More

    ರಂಗಮಂದಿರ, ಭವನಗಳಿಗೆ ಬಾಡಿಗೆ ನಿಗದಿ

    ಬೆಳಗಾವಿ: ವಡಗಾವಿಯಲ್ಲಿ ನಿರ್ಮಿಸಿರುವ ಸುವರ್ಣ ಕರ್ನಾಟಕ ಗಡಿ ಕನ್ನಡ ಭವನವನ್ನು ಮೂರು ತಿಂಗಳಲ್ಲಿ ನವೀಕರಣಗೊಳಿಸಲಾಗುವುದು. ಅಲ್ಲದೆ, ರಂಗಮಂದಿರ, ಭವನಗಳ ನಿರ್ವಹಣೆಗಾಗಿ ಬಾಡಿಗೆ ದರ ನಿಗದಿ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

    ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ 67ನೇ ರಾಜ್ಯೋತ್ಸವದ ವೇದಿಕೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿಭಾಗದ ಪ್ರದೇಶದಲ್ಲಿ ಕನ್ನಡ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಬೆಳಗಾವಿಯಲ್ಲಿ ಗಡಿ ಕನ್ನಡ ಭವನ ನಿರ್ಮಿಸಲಾಗಿತ್ತು. ಆದರೆ, ಸಮರ್ಪಕವಾಗಿ ಬಳಕೆ, ನಿರ್ವಹಣೆ ಇಲ್ಲದೆ ಭವನ ಹಾಳಾಗಿದೆ. ಇದೀಗ ಭವನ ನವೀಕರಣ ಕಾಮಗಾರಿ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದಕ್ಕಾಗಿ ಹೆಚ್ಚುವರಿ ಅನುದಾನ ಕೂಡ ಬಿಡುಗಡೆ ಮಾಡಲಾಗುವುದು ಎಂದರು.

    ಬೆಳಗಾವಿ ನಗರ ಸೇರಿದಂತೆ ವಿವಿಧ ಕಡೆ ಸರ್ಕಾರಿ ರಂಗಮಂದಿರ, ಭವನಗಳನ್ನು ನಿರ್ಮಿಸಲಾಗಿದೆ. ಆದರೆ, ಅನುದಾನ ಸಮಸ್ಯೆ ಇತರೆ ಕಾರಣಗಳಿಂದಾಗಿ ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಭವನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಬಾಡಿಗೆ ದರ ನಿಗದಿ ಪಡಿಸುವ ಕ್ರಮ ವಹಿಸಿದೆ. ಕನ್ನಡ ಪರ ಕಾರ್ಯಕ್ರಮಗಳಿಗೆ, ಖಾಸಗಿ ಕಾರ್ಯಕ್ರಮಗಳಿಗೆ ಪ್ರತ್ಯೇಕ ದರ ನಿಗದಿ ಪಡಿಸಲಾಗುವುದು ಎಂದರು. ಬೆಳಗಾವಿ ಮಹಾನಗರ ಸೇರಿದಂತೆ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಹಾಳಾಗಿರುವ ರಸ್ತೆಗಳನ್ನು ಡಿಸೆಂಬರ್ 10ರ ಒಳಗಾಗಿ ದುರಸ್ತಿಗೊಳಿಸಲು ಸೂಚನೆ ನೀಡಲಾಗಿದೆ. ಕೆಲ ಭಾಗಗಳಲ್ಲಿ ರಸ್ತೆಗಳನ್ನು ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಹೆಚ್ಚುವರಿ ಅನುದಾನವನ್ನು ಜಿಲ್ಲಾಡಳಿತಕ್ಕೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಒಬಿಸಿ ಮೀಸಲಾತಿ ಸೇರಿದಂತೆ ಕೆಲ ಕಾರಣಾಂತರಗಳಿಂದಾಗಿ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಮೀಸಲಾತಿ ಪ್ರಕರಣ ವಿಚಾರಣೆ ಹಂತದಲ್ಲಿರುವ ಹಿನ್ನೆಲೆಯಲ್ಲಿ ಮೇಯರ್ ಆಯ್ಕೆ ವಿಳಂಬವಾಗಿದೆ. ವಿನಃ ರಾಜಕೀಯ ಕಾರಣಗಳಿಂದ ಅಲ್ಲ. ಚಳಿಗಾಲ ಅಧಿವೇಶನದ ಒಳಗಾಗಿ ಮೇಯರ್ ಆಯ್ಕೆ ಮಾಡಲಾಗುವುದು ಎಂದರು. ಸಂಸದೆ ಮಂಗಲ ಅಂಗಡಿ, ಶಾಸಕ ಅನಿಲ ಬೆನಕೆ, ಡಿಸಿ ನಿತೇಶ ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts