More

    ಯುವಕರಿಗೆ ಬಿಜೆಪಿ ಹಿಡಿಸಿದ ಗ್ರಹಣ ಬಿಡಲಿದೆ

    ಬೆಳಗಾವಿ: ಹಲವು ವರ್ಷಗಳಿಂದ ಯಾವುದೇ ಉದ್ಯೋಗ ಸೃಷ್ಟಿ ಇಲ್ಲದೆ ಕರ್ನಾಟಕದ ಯುವಜನರ ಭವಿಷ್ಯಕ್ಕೆ ಬಿಜೆಪಿ ಸರ್ಕಾರ ಗ್ರಹಣ ಹಿಡಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಯುವ ಕ್ರಾಂತಿ ಸಮಾವೇಶದಿಂದ ಆ ಗ್ರಹಣಕ್ಕೆ ಮುಕ್ತಿ ಸಿಗಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಹೇಳಿದರು.

    ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ಮಾ.20ರಂದು ಹಮ್ಮಿಕೊಂಡಿರುವ ಯುವ ಕ್ರಾಂತಿ ಸಮಾವೇಶ’ದ ಸಿದ್ಧತೆ ಚಟುವಟಿಕೆಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರೊಂದಿಗೆ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಮಾವೇಶದಿಂದ ಕರ್ನಾಟಕದಲ್ಲಿ ನೂತನ ಸೂರ್ಯ ಉದಯಿಸಲಿದ್ದಾನೆ ಎಂದರು.

    ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ರಾಜ್ಯದ ಯುವಕರ ಜೀವನ ಉಜ್ವಲಗೊಳಿಸುವ ಗ್ಯಾರಂಟಿ ಕಾರ್ಡ್ ಅನಾವರಣಗೊಳಿಸಲಿದ್ದಾರೆ. ಮುಂದೆ ಈ ಕಾರ್ಯಕ್ರಮವನ್ನು ಮೋದಿ ಸರ್ಕಾರ ಸಹ ಜಾರಿಗೊಳಿಸಬೇಕಾಗುತ್ತದೆ ಎಂದು ಹೇಳಿದರು.

    ಸಮಾವೇಶ ತಡೆಯಲು ಸಾಧ್ಯವಿಲ್ಲ: ರಾಜ್ಯದಲ್ಲಿ ಕಾಂಗ್ರೆಸ್ ಪರ ಒಲವಿರುವುದನ್ನು ಮನಗಂಡಿರುವ ಪ್ರದಾನಿ ಮೋದಿ ಸೇರಿ ಇಡಿ ಬಿಜೆಪಿ ಭಯಪಟ್ಟಿದೆ. ಹಾಗಾಗಿಯೇ ರಾಹುಲ್ ಗಾಂಧಿ ಅವರು ಸೋಮವಾರ ಕರ್ನಾಟಕಕ್ಕೆ ಆಗಮಿಸಿ ಯುವಕರಿಗಾಗಿ ‘ಕಾಂಗ್ರೆಸ್ ಗ್ಯಾರಂಟಿ’ ಘೋಷಣೆ ಮಾಡಲಿದ್ದಾರೆ ಎಂದು ಭಯಪಟ್ಟು ದೆಹಲಿಯಲ್ಲಿ ಈಗಲೇ ಅವರ ಮನೆಗೆ ಪೊಲೀಸರನ್ನು ಕಳಿಸಿದ್ದು, ಅದಾನಿ ಹಗರಣದ ಕುರಿತಾದ ಚರ್ಚೆ ತಡೆಯಲು ಸಂಚು ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಸಮಾವೇಶ ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದರು.

    ‘ಮೋದಿ ಅಧಿಕಾರಕ್ಕೆ ಬಂದ ಮೇಲೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ಆದರೆ, ದೇಶದಲ್ಲಿ ನಿರುದ್ಯೋಗ ತಾಂಡವ ಆಡುತ್ತಿದ್ದು ಶೇ.8 ಹೆಚ್ಚಾಗಿದೆ. ಬ್ರ್ಯಾಂಡ್ ಕರ್ನಾಟಕಕ್ಕೆ ಬಿಜೆಪಿ ಸರ್ಕಾರ ಧಕ್ಕೆ ತಂದಿದೆ. ಮೋದಿಯಂತೆ ಬೊಮ್ಮಾಯಿಯೂ ಸುಳ್ಳು ಹೇಳುವುದನ್ನು ಕಲಿತಿದ್ದಾರೆ. ಕರ್ನಾಟಕಕ್ಕೆ ಬರಬೇಕಿದ್ದ ಸಾಕಷ್ಟು ಉದ್ಯಮಗಳು ಬೇರೆ ರಾಜ್ಯಕ್ಕೆ ಹೋಗಿವೆ. ಆದರೂ, ಫಾಕ್ಸ್‌ಕಾನ್ ಕಂಪನಿ ರಾಜ್ಯದಲ್ಲಿ ಹೂಡಿಕೆ ಮಾಡಿದೆ ಎಂದಿದ್ದರು. ಆದರೆ, ತೆಲಂಗಾಣದಲ್ಲಿ ಹೂಡಿಕೆ ಮಾಡಿದ್ದೇವೆ ಎಂದು ಕಂಪನಿ ಸ್ಪಷ್ಟನೆ ನೀಡಿತು. ಅಂದರಂತೆಯೇ ಓಲಾ ಸೇರಿ ಹತ್ತಾರು ಕಂಪನಿಗಳು ಬಿಜೆಪಿ ಸರ್ಕಾರದ ನಿರ್ಲಕ್ಷೃದಿಂದಾಗಿಯೇ ಹೊರರಾಜ್ಯಕ್ಕೆ ಹೋಗಿವೆ’ ಎಂದು ಆರೋಪಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಇತರರಿದ್ದರು.

    ನಾಯಕರ ಕ್ಷೇತ್ರ ಬದಲಾವಣೆ ಜನಪ್ರಿಯತೆ ತೋರಿಸುತ್ತದೆ

    ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಕ್ಷೇತ್ರ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಸುರ್ಜೇವಾಲಾ ಅವರು, ಇಬ್ಬರಿಗೂ ಹಲವು ಕ್ಷೇತ್ರಗಳಿಂದ ಸ್ಪರ್ಧಿಸಲು ಕಾರ್ಯಕರ್ತರು ಆಹ್ವಾನ ನೀಡಿದ್ದಾರೆ. ಅದು ಅವರ ಜನಪ್ರಿಯತೆ ತೋರಿಸುತ್ತದೆಯೇ ಹೊರತು, ಗೊಂದಲದ ಪ್ರಶ್ನೆಯೇ ಇಲ್ಲ. ಎಲ್ಲಿಂದ ಸ್ಪರ್ಧಿಸುತ್ತಾರೆ ಎನ್ನುವುದು ಅವರಿಗೆ ಬಿಟ್ಟದ್ದು ಎಂದ ಅವರು, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡದಂತೆ ರಾಹುಲ್ ಸೂಚಿಸಿದ್ದಾರೆಂಬ ವಿಚಾರವನ್ನು ಅಲ್ಲಗಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts