More

    ರಂಗಭೂಮಿಗೆ ಆಧುನಿಕ ಸ್ಪರ್ಶ ನೀಡಿ

    ಬೆಳಗಾವಿ: ನಾಟಕಗಳನ್ನು ಆಡುವ ಮತ್ತು ನೋಡುವ ಅಭಿರುಚಿ ಜನರಲ್ಲಿ ಕಡಿಮೆಯಾಗುತ್ತಿದೆ. ಒಂದು ಕಾಲದಲ್ಲಿ ನಾಟಕಗಳು ಮನರಂಜನೆಯ ಮಾಧ್ಯಮಗಳಾಗಿದ್ದವು. ನಾಟಕಗಳ ಗತವೈಭವ ಮರುಕಳಿಸಬೇಕಾದರೆ ರಂಗಭೂಮಿಗೆ ಆಧುನಿಕತೆಯ ಸ್ಪರ್ಶ ನೀಡಿ ಯುವ ಜನತೆಯನ್ನು ರಂಗಭೂಮಿ ಕಡೆಗೆ ಸೆಳೆಯುವ ಕಾರ್ಯ ನಡೆಯಬೇಕಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಪದ್ಮಸಾಲಿ ಹೇಳಿದರು.

    ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಕನ್ನಡ-ಇಂಗ್ಲಿಷ್ ಮತ್ತು ಹಿಂದಿ ವಿಭಾಗಗಳ ಭಾಷಾಸಂಗಮದ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ‘ನಾಟಕದ ಓದು-ರಚನೆ-ಅಭಿನಯದ’ ಕುರಿತು ವಿಶೇಷ ಉಪನ್ಯಾಸ, ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಖ್ಯಾತ ನಾಟಕಕಾರ ಡಾ. ಡಿ.ಎಸ್.ಚೌಗಲೆ ಮಾತನಾಡಿ, ಉತ್ತರ ಕರ್ನಾಟಕವು ಸಣ್ಣಾಟ-ದೊಡ್ಡಾಟಗಳ ಮೂಲ ನೆಲವಾಗಿದೆ. ಒಂದು ಕಾಲದಲ್ಲಿ ಪ್ರತಿ ಹಳ್ಳಿಗಳಲ್ಲಿಯೂ ನಾಟಕದ ತಂಡಗಳಿರುತ್ತಿದ್ದವು. ಆದರೆ ಇಂದು ಈ ಭಾಗದ ಜನರಲ್ಲಿ ನಾಟಕದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಯಕ್ಷಗಾನಕ್ಕೆ ಸಿಗುತ್ತಿರುವ ಮಾನ್ಯತೆ ಇಂದು ಉತ್ತರ ಕರ್ನಾಟಕದ ಬೈಲಾಟಗಳಿಗೆ ಸಿಗುತ್ತಿಲ್ಲ. ದಕ್ಷಿಣ ಕರ್ನಾಟಕಕ್ಕೆ ಸೀಮಿತವಾದ ರಂಗಾಯಣದಂತಹ ನಾಟಕ ತರಬೇತಿ ಸಂಸ್ಥೆಯ ಶಾಖೆಗಳನ್ನು ಪ್ರತಿ ಜಿಲ್ಲೆಗಳಲ್ಲಿಯೂ ಆರಂಭಿಸಬೇಕು ಎಂದರು.
    ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ. ಶಂಕರ ತೇರದಾಳ ಮಾತನಾಡಿ, ನಾಟಕದಲ್ಲಿನ ಪೌರಾಣಿಕ-ಐತಿಹಾಸಿಕ ಪಾತ್ರಗಳು ಪರಕಾಯ ಪ್ರವೇಶ ಮಾಡಿಸಿ, ನಮ್ಮಲ್ಲಿ ಧಾರ್ಮಿಕ ಹಾಗೂ ಚಾರಿತ್ರಿಕ ಮೌಲ್ಯಗಳನ್ನು ಬೆಳೆಸುತ್ತವೆ. ನಾಟಕ ಆಡುವ ಮತ್ತು ನೋಡುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

    ಕನ್ನಡ ವಿಭಾಗದ ಮುಖ್ಯಸ್ಥ ಡಾ. ಹನುಮಂತಪ್ಪ ಸಂಜೀವಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಪೂಜಾ ಹಲ್ಯಾಳ ಸ್ವಾಗತಿಸಿದರು. ಕಲ್ಪನಾ ಮುಚ್ಚಂಡಿ ಪ್ರಾರ್ಥಿಸಿದರು. ಡಾ. ನಾರಾಯಣ ನಾಯ್ಕ ನಿರೂಪಿಸಿದರು. ಹಿಂದಿ ವಿಭಾಗದ ಮುಖ್ಯಸ್ಥ ಡಾ. ಸಂಜಯ ಕಾಂಬಳೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts