More

    ಯುಕೆಪಿ 3ನೇ ಹಂತ ಜಾರಿಗೆ ಭೂಸ್ವಾಧೀನವೇ ಸವಾಲು

    ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ ಜಾರಿಯಿಂದ 5.20 ಲಕ್ಷ ಹೆಕ್ಟೇರ್ ಜಮೀನು ನೀರಾವರಿಗೊಳಪಡಲಿದೆ. ಆದರೆ ಅದನ್ನು ಜಾರಿಗೊಳಿಸಲು ಭೂಸ್ವಾಧೀನವೇ ಸವಾಲಾಗಿದೆ ಎಂದು ಕೆಬಿಜೆಎನ್‌ಎಲ್ ನೂತನ ವ್ಯವಸ್ಥಾಪಕ ನಿರ್ದೇಶಕ- ಹಿರಿಯ ಐಎಎಸ್ ಅಧಿಕಾರಿ ಕೆ.ಪಿ.ಮೋಹನರಾಜ್ ಹೇಳಿದರು.

    ಆಲಮಟ್ಟಿಗೆ ಪ್ರಥಮ ಬಾರಿಗೆ ಆಗಮಿಸಿದ ಅವರು ವಿವಿಧ ಉದ್ಯಾನಗಳಲ್ಲಿನ ಕಾಮಗಾರಿ ಪರಿಶೀಲಿಸಿ, ರಾಕ್ ಉದ್ಯಾನದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು.

    ಕಳೆದ ಮೂರು ದಿನಗಳಿಂದ ಆಲಮಟ್ಟಿಯಲ್ಲಿದ್ದು ವಲಯವಾರು ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ಯೋಜನೆ ಜಾರಿಗೆ ಉಂಟಾಗಿರುವ ತೊಡಕುಗಳನ್ನು ನಿವಾರಿಸಿ ಯಾವ ರೀತಿ ಜಾರಿಗೊಳಿಸಬೇಕು ಎಂದು ಒಂದು ಯೋಜನೆ ಹಾಗೂ ಕಾಲಮಿತಿ ಹಾಕಿಕೊಂಡು ಕಾರ್ಯ ಮಾಡಲಾಗುವುದು ಎಂದರು.

    ನಾರಾಯಣಪುರ ಭಾಗದ ಕಾಲುವೆಗಳಿಗೆ ಅಳವಡಿಸಿರುವ ಸ್ಕಡಾ ತಂತ್ರಜ್ಞಾನವನ್ನು ಆಲಮಟ್ಟಿ ಭಾಗದ ಕೆಲ ಕಾಲುವೆಯ ಯೋಜನೆಗಳಿಗೆ ಅಳವಡಿಸಲು ಉದ್ದೇಶಿಸಲಾಗಿದೆ. ಇದರಿಂದ ಕಾಲುವೆಯ ನೀರು ಹಿತಮಿತ ಬಳಕೆಗೆ ಅವಕಾಶ ಒದಗಲಿದೆ. ಈ ಬಾರಿ ಕಾಲುವೆ ನಿರ್ವಹಣೆಗಾಗಿ ಸಾಕಷ್ಟು ಕಾಲಾವಧಿಯಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

    ಯುಕೆಪಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಶೇ.20 ರಷ್ಟು ಭೂಮಿ ಸವುಳು-ಜವಳಿಗೆ ತುತ್ತಾಗಿದೆ. ಅದನ್ನು ನಿಯಂತ್ರಿಸಲು ಹಾಗೂ ಆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ರಾಮಥಾಳ ಹನಿ ನೀರಾವರಿ ಯೋಜನೆಯ ಹಾಗೆ ಕೊಪ್ಪಳ ಭಾಗದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ನೀರಾವರಿ ಯೋಜನೆಗೂ ಹನಿ ನೀರಾವರಿ ಪದ್ಧತಿ ಬಳಸಲು ಯೋಚಿಸಲಾಗಿದೆ. ಹನಿ ನೀರಾವರಿಯಿಂದ ನೀರಾವರಿ ಪ್ರದೇಶ ಹೆಚ್ಚಾಗಲಿದೆ ಎಂದರು.

    ಆಲಮಟ್ಟಿಯಲ್ಲಿರುವ ವಿವಿಧ ಉದ್ಯಾನಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸುವುದು ಪ್ರಥಮ ಆದ್ಯತೆಯಾಗಿದೆ. ಶೌಚಗೃಹಗಳ ನಿರ್ಮಾಣ, ಶುದ್ಧ ಕುಡಿಯುವ ನೀರು ಒದಗಿಸಲು ಆದ್ಯತೆ ನೀಡಲಾಗುವುದು ಎಂದರು.

    ಮುಖ್ಯ ಇಂಜಿನಿಯರ್ ಎಚ್.ಎನ್.ಶ್ರೀನಿವಾಸ, ಡಿ.ಬಸವರಾಜ, ಗೋವಿಂದ ರಾಠೋಡ, ಡಿಎ್ಒ ರಾಜಣ್ಣ ನಾಗಶೆಟ್ಟಿ, ಆರ್.ಎ್.ಓ. ಮಹೇಶ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts