More

    ಯಾವುದೇ ಹಿಡನ್ ಅಜೆಂಡಾ ಇಲ್ಲ

    ತೀರ್ಥಹಳ್ಳಿ: ಪೌರತ್ವ ಕಾಯ್ದೆ ತಿದ್ದುಪಡಿ ಸೇರಿ ಬಿಜೆಪಿ ಜನತೆಗೆ ನೀಡಿದ್ದ ಆಶ್ವಾಸನೆಯನ್ನು ಜಾರಿಗೊಳಿಸುವ ಬದ್ಧತೆ ತೋರಿದೆಯೇ ಹೊರತು ಇದರಲ್ಲಿ ಯಾವುದೇ ಹಿಡನ್ ಅಜೆಂಡಾ ಇಲ್ಲ. ದೇಶದ ಏಕತೆ ವಿಚಾರದಲ್ಲಾದರೂ ಎಡಪಂಥೀಯ ನಿಲುವಿನ ಪಕ್ಷಗಳು ಹೊಣೆಗಾರಿಕೆ ಅರಿತು ಕಾರ್ಯನಿರ್ವಹಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

    ಸಿಎಎ, ಎನ್​ಆರ್​ಸಿ ಮತ್ತು ಎನ್​ಪಿಆರ್ ಕಾಯ್ದೆಗಳ ಪರ ಬಿಜೆಪಿ ಸೋಮವಾರ ತಾಲೂಕು ಕಚೇರಿ ಎದುರು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಜನಸಂಘದ ಕಾಲದಿಂದಲೂ ಪೌರತ್ವ ಕಾಯ್ದೆ ತಿದ್ದುಪಡಿ, 370 ರದ್ದತಿ, ರಾಮಮಂದಿರ ಸಮಸ್ಯೆ ಮುಂತಾದ ವಿಚಾರಗಳ ಬಗ್ಗೆ ಜನತೆಗೆ ಆಶ್ವಾಸನೆ ನೀಡುತ್ತ ಬಂದಿದ್ದೇವೆ. ಮೋದಿ ನೇತೃತ್ವದ ಸರ್ಕಾರ ಅದನ್ನು ಸಾಧಿಸಿದೆ ಎಂದರು.

    ಈ ಆಶ್ವಾಸನೆಗಳನ್ನು ನೀಡುವ ಸಂದರ್ಭ ನಮಗೆ ಅಧಿಕಾರ ಇರಲಿಲ್ಲ. ಈಗ ನಮಗೆ ಆ ಮಾತುಗಳನ್ನು ಉಳಿಸಿಕೊಳ್ಳುವ ಶಕ್ತಿ ಬಂದಿದೆ. ಅದರಂತೆ ಕೆಲವು ಕಾಯ್ದೆಗಳು ಜಾರಿಯಾಗಿವೆ. ದೇಶದ ಜನತೆಗೆ ಈ ಮೊದಲು ನೀಡಿರುವ ಭರವಸೆಯಂತೆ ಇನ್ನೂ ಮಹತ್ವದ ಐದಾರು ಕಾಯ್ದೆಗಳು ಜಾರಿಗೆ ತರುವುದು ಬಾಕಿ ಇದ್ದು ಅವುಗಳ ಜಾರಿಯೂ ಶತಃಸಿದ್ಧ ಎಂದು ಹೇಳಿದರು.

    ಮುಸ್ಲಿಂ ಸಮುದಾಯವನ್ನು ರಾಷ್ಟ್ರಪತಿಯಿಂದ ನಗರಸಭೆಯ ಅಧ್ಯಕ್ಷತೆವರೆಗೆ ಅಧಿಕಾರದಲ್ಲಿ ಕೂರಿಸಿರುವ ಬಿಜೆಪಿಗೆ ಅಸಹಿಷ್ಣುತೆ ಎಂಬುದಿಲ್ಲ. ಆದರೆ ಧರ್ಮದ ಆಧಾರದಲ್ಲಿ ದೇಶವನ್ನು ಇಬ್ಭಾಗ ಮಾಡಿರುವ ಕಾಂಗ್ರೆಸ್ ಮುಸ್ಲಿಮರನ್ನು ದಡ್ಡರನ್ನಾಗಿಟ್ಟಿದ್ದೆ ಆ ಪಕ್ಷದ ಸಾಧನೆ ಎಂದು ಲೇವಡಿ ಮಾಡಿದರು.

    ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ಕಾಯ್ದೆ ಪರ 70 ವರ್ಷದ ಹಿಂದೆ ತೆಗೆದುಕೊಂಡಿದ್ದ ನಿರ್ಣಯಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಇಂದು ವಿರೋಧ ವ್ಯಕ್ತಪಡಿಸುತ್ತಿದೆ. ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದಲ್ಲಿ ಬದುಕಲು ಸಾಧ್ಯವಾಗದ ಮತ್ತು ಭಾರತದ ಹಿಂದಿನ ಭಾಗವಾಗಿದ್ದ ಪ್ರದೇಶದ ನಿವಾಸಿಗಳಿಗೆ ಪೌರತ್ವ ನೀಡಲು ಈ ಕಾಯ್ದೆ ಸಹಕಾರಿ. ಕಾಂಗ್ರೆಸ್​ನ ಸುಳ್ಳನ್ನು ಜನ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

    ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಟಿ.ಡಿ.ಮೇಘರಾಜ್ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಬಿಜೆಪಿ ಅಧ್ಯಕ್ಷ ರಾಘವೇಂದ್ರ ನಾಯಕ್, ಮುಖಂಡರಾದ ಆರ್.ಮದನ್ ಇತರರಿದ್ದರು. ಹೆದ್ದೂರು ನವೀನ್ ನಿರೂಪಿಸಿದರು. ಬೇಗುವಳ್ಳಿ ಕವಿರಾಜ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts