More

    ಯುವಕರಿಗೆ ಗಾಂಧೀಜಿ ಹೆಜ್ಜೆಗುರುತಿನ ಪರಿಚಯ

    ಹಾವೇರಿ: ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿದ್ದರು. ಅವರು ಭೇಟಿ ನೀಡಿದ ಸ್ಥಳಗಳ ಗುರುತನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಉಪನ್ಯಾಸಕ ಪ್ರಮೋದ ನಲವಾಗಲ ಹಾಗೂ ಪವನ ಬಹದ್ದೂರ ದೇಸಾಯಿ ಅವರು ಫಲಕಗಳನ್ನು ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

    ಗಾಂಧಿ ಜಯಂತಿಯಂದು ಈ ಕಾರ್ಯಕ್ರಮಕ್ಕೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮುನ್ಸಿಪಲ್ ಕ್ರೀಡಾಂಗಣದ ಬಳಿ ಫಲಕ ಅನಾವರಗೊಳಿಸುವ ಮೂಲಕ ಚಾಲನೆ ನೀಡಿದರು. ಉಪನ್ಯಾಸಕ ಪ್ರಮೋದ ನಲವಾಗಲ ಮಾತನಾಡಿ, 1-3-1934ರಂದು ಶಿರಸಿಯಿಂದ ಅಕ್ಕಿಆಲೂರು, ದೇವಿಹೊಸೂರ ಮಾರ್ಗವಾಗಿ ಗಾಂಧೀಜಿ ಹಾವೇರಿಗೆ ಬಂದಿದ್ದರು. ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಜನರನ್ನುದ್ದೇಶಿಸಿ ಮಾತನಾಡಿ, ರವೀಂದ್ರನಾಥ ಟ್ಯಾಗೋರ್ ಅವರ ತೈಲಚಿತ್ರವನ್ನು ಅನಾವರಣಗೊಳಿಸಿದ್ದರು. ಈ ತೈಲಚಿತ್ರವು ಹೈಸ್ಕೂಲ್​ನಲ್ಲಿದೆ. ನಂತರ ಹೊಂಡದ ಮಠಕ್ಕೆ ಭೇಟಿ ನೀಡಿ ಚಿತ್ರದುರ್ಗದ ಮುರುಘಾಮಠದ ಜಯದೇವ ಜಗದ್ಗುರು ಮುರಘರಾಜೇಂದ್ರ ಸ್ವಾಮೀಜಿಗಳೊಂದಿಗೆ ರ್ಚಚಿಸಿದ್ದರು. ಮಠದ ಮುಂಭಾಗದಲ್ಲಿ ವ್ಯಾಯಾಮ ಶಾಲೆಯನ್ನು ಉದ್ಘಾಟಿಸಿದ್ದರು. ಹೊಸಮಠದ ಆವರಣದಲ್ಲಿ ಆನಂದ ಭವನಕ್ಕೆ ಅಡಿಗಲ್ಲಿಟ್ಟಿದ್ದರು. ರೈಲು ನಿಲ್ದಾಣದ ಪಕ್ಕದಲ್ಲಿ ಆಶ್ರಮ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ನಂತರ ಮೋಟೆಬೆನ್ನೂರಿಗೆ ಪ್ರಯಾಣ ಬೆಳೆಸಿ ಅಲ್ಲಿನ ಕೋಟೆ ಬಯಲಿನಲ್ಲಿ ಬಹಿರಂಗ ಭಾಷಣ ಮಾಡಿದ್ದರು. ಅಲ್ಲಿಂದ ಬ್ಯಾಡಗಿಗೆ ಹೋಗಿ ಮರಳಿ ಹಾವೇರಿಗೆ ಬಂದು ಕಾಗಿನೆಲೆ ರಸ್ತೆಯಲ್ಲಿರುವ ಮುರುಘಾಮಠದಲ್ಲಿ ವಾಸ್ತವ್ಯ ಮಾಡಿದ್ದರು. ಮರುದಿನ ಬೆಳಗ್ಗೆ ಹಾವೇರಿಯಿಂದ ರಾಣೆಬೆನ್ನೂರಿಗೆ ರೈಲು ಮೂಲಕ ಪ್ರಯಾಣಿಸಿ ಅಲ್ಲಿಯ ರೈಲ್ವೆ ನಿಲ್ದಾಣದಲ್ಲೇ ಜನರನ್ನುದ್ದೇಶಿಸಿ ಮಾತನಾಡಿದ್ದರು ಎಂದು ತಿಳಿಸಿದರು.

    ಗಾಂಧಿಜೀಯವರ ನಿಧನದ ನಂತರ ಅವರ ಅಸ್ಥಿಯನ್ನು ಸಂಗೂರ ಕರಿಯಪ್ಪನವರ ನೇತೃತ್ವದಲ್ಲಿ ಸಂಗೂರಿಗೆ ಹಾಗೂ ಹೊಸಮನಿ ಸಿದ್ದಪ್ಪನವರ ನೇತೃತ್ವದಲ್ಲಿ ಕರ್ಜಗಿಗೆ ತಂದು ಗದ್ದುಗೆ ನಿರ್ವಿುಸಲಾಗಿತ್ತು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಗಾಂಧಿವಾದಿಗಳು ಜಂಗಮನಕೊಪ್ಪದ ಬಳಿ ಸೇರುತ್ತಿದ್ದರು. ಮುಂದೆ ಈ ಸ್ಥಳವೇ ಗಾಂಧಿಪುರ ಎಂದು ಬದಲಾಯಿತು ಎಂಬ ಇತಿಹಾಸವಿದೆ ಎಂದರು. ಪವನ ದೇಸಾಯಿ, ಪ್ರಾಚಾರ್ಯ ಡಾ. ರಮೇಶ ತೆವರಿ, ಎಸ್.ಸಿ. ಹಿರೇಮಠ, ಶೋಭಾ ಜಾಗಟಗೇರಿ, ಅಶೋಕ ಎಣ್ಣಿಯವರ ಇತರರಿದ್ದರು.

    ಜಿಲ್ಲೆಗೆ ಗಾಂಧೀಜಿಯವರು ಭೇಟಿ ನೀಡಿದ ಸ್ಥಳಗಳನ್ನು ಸೂಚಿಸುವ ಫಲಕಗಳನ್ನು ಅಳವಡಿಸುವ ಮೂಲಕ ಅವರ ಇತಿಹಾಸವನ್ನು ಎಲ್ಲರಿಗೂ ತಿಳಿಸುತ್ತಿರುವುದು ಶ್ಲಾಘನೀಯ.
    | ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts