More

    ರಟ್ಟಿಹಳ್ಳಿ ತಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಇಂದು

    ರಟ್ಟಿಹಳ್ಳಿ: ಹಿರೇಕೆರೂರು ತಾಲೂಕು ವಿಭಜನೆಯಿಂದಾಗಿ ರಚನೆಯಾದ ರಟ್ಟಿಹಳ್ಳಿ ತಾಲೂಕಿನ ತಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜು. 10ರಂದು ಚುನಾವಣೆ ನಡೆಯಲಿದ್ದು, ಎರಡೂ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯುವುದು ಬಹುತೇಕ ಖಚಿತವಾಗಿದೆ.

    ಈ ಮೊದಲು ಹಿರೇಕೆರೂರು ತಾಲೂಕಿನಲ್ಲಿ ಒಟ್ಟು 22 ತಾ.ಪಂ. ಕ್ಷೇತ್ರಗಳಿದ್ದವು. ರಟ್ಟಿಹಳ್ಳಿಯನ್ನು ಹೊಸ ತಾಲೂಕನ್ನಾಗಿ ಘೊಷಿಸಿದ ನಂತರ 11 ಕ್ಷೇತ್ರಗಳು ರಟ್ಟಿಹಳ್ಳಿ ತಾ.ಪಂ. ವ್ಯಾಪ್ತಿಗೆ ಬಂದಿವೆ. ರಟ್ಟಿಹಳ್ಳಿ, ಕುಡಪಲಿ, ಶಿರಗಂಬಿ, ಮಾಸೂರು, ಮಕರಿ, ಕಡೂರು, ಹಳ್ಳೂರು, ಹಿರೇಮೊರಬ, ನಾಗವಂದ, ತಡಕನಹಳ್ಳಿ, ಹುಲ್ಲತ್ತಿ ಕ್ಷೇತ್ರಗಳು ರಟ್ಟಿಹಳ್ಳಿ ವ್ಯಾಪ್ತಿಗೆ ಒಳಪಟ್ಟಿವೆ. ನೂತನ ತಾಲೂಕು ರಚನೆಯಾಗಿ 2 ವರ್ಷಗಳ ಬಳಿಕ ಮೊದಲ ಬಾರಿಗೆ ತಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 10 ತಿಂಗಳ ಅಧಿಕಾರವಧಿ ಉಳಿದಿದೆ.

    ಮೀಸಲಾತಿ: ರಟ್ಟಿಹಳ್ಳಿ ತಾ.ಪಂ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎಗೆ ಮತ್ತು ಉಪಾಧ್ಯಕ್ಷ ಸ್ಥಾನ ಅನುಸೂಚಿತ ಪಂಗಡಕ್ಕೆ ಮೀಸಲಾಗಿದೆ. ಹಾವೇರಿ ಉಪ ವಿಭಾಗಾಧಿಕಾರಿಯು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ನಾಮಪತ್ರ ಸಲ್ಲಿಕೆ, ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯುವಿಕೆ, ನಂತರ ಅವಶ್ಯವಿದ್ದಲ್ಲಿ 1-10ಕ್ಕೆ ಚುನಾವಣೆ ನಡೆಯಲಿದೆ.

    ಬಿಜೆಪಿಯ 10 ಸದಸ್ಯರು: ತಾಪಂಗೆ ಚುನಾವಣೆ ನಡೆದಾಗ 5 ಸದಸ್ಯರು ಬಿಜೆಪಿಯಿಂದ ಮತ್ತು 6 ಜನ ಕಾಂಗ್ರೆಸ್​ನಿಂದ ಆಯ್ಕೆಯಾಗಿದ್ದರು. ಇತ್ತೀಚಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಮತ್ತು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಅವರ ಸಮ್ಮುಖದಲ್ಲಿ ಕಾಂಗ್ರೆಸ್​ನ ಆರು ತಾಪಂ ಸದಸ್ಯರಲ್ಲಿ ಐವರು ಬಿಜೆಪಿಗೆ ಸೇರಿದ್ದಾರೆ. ಹೀಗಾಗಿ, ಬಿಜೆಪಿ ಸದಸ್ಯರ ಸಂಖ್ಯೆ 10ಕ್ಕೇರಿದೆ. ರಟ್ಟಿಹಳ್ಳಿ ತಾ.ಪಂ. ಕ್ಷೇತ್ರದ ಸದಸ್ಯ ಮಹಬೂಬಸಾಬ್ ಮುಲ್ಲಾ ಅವರು ಕಾಂಗ್ರೆಸ್​ನಿಂದ ಆಯ್ಕೆಯಾಗಿದ್ದು ಪಕ್ಷದಲ್ಲಿಯೇ ಉಳಿದಿದ್ದಾರೆ.

    ಅವಿರೋಧ ಆಯ್ಕೆ ಖಚಿತ: ಮೀಸಲಾತಿ ಅನ್ವಯ ಅಧ್ಯಕ್ಷ ಸ್ಥಾನಕ್ಕೆ ಮಾಸೂರಿನ ಬಂಗಾರಪ್ಪ ಇಕ್ಕೇರಿ ಮತ್ತು ಹುಲ್ಲತ್ತಿ ತಾ.ಪಂ. ಕ್ಷೇತ್ರದ ದಿಳ್ಳೆಪ್ಪ ಹಳ್ಳಳ್ಳಿ ಆಕಾಂಕ್ಷಿಗಳಾಗಿದ್ದಾರೆ. ಪಕ್ಷದ ಮುಖಂಡರು ಇಬ್ಬರನ್ನೂ ಸಮಾಧಾನಪಡಿಸಲು ತಲಾ 5 ತಿಂಗಳ ಅವಧಿಗೆ ಅಧಿಕಾರ ಹಂಚಿಕೆ ಮಾಡುವ ಸಾಧ್ಯತೆ ಇದೆ. ಉಪಾಧ್ಯಕ್ಷ ಸ್ಥಾನಕ್ಕೆ ಮಕರಿ ಕ್ಷೇತ್ರದ ಅಭ್ಯರ್ಥಿ ಭರಮಪ್ಪ ಯಲೆದಹಳ್ಳಿ ಮತ್ತು ನಾಗವಂದ ಕ್ಷೇತ್ರದ ಸುಜಾತಾ ಕೊಟಗಿಮನಿ ಅಕಾಂಕ್ಷಿಗಳಾಗಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಅಕಾಂಕ್ಷಿಗಳು ಪಕ್ಷದ ಮುಖಂಡರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

    ರಟ್ಟಿಹಳ್ಳಿ ನೂತನ ತಾ.ಪಂ. ಅಸ್ತಿತ್ವಕ್ಕೆ ಬಂದಿರುವುದು ತಾಲೂಕಿನ ಜನತೆಯಲ್ಲಿ ಸಂತಸ ಉಂಟು ಮಾಡಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಇದುವರೆಗೆ ಯಾರನ್ನೂ ಆಯ್ಕೆ ಮಾಡಿಲ್ಲ. ಪಕ್ಷದ ಮುಖಂಡರೊಂದಿಗೆ ರ್ಚಚಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜು. 10ರಂದು ಆಯ್ಕೆ ಮಾಡಲಾಗುತ್ತದೆ.
    | ಬಿ.ಸಿ.ಪಾಟೀಲ, ಕೃಷಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts