More

    ಯುಜಿಡಿ ಸಂಪರ್ಕ ಕಡ್ಡಾಯ

    ಶಿವಮೊಗ್ಗ: ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿ ಮುಗಿದಿರುವ ಪ್ರದೇಶಗಳಲ್ಲಿ ಸಂಪರ್ಕ ಪಡೆಯದಿರುವ ಮನೆಗಳಿಗೆ ವಿದ್ಯುತ್ ಹಾಗೂ ನೀರಿನ ಸೌಲಭ್ಯ ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದರು.

    ನಗರ ಪಾಲಿಕೆಯಲ್ಲಿ ಮಂಗಳವಾರ ಕುಡಿಯುವ ನೀರು ಹಾಗೂ ಯುಜಿಡಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ನೂರಾರು ಕೋಟಿ ರೂ. ಖರ್ಚು ಮಾಡಿ ಯುಜಿಡಿ ಸಂಪರ್ಕ ಕಲ್ಪಿಸಲಾಗುತ್ತಿದೆ. ಬಡಾವಣೆಯಲ್ಲಿ ಒಂದು ಮನೆ ಸಂಪರ್ಕ ಪಡೆಯಲಿಲ್ಲ ಎಂದರೆ ಉದ್ದೇಶ ಈಡೇರಲ್ಲ ಎಂದು ಹೇಳಿದರು.

    ತುಂಗಾ ನದಿಗೆ ಮಲಿನ ನೀರು ಸೇರುತ್ತಿದೆ ಎಂದು ದೂರುಗಳು ಬರುತ್ತಿವೆ. ಇನ್ನಾದರೂ ಕೊಳಚೆ ನೀರು ಸೇರುವುದನ್ನು ತಡೆಯಬೇಕು. 300 ರೂ. ಶುಲ್ಕವನ್ನು ಪಾಲಿಕೆಗೆ ಪಾವತಿಸಿ ಅನುಮತಿ ಪಡೆದು, ಸುಮಾರು 2 ಸಾವಿರ ರೂ. ವ್ಯಯಿಸಿ ಯುಜಿಡಿ ಸಂಪರ್ಕ ಪಡೆಯಬಹುದು. ಪಾಲಿಕೆ ಸದಸ್ಯರು ಈ ಬಗ್ಗೆ ಜನಜಾಗೃತಿ ಮೂಡಿಸಬೇಕೆಂದು ತಿಳಿಸಿದರು.

    ತಿಂಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಿ: ವಿವಿಧ ವಾರ್ಡ್​ಗಳಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಜು.8ರೊಳಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. 5 ಲಕ್ಷ ರೂ. ಮೀರದ ಕಾಮಗಾರಿಗೆ ಟೆಂಡರ್ ಕರೆಯುವ ಅವಶ್ಯಕತೆಯಿಲ್ಲ. ಆ ಎಲ್ಲ ಕಾಮಗಾರಿಗಳನ್ನೂ ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಕುಡಿಯುವ ನೀರು ಹಾಗೂ ಒಳಚರಂಡಿ ಮಂಡಳಿ ಮುಖ್ಯ ಇಂಜಿನಿಯರ್ ಕೇಶವ್ ಅವರಿಗೆ ಕೆ.ಎಸ್.ಈಶ್ವರಪ್ಪ ಸೂಚಿಸಿದರು.

    ಈಗ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಕಾಮಗಾರಿಗಳ ಪೈಕಿ 19 ಲಕ್ಷ, 9 ಲಕ್ಷ ಹಾಗೂ 30 ಲಕ್ಷ ರೂ. ಮೊತ್ತದ ಮೂರು ಕಾಮಗಾರಿಗಳಿಗೆ ಟೆಂಡರ್ ಕರೆಯಬೇಕಿದೆ. 1 ತಿಂಗಳಲ್ಲಿ ಈ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ತಿಳಿಸಿದರು.

    ಟ್ಯಾಂಕ್ ತುಂಬುತ್ತಿಲ್ಲ: ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗದಿರುವುದಕ್ಕೆ ಮುಖ್ಯ ಕಾರಣ ನೀರಿನ ಟ್ಯಾಂಕ್ ತುಂಬಿಸದಿರುವುದು.ಹೀಗಿರುವಾಗ ಕೇವಲ ಪೈಪ್​ಲೈನ್ ಸಮಸ್ಯೆ ಕಡೆಗೆ ಮಾತ್ರ ಗಮನಹರಿಸಿದರೆ ಪ್ರಯೋಜನವೇನು ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ ಪ್ರಶ್ನಿಸಿದರು. ಚಿಕ್ಕಲ್, ಪುರಲೆ, ವಿನೋಬನಗರದ ಕೆಲ ಭಾಗಗಳಲ್ಲಿ ಟ್ಯಾಂಕ್​ಗಳೇ ಭರ್ತಿಯಾಗುತ್ತಿಲ್ಲ. ಮೊದಲು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

    ಏನೇನು ಕಾಮಗಾರಿಗಳು? ಪಾಲಿಕೆ ಸದಸ್ಯರು ಹಾಗೂ ಕುಡಿಯುವ ನೀರು ಹಾಗೂ ಒಳಚರಂಡಿ ಮಂಡಳಿ ಮತ್ತು ಪಾಲಿಕೆ ಸಿಬ್ಬಂದಿ ನಡುವೆ ಸಮಾಲೋಚನೆ ನಡೆದು ಕುಡಿಯುವ ನೀರಿನ ಪೂರೈಕೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಪಟ್ಟಿ ಮಾಡಲಾಗಿದೆ. ಸಮಸ್ಯೆ ಪರಿಹಾರಕ್ಕಾಗಿ 1.61 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ. ಕೆ.ಆರ್.ವಾಟರ್ ವರ್ಕ್ಸ್​ನಲ್ಲಿ 100 ಅಶ್ವಶಕ್ತಿ ಸಬ್​ವುರ್ಸಿಬಲ್ ಪಂಪ್ ಅಳವಡಿಸುವುದು, ವಿವಿಧ ಬಡಾವಣೆಗಳಲ್ಲಿ ಪಿವಿಸಿ ಪೈಪ್ ಅಳವಡಿಕೆ ಕಾಮಗಾರಿ, ಕಿರು ನೀರು ಸರಬರಾಜು ಘಟಕ ಸ್ಥಾಪಿಸುವುದು ಸೇರಿ ಒಟ್ಟು 21 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.

    ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಉಪಮೇಯರ್ ಸುರೇಖಾ ಮುರಳೀಧರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts