More

    ಯೋಗೀಶ್ ಗೌಡ ಕೊಲೆಗೆ 2 ಬಾರಿ ವಿಫಲ ಯತ್ನ !

    ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ ಗೌಡ ಕೊಲೆ ಪ್ರಕರಣದ ಹಲವು ಕುತೂಹಲಕಾರಿ ರಹಸ್ಯಗಳು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಬಹಿರಂಗಗೊಂಡಿದ್ದು, ಆರೋಪಿಗಳು ಹತ್ಯೆ ನಡೆಸಲು ಎರಡು ಬಾರಿ ವಿಫಲ ಯತ್ನ ನಡೆಸಿದ್ದ ಸಂಗತಿ ಉಲ್ಲೇಖವಾಗಿದೆ.

    ಧಾರವಾಡದ ಬಸವರಾಜ ಶಿವಪ್ಪ ಮುತ್ತಗಿ, ವಿಕ್ರಂ ಬಳ್ಳಾರಿ, ಕೀರ್ತಿಕುಮಾರ್ ಬಸರಾಜ್ ಕುರಹಟ್ಟಿ, ಸಂದೀಪ್ ಸವದತ್ತಿ, ವಿನಾಯಕ ಕಟಗಿ, ಮಹಬಲೇಶ್ವರ ಹೊಂಗಲ್, ಸಂತೋಷ ಸವದತ್ತಿ, ಎಂ.ದಿನೇಶ, ಎಸ್.ಅಶ್ವತ್ಥ್, ಕೆ.ಎಸ್.ಸುನೀಲ್, ನಜೀರ್ ಅಹಮದ್, ಶಾನ್ವಾಜ್,ಕೆ. ನೂತನ್, ಸಿ.ಹರ್ಷಿತ್ ಹೆಸರನ್ನು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ. ರಾಜಕೀಯ ದುರುದ್ದೇಶದಿಂದ ಕೊಲೆ ನಡೆದಿದೆ ಎಂದು ಸಿಬಿಐ ತಿಳಿಸಿದೆ.

    ಸಾರಸ್ವತಪುರದಲ್ಲಿ ಕೊಲೆಗೆ ಸಂಚು: ಮೊದಲನೇ ಆರೋಪಿ ಬಸವರಾಜ್ ಮುತ್ತಗಿ 2016 ಏಪ್ರಿಲ್ ಮತ್ತು ಮೇ ತಿಂಗಳ ನಡುವೆ ಹಲವಾರು ಬಾರಿ ಬೆಂಗಳೂರಿಗೆ ಬಂದು ದಿನೇಶ ಮತ್ತು ಅಶ್ವತ್ಥ್​ನನ್ನು ಭೇಟಿಯಾಗಿ ಯೋಗೀಶ ಗೌಡ ಕೊಲೆ ಮಾಡುವ ಬಗ್ಗೆ ರ್ಚಚಿಸಿದ್ದ. ದಿನೇಶ ಹಾಗೂ ಅಶ್ವತ್ಥ್ ತಮ್ಮ ಸಹಚರರಾದ ಸುನೀಲ್, ನೂತನ್, ನಜೀರ್ ಅಹಮದ್, ಶಾನ್ವಾಜ್​ನ ನೆರವು ಕೋರಿ ಇವರನ್ನು ಧಾರವಾಡಕ್ಕೆ ಕರೆ ತಂದಿದ್ದರು. ಏಪ್ರಿಲ್ 1ರಿಂದ ಜೂನ್ 13ರ ವರೆಗೆ ಬಸವರಾಜ್ ಮುತ್ತಗಿ ಒಟ್ಟು 322 ಬಾರಿ ದಿನೇಶಗೆ ಕರೆ ಮಾಡಿದ್ದ.

    ಧಾರವಾಡದ ಸಾರಸ್ವತಪುರದಲ್ಲಿ ಆರೋಪಿ ವಿನಯ ಕಟಗಿ ಅಕ್ರಮವಾಗಿ ಹೊಂದಿದ್ದ 14 ಗುಂಟೆ ವಿಸ್ತೀರ್ಣದ ಹಳೆಯ ಮನೆಯೊಂದರಲ್ಲಿ ಬಸವರಾಜ್ ಮುತ್ತಗಿ ಸೇರಿ 14 ಆರೋಪಿಗಳು ಕೊಲೆಗೆ ಸಂಚು ರೂಪಿಸಿದ್ದರು. ಆದರೆ, ಜೂನ್ ಮೊದಲ ವಾರ ಯೋಗೀಶ ಗೌಡ ಅವರನ್ನು ಹಿಂಬಾಲಿಸಿ ಕೊಲೆಗೆ ವಿಫಲ ಯತ್ನ ನಡೆಸಲಾಗಿತ್ತು. ನಂತರ ದಿನೇಶ ಸೇರಿ 6 ಮಂದಿ ಆರೋಪಿಗಳು ವಿಕ್ರಂ ಬಳ್ಳಾರಿ ಮತ್ತು ಸಂದೀಪ ಜತೆ ತವೇರಾ ವಾಹನದಲ್ಲಿ ದಾಂಡೇಲಿಗೆ ಹೋಗಿ ಹಾರ್ನ್​ಬಿಲ್ ರೆಸಾರ್ಟ್​ನಲ್ಲಿ ತಂಗಿದ್ದರು. ಇದಾದ ಬಳಿಕ ಬಸವರಾಜ್ ಮುತ್ತಗಿ ಧಾರವಾಡದ ಅಂಕಿತ ರೆಸಿಡೆನ್ಸಿಯಲ್ಲಿ ರೂಂ ಬುಕ್ ಮಾಡಿ ಆರೋಪಿಗಳನ್ನು ಅಲ್ಲಿಗೆ ಕರೆಸಿದ್ದ. ಜೂನ್ 12ರಂದು ಎರಡನೇ ಭಾರಿ ಯೋಗೀಶ ಗೌಡನನ್ನು ಹತ್ಯೆ ನಡೆಸಲು ಇಲ್ಲಿ ಸಂಚು ರೂಪಿಸಲಾಗಿತ್ತು.

    ಕೂದಲೆಳೆ ಅಂತರದಲ್ಲಿ ಪಾರು: 2016 ಜೂನ್ 13ರಂದು ಆರು ಮಂದಿ ಆರೋಪಿಗಳು ಮತ್ತೆ ಸರಸ್ವತಪುರದ ಹಳೇ ಮನೆಯಲ್ಲಿ ಸೇರಿ ಈ ಬಗ್ಗೆ ಸಂಚು ರೂಪಿಸಿದ್ದರು. ಇಲ್ಲಿದ್ದುಕೊಂಡೆ ಯೋಗೀಶ ಗೌಡ ಅವರ ಚಲನವಲನ ಗಮನಿಸುತ್ತಿದ್ದರು. ಯೋಗೀಶ ಗೌಡ ಉದಯ ಜಿಮ್ಲ್ಲಿ ಬೆಳಗ್ಗೆ 7.30 ರಿಂದ 9.30ರ ವರೆಗೆ ತರಬೇತಿ ಪಡೆಯಲು ಬರುತ್ತಿದ್ದ ವಿಚಾರವೂ ಇವರಿಗೆ ತಿಳಿದಿತ್ತು. 2016 ಜೂನ್ 14ರಂದು ಬೆಳಗ್ಗೆ 7.23ರಲ್ಲಿ ಸಂತೋಷ ಸವದತ್ತಿ ಮತ್ತು ಅಶ್ವತ್ಥ್ ಮಾರಾಕಾಸ್ತ್ರಗಳೊಂದಿಗೆ ಹಿರೋಹೊಂಡ ಸ್ಪ್ಲೆಂಡರ್ ಬೈಕ್​ನಲ್ಲಿ ಉದಯ ಜಿಮ್ ಬಳಿ ಬಂದಿದ್ದರು. ನಜೀರ್ ಅಹಮದ್ ಮತ್ತೋರ್ವನ ಜತೆ ಮತ್ತೊಂದು ದ್ವಿಚಕ್ರ ವಾಹನದಲ್ಲಿ ಮಾರಕಾಸ್ತ್ರದೊಂದಿಗೆ ಇಲ್ಲಿಗೆ ಬಂದಿದ್ದ. ಆರೋಪಿ ದಿನೇಶ ಹಾಗೂ ನೂತನ್ ಸ್ಥಳದಲ್ಲಿ ಕೊಲೆ ಮಾಡಲು ರೆಡಿಯಾಗಿ ನಿಂತಿದ್ದರು. ಆ ದಿನ 7.34ಕ್ಕೆ ಇನ್ನೋವಾದಲ್ಲಿ ಬಂದಿದ್ದ ಯೋಗೀಶ ಗೌಡ ಕೂಡಲೆ ಹಿಂತಿರುಗಿದ ಹಿನ್ನೆಲೆಯಲ್ಲಿ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದರು.

    ಇನ್ನಷ್ಟು ಜನ ಶಾಮೀಲು?: ಸಿಸಿಕ್ಯಾಮರಾ ಹಾಗೂ ಆರೋಪಿಗಳ ಮೊಬೈಲ್ ಕರೆಗಳ ಆಧಾರದ ಮೇಲೆ ತನಿಖೆ ನಡೆಸಿದಾಗ ಸಿಬಿಐಗೆ ಆರೋಪಿಗಳ ಸುಳಿವು ಸಿಕ್ಕಿದೆ. ಜಿಮ್ಲ್ಲಿದ್ದ ಪ್ರತ್ಯಕ್ಷದರ್ಶಿಗಳಿಂದಲೂ ಮಾಹಿತಿ ಕಲೆ ಹಾಕಿದ್ದರು. ಪ್ರಭಾವಿ ರಾಜಕಾರಣಿಗಳ ಕೈವಾಡವಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಇನ್ನಷ್ಟು ಜನ ಶಾಮೀಲಾಗಿದ್ದಾರೆ ಎನ್ನಲಾಗುತ್ತಿದೆ. ಕೊಲೆ ನಡೆಸಿದ ಬಳಿಕ ಶರಣಾದವರ ವಿರುದ್ಧ ಮಾತ್ರ ಪೊಲೀಸರು ಕ್ರಮ ಕೈಗೊಂಡಿದ್ದರು. ಇದೀಗ ಸಿಬಿಐ ಪೊಲೀಸ್ ಅಧಿಕಾರಿಗಳನ್ನು ವಿಚಾರಣೆ ನಡೆಸಿ ಈ ಬಗ್ಗೆ ಪ್ರಶ್ನಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts