More

    ಯಾರೇ ಬದಲಾದ್ರೂ ನಾವಾಗಲ್ಲ!

    ಮಾರ್ಥಂಡ ಜೋಶಿ ಬಸವಕಲ್ಯಾಣ
    ವರ್ಷಗಳು ಉರುಳಿದವು. ಸರ್ಕಾರಗಳು ಬದಲಾದವು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೂ ಬದಲಾದರು. ಬದಲಾಯಿಸುವುದಾಗಿ ಹೇಳಿದವರೂ ಬದಲಾಗಿದ್ದಾರೆ. ಆದರೆ ನಾವು ಮಾತ್ರ ಯಾವ ಕಾರಣಕ್ಕೂ ಬದಲಾಗಲ್ಲ.

    ಇದು ಜನಸಾಮಾನ್ಯರ ನಡವಳಿಕೆ ಅಥವಾ ದೈನಂದಿನ ಜೀವನಶೈಲಿ ಬಗ್ಗೆ ಹೇಳುವ ಮಾತಲ್ಲ. ಯಾರೇನೇ ಅಂದರೂ, ಏನೇ ಹೇಳಿದರೂ ನಮ್ಮಲ್ಲಿ ಮಾತ್ರ ಬದಲಾವಣೆ ಕಾಣದು ಎಂದು ಸಾರಿ ಸಾರಿ ಹೇಳುತ್ತಿವೆ ನಡೆದಾಡಲೂ ಅಯೋಗ್ಯ ಎನ್ನುವಷ್ಟರ ಮಟ್ಟಿಗೆ ಹದಗೆಟ್ಟಿರುವ ನಗರದ ರಸ್ತೆಗಳಲ್ಲಿರುವ ತಗ್ಗು-ಗುಂಡಿಗಳು. ಪ್ರಮುಖ ರಸ್ತೆಗಳನ್ನು ಆಕ್ರಮಿಸಿರುವ ಈ ಗುಂಡಿಗಳು ಆಡಳಿತ ವ್ಯವಸ್ಥೆಯನ್ನೇ ಅಣಕಿಸುವಂತಿವೆ.

    ಎರಡು ದಶಕದ ಹಿಂದಿನ ಮತ್ತು ಇಂದಿನ ಪರಿಸ್ಥಿತಿಗೆ ಹೋಲಿಸಿದರೆ ಸಾಕಷ್ಟು ಬದಲಾವಣೆ ಕಾಣಲಾಗಿದೆ. ರಸ್ತೆಗಳು ಅಗಲಗೊಂಡಿವೆ. ಆದರೆ ಕೆಲ ಪ್ರಮುಖ ಸ್ಥಳಗಳಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ತಗ್ಗು-ಗುಂಡಿಗಳಿಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ಮಳೆಗಾಲ ಬಂದಾಗ ಮಾತ್ರ ಕಾಟಾಚಾರಕ್ಕೆ ಎನ್ನುವಂತೆ ತಗ್ಗು-ಗುಂಡಿಗಳನ್ನು ಮುಚ್ಚುವಂಥ ಪ್ರಯತ್ನ ನಡೆಯುತ್ತದೆ. ಸಮರ್ಪಕ ಕೆಲಸ ಮಾಡದ್ದರಿಂದ ಒಂದ್ಸಲ ಮಳೆಯಾದರೆ ರಸ್ತೆಗಳು ಮತ್ತೆ ಮೊದಲಿನ ರೂಪ ಪಡೆದುಕೊಳ್ಳುತ್ತವೆ. ಸಿಮೆಂಟ್, ಕಾಂಕ್ರೀಟ್ ಬಳಸಿದ ಕಡೆ ಒಂದು ಮಳೆಗಾಲ ಕಳೆಯಬಹುದು. ಆದರೆ ಮುರುಮ್ ಹಾಕಿದ ರಸ್ತೆಗಳು ಮತ್ತಷ್ಟು ಸಮಸ್ಯೆಗೆ ಕಾರಣವಾಗುತ್ತಿವೆ.

    ತ್ರಿಪುರಾಂತನಿಂದ ಬಸ್ ನಿಲ್ದಾಣವರೆಗಿನ ಮೂರು ಕಿಲೋ ಮೀಟರ್ ಮಾರ್ಗದಲ್ಲಿ ತ್ರಿಪುರಾಂತ-ಅಂಬೇಡ್ಕರ್ ವೃತ್ತ ಮತ್ತು ನಾರಾಯಣಪುರ ಕ್ರಾಸ್ ಹನುಮಾನ ಮಂದಿರ-ಬಸ್ ನಿಲ್ದಾಣವರೆಗೆ ಮಾತ್ರ ರಸ್ತೆ ಆಗಿದೆ. ಆದರೆ ಇದೇ ಮಾರ್ಗದಲ್ಲಿರುವ ಟೂರಿಸ್ಟ್ ಲಾಡ್ಜ್ ಬಳಿ ರಸ್ತೆ ನಿರ್ಮಿಸುವುದು ಈ ಯೋಜನೆಯಡಿ ಇರಲಿಲ್ಲವಂತೆ! ಕ್ರಿಯಾಯೋಜನೆ ರೂಪಿಸುವಾಗ ಮಾಡಿದ ತಪ್ಪಿನಿಂದಾಗಿ ಅಂಬೇಡ್ಕರ್ ವೃತ್ತದಿಂದ ಟೂರಿಸ್ಟ್ ಲಾಡ್ಜ್ ಮಾರ್ಗವಾಗಿ ಹನುಮಾನ ಮಂದಿರವರೆಗಿನ ಒಂದೂವರೆ ಕಿಮೀ ರಸ್ತೆ ನಿರ್ಮಿಸಿಲ್ಲ. ಇದೇ ಇಲ್ಲಿನ ಸಮಸ್ಯೆಗೆ ಮೂಲ ಕಾರಣ. ಒಂದು ವಾರ ಸುರಿದ ಮಳೆಯಿಂದಾಗಿ ಟೂರಿಸ್ಟ್ ಲಾಡ್ಜ್ ಬಳಿ ರಸ್ತೆಯ ತಗ್ಗು-ಗುಂಡಿಗಳು ಕೆಸರಿನಿಂದ ತುಂಬಿಕೊಂಡಿದ್ದು, ವಾಹನ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.

    ಮುಖ್ಯ ರಸ್ತೆಯ ಗಾಂಧಿ ವೃತ್ತದ ಸಮೀಪವೇ ಬನಶಂಕರಿ ಗಲ್ಲಿ ಕ್ರಾಸ್ ಬಳಿ ತಗ್ಗು-ಗುಂಡಿಗಳು ಬಿದ್ದಿವೆ. ಮಳೆಗಾಲದಲ್ಲಿ ಸಂಚರಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಬಸವೇಶ್ವರ ವೃತ್ತದಿಂದ ರಥ ಮೈದಾನ ರಸ್ತೆಯ ಕ್ರಾಸ್ ಬಳಿ ಬಿದ್ದಿದ್ದ ಗುಂಡಿಗಳನ್ನು ಏಪ್ರಿಲ್ನಲ್ಲಿ ಸಿಎಂ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮುಚ್ಚಲಾಗಿತ್ತು. ಆದರೀಗ ಮತ್ತೆ ಮೂಲ ಸ್ವರೂಪಕ್ಕೆ ತಿರುಗುತ್ತಿವೆ.

    ರಸ್ತೆ ನಿರ್ಮಿಸುವಾಗ ಯೋಜನಾ ಬದ್ಧತೆ ಕೊರತೆ, ಗುಣಮಟ್ಟ ಕಾಪಾಡುವಲ್ಲಿ ನಿರ್ಲಕ್ಷ್ಯ, ನಿರ್ವಹಣೆ ಕಡೆಗಣನೆಯಿಂದಾಗಿ ಸಮಸ್ಯೆ ಎದುರಿಸಬೇಕಾಗುತ್ತಿದೆ. ಜೋರಾಗಿ ಮಳೆಯಾದರೆ ಕೆಲ ರಸ್ತೆಗಳಲ್ಲಿ ನೀರು ಹರಿಯುತ್ತ ಹಾಳಾಗುತ್ತಿವೆ. ಬದಿಯಲ್ಲಿ ಮಳೆ ನೀರು ಹರಿದುಹೋಗಲು ಕೆಲವೆಡೆ ಸಮರ್ಪಕ ವ್ಯವಸ್ಥೆ ಇಲ್ಲ. ಚರಂಡಿ ಮೇಲೆ ನಿರ್ಮಿಸಿರುವ ಫುಟ್​ಪಾತ್​ನಲ್ಲಿ ನೀರು ಹೋಗಲು ಬಿಟ್ಟಿರುವ ರಂಧ್ರಗಳು ಸಹ ಹಲವೆಡೆ ಮುಚ್ಚಿ ಹೋಗಿವೆ.

    ಹರಳಯ್ಯ ವೃತ್ತದಿಂದ ಟೂರಿಸ್ಟ್ ಲಾಡ್ಜ್ ಮಾರ್ಗದ ಕ್ರಾಸ್, ಮುಖ್ಯರಸ್ತೆಯ ತ್ರಿಪುರಾಂತ ಬಳಿ ಸೇರಿರುವ ರಸ್ತೆಯುದ್ದಕ್ಕೂ ಗುಂಡಿಗಳು ನಿರ್ಮಾಣವಾಗಿದ್ದು, ಕೆಸರು ತುಂಬಿ ಸಂಚಾರ ಹೈರಾಣ ಎನಿಸಿದೆ. ಪ್ರತಿವರ್ಷ ಇದೇ ಸ್ಥಿತಿ ಇದ್ದರೂ ಸಂಬಂಧಿತರು ಶಾಶ್ವತ ಪರಿಹಾರಕ್ಕೆ ಮುಂದಾಗದಿರುವುದು ದುರಂತವೇ ಸರಿ.

    4 ಕೋಟಿ ರೂ. ಅನುದಾನ: ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಿಂದ ನಾರಾಯಣಪುರ ಕ್ರಾಸ್ವರೆಗಿನ ರಸ್ತೆ ಕಾಮಗಾರಿಗೆ 4 ಕೋಟಿ ರೂ. ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿಯುತ್ತಲೇ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಶರಣು ಸಲಗರ ತಿಳಿಸಿದ್ದಾರೆ. ಟೂರಿಸ್ಟ್ ಲಾಡ್ಜ್ ಬಳಿ ರಸ್ತೆ ಕೆಟ್ಟು ಸಮಸ್ಯೆಯಾಗುತ್ತಿದ್ದು, ತಗ್ಗು-ಗುಂಡಿಗಳನ್ನು ಮುಚ್ಚಲು ಸಂಬಂಧಿತರಿಗೆ ತಿಳಿಸಿರುವೆ. ವಿವಿಧ ಗ್ರಾಮಗಳಿಂದ ಬಸ್ನಲ್ಲಿ ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಟೂರಿಸ್ಟ್ ಲಾಡ್ಜ್ ಬಳಿಯೇ ಇಳಿಯುತ್ತಾರೆ. ಇಲ್ಲಿ ಮಳೆಗಾಲದಲ್ಲಿ ವಿದ್ಯಾರ್ಥಿಗಳು ನಿಲ್ಲಲು ಟೆಂಟ್ ಹಾಕಿಸಿ ವ್ಯವಸ್ಥೆ ಕಲ್ಪಿಸಿದ್ದೇನೆ ಎಂದು ಹೇಳಿದ್ದಾರೆ.

    ಕಾಲೇಜು ಎದುರು ಕೃತಕ ಹೊಂಡ: ನಗರದ ಅಂಚೆ ಕಚೇರಿ ಮತ್ತು ಸರ್ಕಾರಿ ಬಾಲಕರ ಪಿಯ ಕಾಲೇಜು ಮುಂಭಾಗದ ತಗ್ಗು ಪ್ರದೇಶದಲ್ಲಿ ಮಳೆ ನೀರು ಸಂಗ್ರಹಗೊಂಡು ಕೃತಕ ಹೊಂಡ ನಿಮರ್ಾಣವಾಗಿದೆ. ನೀರು ಹೋಗಲು ದಾರಿ ಇಲ್ಲದ ಕಾರಣ ಮಳೆಯಾಗಿ ವಾರ ಕಳೆದರೂ ಸಮಸ್ಯೆ ತಪ್ಪುವುದಿಲ್ಲ. ಹೆಚ್ಚು ಮಳೆಯಾದರೆ ಕಚೇರಿಗೆ ಬರುವ ಜನರು ಮತ್ತು ಶಾಲೆಗೆ ತೆರಳುವ ವಿದ್ಯಾರ್ಥಿಗಳು ಹೊಂಡದಲ್ಲೇ ಹೆಜ್ಜೆ ಇಡುವಂಥ ಅನಿವಾರ್ಯ ಸ್ಥಿತಿ ಇದೆ.

    ಗರದಲ್ಲಿ ಕಳೆದ ಒಂದು ವಾರ ನಿರಂತರ ಸುರಿದ ಮಳೆಯಿಂದಾಗಿ ರಸ್ತೆಯ ಕೆಲವೆಡೆ ತಗ್ಗು-ಗುಂಡಿಗಳು ಬಿದ್ದಿದ್ದು, ಮುಚ್ಚುವಂಥ ಕೆಲಸ ನಡೆದಿದೆ. ಟೂರಿಸ್ಟ್ ಲಾಡ್ಜ್ ಬಳಿ ತಗ್ಗುಗಳನ್ನು ಭರ್ತಿ ಮಾಡಲಾಗುತ್ತಿದೆ. ಇತರೆಡೆ ಬಿದ್ದಿರುವ ಗುಂಡಿ ಮುಚ್ಚಲು ಕೂಡ ಕ್ರಮ ಕೈಗೊಳ್ಳಲಾಗುತ್ತಿದೆ.
    | ಶಿವಕುಮಾರ, ಪೌರಾಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts