More

    ಯೋಗದಿಂದ ಆರೋಗ್ಯಯುತ ಸಮಾಜ ನಿರ್ಮಾಣ

    ಹುಬ್ಬಳ್ಳಿ: ಯೋಗದಿಂದ ಮಾತ್ರ ಆರೋಗ್ಯಯುತ ಭಾರತ ನಿರ್ಮಾಣ ಸಾಧ್ಯ ಎಂದು ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

    ವಿಆರ್​ಎಲ್ ಲಾಜಿಸ್ಟಿಕ್ಸ್, ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’, ದಿಗ್ವಿಜಯ 24/7 ನ್ಯೂಸ್ ಚಾನೆಲ್, ಪವರ್ ನ್ಯೂಸ್ ಆಪ್ ಹಾಗೂ ಪತಂಜಲಿ ಯೋಗಪೀಠದ ಸಹಯೋಗದೊಂದಿಗೆ ಜ. 30ರಿಂದ ಫೆ. 3ರವರೆಗೆ ಇಲ್ಲಿನ ರೈಲ್ವೆ ಮೈದಾನದಲ್ಲಿ ಆಯೋಜಿಸಿರುವ ಉಚಿತ ಬೃಹತ್ ಯೋಗ ಶಿಬಿರದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಸಾರ್ವಜನಿಕರಿಗೆ ಆಮಂತ್ರಣ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು. ಯೋಗದಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಯುವಕರು ಆರೋಗ್ಯವಂತರಾದರೆ ದೇಶ ಆರೋಗ್ಯಯುತ ಮತ್ತು ಬಲಿಷ್ಠವಾಗುತ್ತದೆ ಎಂದರು.

    ಬಾಬಾ ರಾಮದೇವ ಗುರೂಜಿ ಅವರು ಯೋಗಕ್ಕೆ ಹೊಸ ಮಾರ್ಗ ತೋರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಡಿ ವಿಶ್ವವನ್ನು ಯೋಗದಡಿ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮುಸ್ಲಿಂ ರಾಷ್ಟ್ರಗಳೂ ಯೋಗಾಭ್ಯಾಸದಲ್ಲಿ ತೊಡಗಿವೆ ಎಂದು ಹೇಳಿದರು.

    ಯುವಕರು ಉತ್ತಮ ಆರೋಗ್ಯದ ಜತೆಗೆ ಉದ್ಯಮಶೀಲರಾಗಬೇಕು. ಸಣ್ಣದಾಗಿ ಆರಂಭಿಸಿ ಬೃಹತ್ ಲಾರಿ ಉದ್ಯಮಿಯಾದ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರನ್ನು ಯುವಕರು ಮಾದರಿಯನ್ನಾಗಿಸಿಕೊಳ್ಳಬೇಕು. ಡಾ. ವಿಜಯ ಸಂಕೇಶ್ವರ ಅವರಿಗೆ ಪದ್ಮಶ್ರೀ ಪುರಸ್ಕಾರ ಲಭಿಸುವ ಮೂಲಕ ರಾಜ್ಯದ ಘನತೆ ಹೆಚ್ಚಿದೆ ಎಂದು ಹೇಳಿದರು.

    ಯೋಗಪೀಠದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಮಾತನಾಡಿ, ಯೋಗದಿಂದ ದೈಹಿಕ ಹಾಗೂ ಮಾನಸಿಕ ಕ್ಷಮತೆ ಹೆಚ್ಚುತ್ತದೆ. ವಿದ್ಯಾರ್ಥಿ ದಿಸೆಯಿಂದಲೇ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಪತಂಜಲಿ ಯೋಗ ಪೀಠದ ಪ್ರಸನ್ನ ದೀಕ್ಷಿತ, ಯೋಗ ಶಿಬಿರದಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

    ಕನಕದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿ ದಂಡಿನ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ನಿರೋಗಿಗಳಾಗಬೇಕು. ನಿತ್ಯ ಯೋಗಾಭ್ಯಾಸದಿಂದ ರೋಗಗಳು ಬರುವುದಿಲ್ಲ ಎಂದು ತಿಳಿಸಿದರು.

    ಯೋಗಾಭ್ಯಾಸದ ಮೂಲಕ ಸಾತ್ವಿಕ ಸಮಾಜ ರಚನೆಗೆ ಮುಂದಾಗಬೇಕು. ಹುಬ್ಬಳ್ಳಿ-ಧಾರವಾಡದಲ್ಲಿ ಯೋಗದ ವಿದ್ಯುತ್ ಸಂಚಾರವಾಗಬೇಕು ಎಂದು ಯೋಗಗುರು ವಿನಾಯಕ ತಲಗೇರಿ ಹೇಳಿದರು.

    ನೈಋತ್ಯ ರೈಲ್ವೆ ವಲಯ ಮಹಾಪ್ರಬಂಧಕ ಎ.ಕೆ. ಸಿಂಗ್, ಹುಬ್ಬಳ್ಳಿ ಡಿಆರ್​ಎಂ ಅರವಿಂದ ಮಾಲಖೇಡ, ಯೋಗಪೀಠದ ಜಿಲ್ಲಾ ಪ್ರಭಾರಿ ಎಂ.ಡಿ. ಪಾಟೀಲ, ಮಹಿಳಾ ಘಟಕದ ರಾಜ್ಯ ಪ್ರಭಾರಿ ಆರತಿ ಕಾನಗೂ, ಕನಕದಾಸ ಕಾಲೇಜ್ ಪ್ರಾಚಾರ್ಯ ಸಂದೀಪ ಬೂದಿಹಾಳ ಮತ್ತಿತರರಿದ್ದರು. ಇದೇ ಸಂದರ್ಭದಲ್ಲಿ ಸಾಮೂಹಿಕ ತಾಡಾಸನ ಅಭ್ಯಸಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts