More

    ಯೋಜನಾ ವರದಿ ಪುಸ್ತಕ ಬಿಡುಗಡೆ

    ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿಗಳು ಸಿದ್ಧಪಡಿಸಿರುವ ಬ್ಯಾಂಕ್‌ಗಳ ವಹಿವಾಟು, ಯೋಜನೆಗಳು ಹಾಗೂ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ, ಕ್ರಿಯಾ ಯೋಜನೆಗಳಿಗೆ ಸಂಬಂಧಿಸಿದ ಯೋಜನಾ ವರದಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.


    ಅಮೆರಿಕದಲ್ಲಿ ನೆಲೆಸಿರುವ ಕೊಡ್ಲಿಪೇಟೆ ಮೂಲದ ಇಂಜಿನಿಯರ್ ಉಮಾಶಂಕರ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕೌಶಲ, ಚತುರತೆ, ಪ್ರತಿಭೆ ಇದ್ದಲ್ಲಿ ಏನನ್ನಾದರೂ ಸಾಧಿಸಬಹುದು. ಈ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿದ್ಯಾರ್ಥಿಗಳು ಬ್ಯಾಂಕ್, ಸರಕಾರ, ಸಂಘ, ಸಂಸ್ಥೆಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿ ಯೋಜನಾ ವರದಿ ತಯಾರಿಸಿ ಅದನ್ನು ಪುಸ್ತಕ ರೂಪದಲ್ಲಿ ಹೊರತಂದಿರುವುದು ಮೆಚ್ಚುವ ಸಂಗತಿ ಎಂದು ಹೇಳಿದರು.


    ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಎಸ್.ಚಂದ್ರಮೌಳಿ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದರು. ಕಾರ್ಯದರ್ಶಿ ಕೆ.ವಿ.ಪರಮೇಶ್, ಗೌರವಾಧ್ಯಕ್ಷ ಶಂಭುಲಿಂಗಪ್ಪ, ಉಪಾಧ್ಯಕ್ಷ ಡಾ.ಉದಯ್‌ಕುಮಾರ್, ಪ್ರಾಂಶುಪಾಲ ಎಂ.ಆರ್.ನಿರಂಜನ್, ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.

    ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂವಾದ ಏರ್ಪಡಿಸಲಾಗಿತ್ತು. ಇಂಜಿನಿಯರ್ ಉಮಾಶಂಕರ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

    ಯೋಜನಾ ವರದಿ: ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಕಾವ್ಯಾ ಯೋಗೇಂದ್ರ ಅವರ ಮಾರ್ಗದರ್ಶನದಲ್ಲಿ ಅಂತಿಮ ಬಿಕಾಂ ವಿದ್ಯಾರ್ಥಿಗಳು ಕೊಡ್ಲಿಪೇಟೆ ಮತ್ತು ಸುತ್ತಮುತ್ತಲಿನ ವಿವಿಧ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಅಲ್ಲಿನ ವಹಿವಾಟು, ಲಾಭ, ನಷ್ಟ ಮತ್ತಿತರ ಅಂಶಗಳನ್ನು ಒಳಗೊಂಡಂತೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿದ್ದಾರೆ. ಇದರೊಂದಿಗೆ ಕೊಡ್ಲಿಪೇಟೆ ಮತ್ತು ಬೆಸೂರು ಗ್ರಾ.ಪಂ. ಕಚೇರಿ ಹಾಗೂ ಕೃಷಿ ಸಂಪರ್ಕ ಕೇಂದ್ರಗಳಿಗೆ ತೆರಳಿ ಅಧಿಕಾರಿಗಳಿಂದ ಸರಕಾರದ ಕಾರ್ಯಕ್ರಮಗಳು, ಯೋಜನೆ ಅನುಷ್ಠಾನಗೊಳಿಸುವುದು ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸಂಗ್ರಹಿಸಿರುವ ಮಾಹಿತಿಯನ್ನು ಯೋಜನಾ ವರದಿಯಲ್ಲಿ ಅಡಕಗೊಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts