More

    ಯುವ ದಸರಾದಲ್ಲಿ ಅಪ್ಪುಗೆ ನಮನ

    ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಾಡಹಬ್ಬ ದಸರೆಯ ಪ್ರಮುಖ ಆಕರ್ಷಣೆಯಾಗಿರುವ ಯುವ ದಸರಾ ಸೆ.28 ರಿಂದ 6 ದಿನಗಳ ಕಾಲ ಸಂಜೆ 6 ರಿಂದ ರಾತ್ರಿ 10 ರವರೆಗೆ ಅದ್ದೂರಿಯಾಗಿ ನಡೆಯಲಿದೆ. ಏಳು ದಿನಗಳ ಬದಲಿಗೆ 6 ದಿನಕ್ಕೆ ಕಾರ್ಯಕ್ರಮ ಕಡಿತಗೊಂಡಿದೆ.

    ಮೊದಲ ದಿನ ‘ಅಪ್ಪು ನಮನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಶೇಷ ಆಹ್ವಾನಿತರಾಗಿ ದಿ.ನಟ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಹಾಗೂ ನಟ ಶಿವರಾಜ್‌ಕುಮಾರ್ ಆಗಮಿಸಲಿದ್ದಾರೆ. ಬಳಿಕ ಸಂಜೆ 7ಕ್ಕೆ ಹಿರಿಯ ಗಾಯಕರಾದ ಗುರುಕಿರಣ್, ವಿಜಯಪ್ರಕಾಶ್ ಅಪ್ಪು ಅವರಿಗೆ ಸಂಗೀತ ನಮನ ಅರ್ಪಿಸಲಿದ್ದಾರೆ. ಈ ಗಾಯಕರಿಗೆ ಬಾಲಿವುಡ್ ಖ್ಯಾತ ಗಾಯಕ ಕುನಾಲ್ ಗಾಂಜಾವಾಲ್ ಜತೆಯಾಗಲಿದ್ದಾರೆ.


    29ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಸ್ಥಳೀಯ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ, ಪವನ್ ಡಾನ್ಸರ್ ಹಾಗೂ ಇತರರಿಂದ ನೃತ್ಯ ರೂಪಕ, ಹಿನ್ನೆಲೆ ಗಾಯಕಿ ಕನ್ನಿಕಾ ಕಪೂರ್ ಅವರಿಂದ ಸಂಗೀತ ರಸಸಂಜೆ.


    30ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮ, ಲೇಸರ್ ಆಕ್ಟ್ ಸಿಗ್ನೇಚರ್ ಗ್ರೂಪ್ ನೃತ್ಯ ತಂಡದಿಂದ ನೃತ್ಯ ರೂಪಕ, ಸ್ಯಾಂಡಲ್‌ವುಡ್ ನೈಟ್ ಜರುಗಲಿದೆ.


    ಅ.1ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಹಿನ್ನೆಲೆ ಗಾಯಕ ಸೋನು ನಿಗಮ್, ಗಾಯಕಿ ಡಾ.ಶಮಿತಾ ಮಲ್ನಾಡ್ ಅವರಿಂದ ಸಂಗೀತ ರಸಮಂಜರಿ. ಅ. 2ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಖ್ಯಾತ ಚಿತ್ರತಾರೆಯರಾದ ಹರ್ಷಿಕಾ ಪೂಣಚ್ಚ, ವಿಜಯರಾಘವೇಂದ್ರ ಅವರಿಂದ ಕನ್ನಡ ಸ್ಟಾರ್ ನೈಟ್ ಮತ್ತು ಗಾಯಕಿ ಮಂಗ್ಲಿ ಅವರಿಂದ ಸಂಗೀತ ರಸಮಂಜರಿ, ಗಾಯಕ ಅಮಿತ್ ತ್ರಿವೇದಿ ಅವರಿಂದ ಸಂಗೀತ ರಸಮಂಜರಿ ನಡೆಯಲಿದೆ.


    ಅ.3ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಸುಪ್ರಿಯಾ ರಾಮ್ ಮಹಿಳಾ ಬ್ಯಾಂಡ್ ತಂಡದವರಿಂದ ಪ್ರದರ್ಶನ, ಫ್ಯಾಷನ್ ಶೋ, ಗಾಯಕಿ ಸುನಿಧಿ ಚೌಹಾಣ್‌ರಿಂದ ಸಂಗೀತ ರಸಮಂಜರಿ ಕಾರ್ಯಕ್ರಮವಿದೆ.


    ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ಯುವ ದಸರಾ ಪೋಸ್ಟರ್ ಬಿಡುಗಡೆಗೊಳಿಸಿ ಕಾರ್ಯಕ್ರಮದ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಮೈಸೂರು ದಸರಾ ಮಹೋತ್ಸವದ ವರ್ಣರಂಜಿತ ಯುವ ದಸರಾಗೆ ಗೋಲ್ಡರ್ ಕಾರ್ಡ್ ಹೊರತುಪಡಿಸಿ ಬೇರೆ ಪಾಸ್ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಮೊದಲು ಬಂದವರಿಗೆ ಮೊದಲು ಆದ್ಯತೆ ದೊರೆಯಲಿದೆ ಎಂದರು.

    ಗೋಲ್ಡರ್ ಕಾರ್ಡ್ ವಿತರಣೆ ವಿಳಂಬ
    ಮುದ್ರಣಕ್ಕೆ ಕಳುಹಿಸಲಾಗಿರುವುದರಿಂದ ಗೋಲ್ಡರ್ ಕಾರ್ಡ್ ವಿತರಣೆ ವಿಳಂಬವಾಗಿದೆ. ಕೂಡಲೇ ವಿತರಣೆ ಮಾಡಲಾಗುವುದು. ಪಾಸ್ ವ್ಯವಸ್ಥೆ ಕುರಿತು ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
    ಗುಂಡಿ ಮುಚ್ಚುವ ಕೆಲಸ ನಡೆದಿದೆ. ನಗರ ವ್ಯಾಪ್ತಿಯ ನರಸಿಂಹರಾಜ, ಕೃಷ್ಣರಾಜ, ಚಾಮರಾಜ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

    ಸೋನು ನಿಗಮ್‌ಗೆ 40 ಲಕ್ಷ ರೂ. ಸಂಭಾವನೆ!
    ಬಾಲಿವುಡ್ ಗಾಯಕ ಸೋನು ನಿಗಮ್ ಅವರಿಗೆ ಸಂಗೀತ ಕಾರ್ಯಕ್ರಮ ನೀಡಲು 40 ಲಕ್ಷ ರೂ. ಸಂಭಾವನೆ ನೀಡಲಾಗುತ್ತಿದೆ. ಗಾಯಕಿ ಸುನಿಧಿ ಚೌಹಾಣ್ ಅವರಿಗೆ 20 ಲಕ್ಷ ರೂ., ಮತ್ತೊಬ್ಬ ಗಾಯಕಿ ಕನ್ನಿಕಾ ಕಪೂರ್‌ಗೆ 15 ಲಕ್ಷ ರೂ. ನೀಡಲಾಗುತ್ತಿದೆ. ಸ್ಥಳೀಯ ಕಲಾವಿದರಿಗೆ ಒಂದು ನೃತ್ಯಕ್ಕೆ 50 ಸಾವಿರ ರೂ. ನೀಡಲಾಗಿದೆ. ಯುವ ಸಂಭ್ರಮ ಮತ್ತು ಯುವ ದಸರಾದ ಒಟ್ಟಾರೆ ಬಜೆಟ್ 7 ಕೋಟಿ ರೂ. ಆಗುವ ಸಾಧ್ಯತೆ ಇದೆ ಎಂದು ಯುವ ದಸರಾ ಉಪ ಸಮಿತಿ (ಅಧಿಕಾರೇತರ) ಅಧ್ಯಕ್ಷ ಕಿರಣ್‌ಗೌಡ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts