಧಿಕಾರಿಗಳು ಬಂದಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ವಿಳಂಬ ಧೋರಣೆ ಅನುಸರಿಸಿದರೆ ಪ್ರಗತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಮಂಜುನಾಥ ದಾಸನಕೇರಿ ಹೇಳಿದರು.

    ನಾನಾ ವಿಷಯಗಳ ಚರ್ಚೆ ಬಳಿಕ ಜಿಲ್ಲಾ ಕೇಂದ್ರದಲ್ಲಿ ಆಯುಷ್ ಸಂಯುಕ್ತ ಆಸ್ಪತ್ರೆಗಾಗಿ 4.18 ಎಕರೆ ನೀಡಲು ಸಭೆ ಒಪ್ಪಿಗೆ ಸೂಚಿಸಿತು. ಅಲ್ಲದೆ ಪದ್ಮಾವತಿ ಅವರ 8.40 ಲಕ್ಷ ರೂ. ವೈದ್ಯಕೀಯ ವೆಚ್ಚ ಭರಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು. ಪೌರಾಯುಕ್ತ ಶರಣಪ್ಪ, ಉಪಾಧ್ಯಕ್ಷೆ ಚಂದ್ರಕಲಾ ಮಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts