More

    ರಷ್ಯನ್ ಪ್ರವಾಸಿ ಗೋವಾಕ್ಕೆ ವಾಪಸ್

    ಗೋಕರ್ಣ: ಕ್ವಾರಂಟೈನ್​ಗೆ ಒಪ್ಪದ ರಷ್ಯನ್ ಪ್ರವಾಸಿಯೊಬ್ಬ ಸೋಮವಾರ ಗೋವಾಕ್ಕೆ ವಾಪಸಾಗಿದ್ದಾನೆ.

    ರಷ್ಯಾದ ವಾದಮಿರ್ ಲಾಝುರೇವ್ ಎಂಬಾತ ಉತ್ತರ ಪ್ರದೇಶದಲ್ಲಿ ಎರಡು ತಿಂಗಳು ವಾಸವಾಗಿದ್ದ. ಬಳಿಕ ಗೋವಾ ಮೂಲಕ ಖಾಸಗಿ ವಾಹನದಲ್ಲಿ ಗೋಕರ್ಣಕ್ಕೆ ಸೋಮವಾರ ಮಧ್ಯಾಹ್ನ ಆಗಮಿಸಿದ್ದ. ಹಿತ್ತಲಮಕ್ಕಿ ಚೆಕ್​ಪೋಸ್ಟ್​ನಲ್ಲಿ ವಾಹನ ತಡೆದು ತಪಾಸಣೆ ಮಾಡಲಾಯಿತು. ಗೋವಾದಿಂದ ಇಲ್ಲಿಗೆ ಬರುವ ಮೊದಲು ಕಾರವಾರದ ಕಿಮ್ಸ್​ನಲ್ಲಿ ಈತನ ತಪಾಸಣೆ ಮಾಡಿ 14 ದಿನದ ಕ್ವಾರಂಟೈನ್​ಗೆ ಆದೇಶಿಸಲಾಯಿತು. ಇದರ ಪ್ರಕಾರ, ಸ್ಥಳೀಯ ಪಿಎಸ್​ಐ ನವೀನ ನಾಯ್ಕ ಮತ್ತು ಆರೋಗ್ಯಾಧಿಕಾರಿ ಡಾ.ಜಗದೀಶ ನಾಯ್ಕ ಈತನನ್ನು ಕುಮಟಾದ ಸಾಂಸ್ಥಿಕ ಕ್ವಾರಂಟೈನ್​ಗೆ ಕಳಿಸಿದರು. ಕುಮಟಾಕ್ಕೆ ಹೋದ ನಂತರ ಅಲ್ಲಿರಲು ಒಪ್ಪದ ಈತ ತಿರುಗಿ ಗೋವಾಕ್ಕೆ ಮರಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಚೆಕ್​ಪೋಸ್ಟ್ ಬೇಕು: ಲಾಕ್​ಡೌನ್ ಸಡಿಲವಾದ ನಂತರ ಬೇರೆ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ಗೋಕರ್ಣಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ನಿತ್ಯ ಬೆಳಗ್ಗೆ ಬೇರೆ ಜಿಲ್ಲೆಯ ವಾಹನಗಳು ಇಲ್ಲಿ ಕಾಣಸಿಗುತ್ತಿವೆ. ಸದ್ಯ ಈತನಕ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಚೆಕ್​ಪೋಸ್ಟ್ ಇರುವುದರಿಂದ ಗುರುತಿಸಿ ದಾಖಲಿಸಲಾಗುತ್ತಿದೆ. ಅಗತ್ಯ ಇರುವವರನ್ನು ಕ್ವಾರಂಟೈನ್ ಕೇಂದ್ರಕ್ಕೆ ರವಾನಿಸಲಾಗುತ್ತಿದೆ. ಆದರೆ, ಈ ಚೆಕ್​ಪೋಸ್ಟ್ ರದ್ದಾದಲ್ಲಿ ಸೋಂಕು ಪೀಡಿತ ಪ್ರದೇಶಗಳಿಂದ ಬರುವವರನ್ನು ಪತ್ತೆ ಮಾಡುವುದು ಕಷ್ಟವಾಗಲಿದೆ. ಕಾರಣ ಹಿತ್ತಲಮಕ್ಕಿ ಚೆಕ್​ಪೋಸ್ಟ್ ಮುಂದುವರಿಸಲು ಪೊಲೀಸರು ಜಿಲ್ಲಾ ವರಿಷ್ಠರಿಗೆ ವಿನಂತಿಸಿದ್ದು, ಸ್ಥಳೀಯ ನಾಗರಿಕರು ಕೂಡ ಇದನ್ನು ಬೆಂಬಲಿಸಿ ಚೆಕ್​ಪೋಸ್ಟ್ ಜಾರಿಯಲ್ಲಿಡಲು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts