More

    ಯುವ ರೈತರನ್ನು ಕೈ ಬಿಸಿ ಕರೆಯುತ್ತಿದೆ ಕೃಷಿ ಯಂತ್ರ ಮೇಳ


    ಮಡಿಕೇರಿ: ಪೊನ್ನಂಪೇಟೆ ಸಿಐಟಿ ಕಾಲೇಜು ವತಿಯಿಂದ ನ.5 ರ ವರೆಗೆ ರಾಜ್ಯ ಮಟ್ಟದ ಕೃಷಿ ಯಂತ್ರ ಮೇಳವನ್ನು ಕಾಲೇಜು ಆವರಣದಲ್ಲಿ ಆಯೋಜಿಸಿದ್ದು, ಯುವ ರೈತರನ್ನು ಕೈಬಿಸಿ ಕರೆಯುತ್ತಿದೆ. ಇಲ್ಲಿ 180 ಕ್ಕೂ ಹೆಚ್ಚು ಮಳಿಗೆಗಳು ಇದ್ದು, ಬಗೆಬಗೆಯ ವಸ್ತುಗಳ ಮಾರಾಟ ಮತ್ತು ರೈತರಿಗೆ ಉಪಯುಕ್ತ ಯಂತ್ರಗಳ ಪ್ರದರ್ಶನಕ್ಕೆ ಇಡಲಾಗಿದೆ.


    ಹವಾಮಾನ ವೈಪರೀತ್ಯದಿಂದ ಕಾಫಿ ಬೆಳೆಗಾರರು ಕಾಫಿ ಒಣಗಿಸಲು ಹರಸಾಹಸ ಪಡುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಅನುಕೂಲ ವಾಗುವಂತೆ ಕಾಫಿ ಡ್ರೈಯರ್ ತಯಾರಿಸಲಾಗಿದೆ. ಇದು ಕಾಫಿ ಬೆಳೆಗಾರರ ಗಮನ ಸೆಳೆಯುತ್ತಿದೆ.


    ಕಾರ್ಮಿಕರ ಕೊರತೆಯಿಂದ ಕಾಫಿ ಕೆಲಸಕ್ಕೆ ಹಿನ್ನೆಡೆಯಾಗುತ್ತಿದೆ. ಕಾಫಿ ಒಣಗಿದ ಮೇಲೆ ಅದರಲ್ಲಿನ ಕಸ ಕಡ್ಡಿಗಳನ್ನು ಬೇರ್ಪಡಿಸಿ ಚೀಲಕ್ಕೆ ತುಂಬಿಸುವುದು ದೊಡ್ಡ ಕೆಲಸ. ಇದನ್ನು ಸುಲಭಗೊಳಿಸಲು ಯಂತ್ರವೊಂದನ್ನು ಕಂಡು ಹಿಡಿಯಲಾಗಿದೆ. ದೊಡ್ಡ ಕಬ್ಬಿಣದ ಕೊಳವೆಗೆ ಮೇಲಿನ ಭಾಗದಲ್ಲಿ ಮೋಟಾರು ಅಳವಡಿಸಲಾಗಿದೆ. ಮೇಲಿನಿಂದ ಕಾಫಿಯನ್ನು ಹಾಕಿದರೆ ಮೋಟಾರಿನಿಂದ ಬರುವ ರಭಸದ ಗಾಳಿಗೆ ಕಸ, ಕಡ್ಡಿಗಳು ಬೇರ್ಪಡುತ್ತವೆ. ಕೊಳವೆಯ ಇನ್ನೊಂದು ತುದಿಯಲ್ಲಿ ಚೀಲವನ್ನು ಇರಿಸಿದರೆ ಕಾಫಿ ನೇರವಾಗಿ ಚೀಲಕ್ಕೆ ಹೋಗಿ ಬೀಳುತ್ತದೆ. ಕಡಿಮೆ ಕಾರ್ಮಿಕರ ಸಹಾಯದಿಂದ ಕೆಲಸ ಸಾಗುತ್ತದೆ.
    ಕಾಫಿಗೆ ಉತ್ತಮ ಬೆಲೆ ಬಂದ ಮೇಲೆ ಕೆಲವರು ಪಲ್ಪಿಂಗ್‌ನತ್ತ ಆಸಕ್ತಿ ತೋರುತ್ತಿದ್ದಾರೆ. ಆದರೆ ಸಾಂಪ್ರದಾಯಿಕ ಪಲ್ಪರ್ ಅಳವಡಿಕೆ ದುಬಾರಿ ಮತ್ತು ನಿರ್ವಹಣೆ ಕಷ್ಟ. ಇದನ್ನು ಮನಗಂಡು ಸಣ್ಣ ಪ್ರಮಾಣದ ಪಲ್ಪರ್ ಅನ್ನು ಅನ್ವೇಷಣೆ ಮಾಡಲಾಗಿದೆ. ಸಣ್ಣ ಕಾಫಿ ಬೆಳೆಗಾರರೂ ಇದನ್ನು ಖರೀದಿಸಬಹುದಾಗಿದೆ.


    ಇನ್ನು ಉತ್ತಮ ಗುಣಮಟ್ಟದ ಸೋಲಾರ್ ಬೇಲಿಗಳು, ಗೃಹ ನಿರ್ಮಾಣ ವಸ್ತುಗಳು, ದಿನ ಬಳಕೆ ಆಯುಧಗಳು, ತೋಟಕ್ಕೆ ನೀರು ಹಾಯಿಸಲು ಬೇಕಾದ ಅತ್ಯಾಧುನಿಕ ತಂತ್ರಜ್ಞಾನ ಸ್ಪ್ರಿಂಕ್ಲರ್, ಅಡಕೆ ಕೊಯ್ಲಿಗೆ ಮತ್ತು ಮದ್ದು ಬಿಡಲು ಉಪಯೋಗಿಸುವ ದೋಟಿಗಳು, ತೂಕ ಮಾಡಲು ಬಳಸುವ ತೂಕದ ಯಂತ್ರಗಳು, ಏಣಿ, ಹೂವು ಹಣ್ಣಿನ ಬೀಜಗಳು, ಅದೂ ಅಲ್ಲದೆ ತಿಂಡಿ-ತಿನಿಸು, ಬಟ್ಟೆ, ಗೃಹಬಳಕೆಯ ಮಳಿಗೆಗೂ ಜನರನ್ನು ಆಕರ್ಷಿಸುತ್ತಿದೆ.
    ಮತ್ತೊಂದು ಸ್ಟಾಲ್‌ನಲ್ಲಿ ರೈತರು ತಂದ ಮಣ್ಣನ್ನು ಅಲ್ಲಿಯೇ ಪರೀಕ್ಷಿಸಿ ಮಣ್ಣಿನ ಫಲವತ್ತತೆ ಮತ್ತು ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅವರ ಕಡೆಯಿಂದಲೇ ಮಣ್ಣಿಗೆ ಬೇಕಾದ ರಸಗೊಬ್ಬರವನ್ನು ನೀಡಲಾಗುತ್ತದೆ. ಒಟ್ಟಿನಲ್ಲಿ ಕೊಡಗಿನಲ್ಲಿ ಆಯೋಜಿತ ಮೊದಲ ರಾಜ್ಯಮಟ್ಟದ ಯಂತ್ರ ಮೇಳ ಯುವ ಜನತೆಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts