More

    ರಸಗೊಬ್ಬರ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ

    ಬೆಳಗಾವಿ: ರಾಜ್ಯದ ವಿವಿಧೆಡೆ ಹಳೆಯ ಬೆಲೆಯ ರಸಗೊಬ್ಬರದ ಚೀಲಗಳನ್ನು ಹೊಸ ದರದಲ್ಲಿ ಮಾರಾಟ ಮಾಡುತ್ತಿರುವ ಕುರಿತು ಏ. 22ರ ‘ವಿಜಯವಾಣಿ’ ಮುಖಪುಟದಲ್ಲಿ ಪ್ರಕಟವಾದ ವಿಶೇಷ ವರದಿಯಿಂದ ಎಚ್ಚೆತ್ತುಕೊಂಡಿರುವ ಕೃಷಿ ಇಲಾಖೆ ಅಧಿಕಾರಿಗಳು, ರಸಗೊಬ್ಬರ ಅಂಗಡಿಗಳ ಮೇಲೆ ಗುರುವಾರ ಏಕಕಾಲದಲ್ಲಿ ವಿವಿಧೆಡೆ ದಾಳಿ ನಡೆಸಿದ್ದಾರೆ. ಗೋದಾಮುಗಳಲ್ಲಿರುವ ಗೊಬ್ಬರ ಚೀಲಗಳ ದಾಸ್ತಾನು ಪರಿಶೀಲಿಸಿ, ಹಳೆಯ ದರದಲ್ಲೇ ಮಾರಾಟ ಮಾಡುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಿದ್ದಾರೆ.

    ಕ್ರಮದ ಎಚ್ಚರಿಕೆ: ಈ ವೇಳೆ ‘ವಿಜಯವಾಣಿ’ಯೊಂದಿಗೆ ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಶಿವನಗೌಡ ಎಸ್.ಪಾಟೀಲ ಮಾತನಾಡಿ, ‘ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ರಸಗೊಬ್ಬರ ಮಾರಾಟ ಮಾಡುವ ಅಂಗಡಿಗಳಿದ್ದು, ಎಲ್ಲ ಕಡೆ ನಮ್ಮ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಯಾವ್ಯಾವ ಅಂಗಡಿಯಲ್ಲಿ ಹಳೆಯ ದರದ ರಸಗೊಬ್ಬರಗಳ ಸ್ಟಾಕ್ ಎಷ್ಟಿದೆ ಎಂಬ ಮಾಹಿತಿ ಯನ್ನೂ ಪಡೆದುಕೊಳ್ಳಲಾಗಿದೆ. ಅಲ್ಲದೆ, ಪ್ರತಿಯೊಂದು ಅಂಗಡಿ ಮುಂಭಾಗದಲ್ಲಿ ರಸಗೊಬ್ಬರದ ದರಪಟ್ಟಿ ಪ್ರಕಟಿಸಲು ಸೂಚನೆ ನೀಡಲಾಗಿದೆ. ಯಾರಾದರೂ ಹಳೆಯ ದರದ ಗೊಬ್ಬರದ ಚೀಲಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಮುಲಾಜಿಲ್ಲದೆ ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ’ ಎಂದು ತಿಳಿಸಿದರು.

    ಅಧಿಕಾರಿಗಳಿಂದ ನಿಗಾ: ಈಗಾಗಲೇ ಎಲ್ಲ ರೈತರಿಗೆ ರಸಗೊಬ್ಬರಕ್ಕೆ ಇರುವ ದರದ ಕುರಿತು ಮಾಹಿತಿ ನೀಡಲಾಗುತ್ತಿದೆ. ಅಲ್ಲದೆ, ರಸಗೊಬ್ಬರಗಳ ಚೀಲದ ಮೇಲೆ ಮುದ್ರಿತವಾಗಿರುವ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ವ್ಯಾಪಾರಿಗಳ ಕುರಿತು ರೈತರೇ ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರತಿನಿತ್ಯ ಇಲಾಖೆ ಅಧಿಕಾರಿಗಳು ಗೊಬ್ಬರ ಮಾರಾಟ ಪ್ರಕ್ರಿಯೆ ಮೇಲೆ ನಿಗಾ ವಹಿಸಲಿದ್ದಾರೆ ಎಂದು ಶಿವನಗೌಡ ಪಾಟೀಲ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts