More

    ಸರ್ಕಾರದಿಂದ ರೈತರ ಅಭ್ಯುದಯ

    ಬೆಳಗಾವಿ: ರೈತರ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಕಿಸಾನ್ ಸಮ್ಮಾನ್ ನಿಧಿ ಸೇರಿ ಅನೇಕ ಯೋಜನೆ ಅನುಷ್ಠಾನಗೊಳಿಸಿದ್ದು, ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಸದೆ ಮಂಗಲ ಅಂಗಡಿ ಹೇಳಿದರು.

    ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ 2014 ರ ನಂತರ ದೇಶದಲ್ಲಿನ ಕೃಷಿಕರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತ ಬಂದಿದೆ. ರೈತರಿಗಾಗಿಯೆ ಹೊಸ ಯೋಜನೆಗಳನ್ನು ಪರಿಚಯಿಸುವ ಕೆಲಸವನ್ನು ಪ್ರಧಾನಿಗಳು ಮಾಡುತ್ತಿದ್ದಾರೆ ಎಂದರು.

    ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆನ್‌ಲೈನ್ ಮೂಲಕ ದೇಶದ ವಿವಿಧಡೆ ಒಟ್ಟು 600 ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳಿಗೆ ಚಾಲನೆ ನೀಡಿದ್ದಾರೆ. ಈ ಕೇಂದ್ರಗಳಲ್ಲಿ ರೈತರಿಗೆ ಎಲ್ಲ ಕೃಷಿ ಯೋಜನೆಗಳ ಮಾಹಿತಿ ಲಭ್ಯವಾಗುತ್ತದೆ. ಈ ಕೇಂದ್ರದಲ್ಲಿ ರೈತರಿಗೆ ಅಗತ್ಯವಿರುವ ಎಲ್ಲ ಮಾಹಿತಿ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಯೂರಿಯಾ ಗೊಬ್ಬರವನ್ನು ಉನ್ನತೀಕರಣಗೊಳಿಸಿ ನ್ಯಾನೋ ಯೂರಿಯಾ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿದೆ.

    ಈ ನ್ಯಾನೋ ಯೂರಿಯಾ ರೈತರಿಗೆ ಅನುಕೂಲಕರವಾಗಲಿದೆ. ಅದರಂತೆ ಮಣ್ಣು ಪರೀಕ್ಷೆ , ಮಾರುಕಟ್ಟೆಯ ಮಾಹಿತಿ, ಬಿತ್ತನೆ ಬೀಜಗಳ ಗುಣಮಟ್ಟದ ಬಗ್ಗೆ ಸೇರಿದಂತೆ ಎಲ್ಲ ಮಾಹಿತಿ ಈ ಕೇಂದ್ರದಲ್ಲಿ ಲಭ್ಯವಾಗಲಿದೆ ಎಂದರು. ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರವು ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯ 5.38 ಲಕ್ಷ ರೈತರಿಗೆ 11ನೇ ಕಂತಿನಲ್ಲಿ 107 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ರೈತರು ಉತ್ಪನ್ನಗಳಿಗೆ ಉತ್ತಮ ದರ ಪಡೆದುಕೊಳ್ಳಲು ನಿರಂತರವಾಗಿ ಮಾರುಕಟ್ಟೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

    ಪಾರಾದೀಪ ಫಾಸ್ಪೇಟ್ ಲಿ.ಕಂಪನಿಯ ಪ್ರಾದೇಶಿಕ ಮಾರುಕಟ್ಟೆ ಅಧಿಕಾರಿ ಗಣೇಶ ಹೆಗಡೆ, ಬೇಸಾಯ ತಜ್ಞ ಡಾ.ಬಿ.ಜಿ.ವಿಶ್ವನಾಥ, ಪಾಲಿಕೆ ಸದಸ್ಯೆ ರೇಷ್ಮಾ ಪಾಟೀಲ, ಕಿಸಾನ್ ಸಮೃದ್ದಿ ಕೇಂದ್ರದ ಶಾಂತಿನಾಥ ಕಲಮನಿ, ರೋಹನ ಕಲಮನಿ, ಆರ್.ನಾರಾಯಣ ಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts