More

    ಯುವಜನತೆಯಲ್ಲಿ ಜೀವನದ ಸವಾಲು ಎದುರಿಸುವ ಜ್ಞಾನದ ಕೊರತೆ

    ಆಲೂರು: ಯುವಜನತೆ ಅತ್ಯುನ್ನತ ಶಿಕ್ಷಣ ಪೂರ್ಣಗೊಳಿಸಿ ಪರಮೋಚ್ಚ ಹುದ್ದೆಯನ್ನು ಅಲಂಕರಿಸಿದ್ದರೂ ಜೀವನದ ಸವಾಲುಗಳನ್ನು ಎದುರಿಸುವ ಜ್ಞಾನದ ಕೊರತೆಯಿಂದಾಗಿ ಅಮೂಲ್ಯ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಹಾಸನ ಎವಿಕೆ ಮಹಿಳಾ ಕಾಲೇಜು ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಸಿ.ಚ.ಯತೀಶ್ವರ್ ಬೇಸರ ವ್ಯಕ್ತಪಡಿಸಿದರು.


    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಮತ್ತು ಐಕ್ಯೂಎಸಿ ವಿಭಾಗದಿಂದ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಮತ್ತು ಸಾಹಿತಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಅವರ ಅನ್ನದಾತ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


    ಮನುಷ್ಯ ವೈಜ್ಞಾನಿಕವಾಗಿ ಇಷ್ಟೊಂದು ಪ್ರಗತಿ ಸಾಧಿಸಿದ್ದರೂ ಜೀವನದಲ್ಲಿ ಸುಖ, ಶಾಂತಿ ಕೊರತೆಯಿಂದ ಬಳಲುತ್ತಿದ್ದಾನೆ. ನೂರಾರು ಕೋಟಿ ರೂ.ಸಂಪಾದಿಸಿದರೂ ನಿದ್ರೆ ಇಲ್ಲದ ರಾತ್ರಿಯನ್ನು ಕಳೆಯುತ್ತಿದ್ದಾನೆ. ಈ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ ಇಂದಿನ ಜೀವನ ಮೌಲ್ಯವರ್ಧಿತ ಶಿಕ್ಷಣದ ಕೊರತೆ. ಆಧುನಿಕ ಜಗತ್ತು ಎಲ್ಲವನ್ನೂ ನೀಡಿದೆ. ಆದರೆ ಮಾನವೀಯತೆ ಕಡಿಮೆಯಾಗಿದೆ. ಮಾನವರಾಗಿ ಬಾಳಲು ಸಾಹಿತ್ಯ ಅಧ್ಯಯನ ಅಗತ್ಯವಾಗಿದೆ. ಸಾಹಿತಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಅವರ ಅನ್ನದಾತ ಪುಸ್ತಕದಲ್ಲಿ ರೈತರ ಕೃಷಿ ಬವಣೆ ಹಾಗೂ ಸಮಸ್ಯೆ ಬಗ್ಗೆ ಅಚ್ಚುಕಟ್ಟಾಗಿ ಬಿಂಬಿಸಿದ್ದಾರೆ ಎಂದರು.


    ಸಾಹಿತಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಮಾತನಾಡಿ, ಸಂಶೋಧಕರ ಪ್ರಕಾರ ಹಗಲುಗನಸುಗಳು ಜೀವನದ ಗುರಿ ಮುಟ್ಟಲು ಪ್ರೇರಣೆ ನೀಡುತ್ತವೆ, ಮೌಲ್ಯಗಳು ಪ್ರಮುಖವಾಗಿ ನಮ್ಮನ್ನು ಬೆಳೆಸಲು ನೆರವಾಗುವುದಲ್ಲದೆ, ನಮ್ಮ ಭವಿಷ್ಯವನ್ನು ಸ್ವತಃ ನಾವೇ ರಚಿಸಲು ಅನುವು ಮಾಡಿಕೊಡುತ್ತದೆ. ನಾನು ಬರೆದಿರುವ ಅನ್ನದಾತ ಪುಸ್ತಕ ರೈತರು ಪಡುತ್ತಿರುವ ಬವಣೆ ಬಗ್ಗೆ ಬರೆಯಲಾಗಿದೆ ಎಂದರು.


    ಚನ್ನರಾಯಪಟ್ಟಣ ಪಿಯು ಕಾಲೇಜು ಉಪನ್ಯಾಸಕ ಬಿ.ಎನ್.ಶಿವರಾಮ್ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಬದುಕಲು ಶಿಕ್ಷಣದ ಜತೆಗೆ ಜೀವನ ಮೌಲ್ಯಗಳು ಅವಶ್ಯಕ. ಗುಣಾತ್ಮಕ ಶಿಕ್ಷಣದ ಜತೆಗೆ ವಿಧೇಯತೆ ವಿನಮ್ರತೆ ಹಾಗೂ ವಿಶ್ವಾಸವನ್ನು ಗಳಿಸುವ ಜೀವನದ ಮೌಲ್ಯಗಳನ್ನು ಕಲಿಯಬೇಕಾಗಿದೆ ಎಂದರು


    ಆಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಶಂಕರಲಿಂಗೇಗೌಡ, ಉಪನ್ಯಾಸಕರಾದ ಕೆ.ಎನ್. ಕೃಷ್ಣೇಗೌಡ, ಎಮ್.ಕೆ. ವನಜಾಕ್ಷಿ, ಜಿ.ಆರ್.ಮೋಹನ್‌ಕುಮಾರ್, ಕೆ.ಎಸ್.ಮೋಹನ್ ಕುಮಾರ್, ಜಿ.ಪುರುಷೋತ್ತಮ್, ಎಚ್.ಜೆ. ಶಿವಪ್ರಸಾದ್, ರವಿಪ್ರಕಾಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts