More

    ಯಳಂದೂರಿಗೆ ಬೇಕು ಅಗ್ನಿಶಾಮಕ ಠಾಣೆ

    ಡಿ.ಪಿ. ಮಹೇಶ್ ಯಳಂದೂರು:

    ತಾಲೂಕಿನ 33ಕ್ಕೂ ಹೆಚ್ಚು ಗ್ರಾಮಗಳ ಯಾವುದೇ ಹಳ್ಳಿಗಳಲ್ಲಿ ಅಗ್ನಿ ದುರಂತ ಸಂಭವಿಸಿದರೆ ಅದನ್ನು ತಡೆಗಟ್ಟಲು ಅಗ್ನಿಶಾಮಕ ಸಿಬ್ಬಂದಿ ಜಿಲ್ಲಾ ಕೇಂದ್ರದಿಂದಲೇ ಬರಬೇಕಾದ ಅನಿವಾರ್ಯತೆ ಇದೆ. ಇದರಿಂದ ಸಾಕಷ್ಟು ಅನಾಹುತ ಸಂಭವಿಸಿ ಸಮಸ್ಯೆ ಅನುಭವಿಸುವಂತಾಗಿದೆ.

    2006-2007ನೇ ಸಾಲಿನಲ್ಲಿ ರಾಜ್ಯದ ಅತ್ಯಂತ ಚಿಕ್ಕ ತಾಲೂಕು ಯಳಂದೂರಿಗೂ ಒಂದು ಅಗ್ನಿಶಾಮಕ ಠಾಣೆ ಮಂಜೂರಾಯಿತು. ಅದಕ್ಕಾಗಿ ತಾಲೂಕು ಕೇಂದ್ರದಿಂದ ಕೂಗಳತೆಯ ದೂರದಲ್ಲಿರುವ ಮೆಲ್ಲಹಳ್ಳಿ ಗೇಟ್ ಬಳಿ 2 ಎಕರೆ ಜಾಗ ಗುರುತಿಸಲಾಯಿತಾದರೂ ಇದುವರೆಗೆ ಅಗ್ನಿಶಾಮಕ ಠಾಣೆ ಕಾರ್ಯಾರಂಭವಾಗುವ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.

    ಯಳಂದೂರು ತಾಲೂಕು ಅಂಬಳೆ, ದುಗ್ಗಹಟ್ಟಿ, ಹೊನ್ನೂರು, ಕೆಸ್ತೂರು, ಮಾಂಬಳ್ಳಿ, ಅಗರ, ಮದ್ದೂರು, ಯರಿಯೂರು, ಗುಂಬಳ್ಳಿ, ಯರಗಂಬಳ್ಳಿ, ಗೌಡಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಹೊಂದಿದೆ. ಪ್ರತಿ ಗ್ರಾಮ ಪಂಚಾಯಿತಿ ಕನಿಷ್ಠವೆಂದರೂ 4 ಗ್ರಾಮಗಳನ್ನು ಹೊಂದಿದ್ದು, ಒಂದು ಗ್ರಾಮದಿಂದ ಇನ್ನೊಂದು ಗ್ರಾಮ 5ರಿಂದ 6 ಕಿ.ಮೀ. ಅಂತರವನ್ನು ಹೊಂದಿವೆ. ರಾಜ್ಯದ ಪ್ರಸಿದ್ಧ ಗಿರಿಧಾಮವಾದ ಬಿಳಿಗಿರಿ ರಂಗನಬೆಟ್ಟವೂ ಈ ತಾಲೂಕಿನ ಒಡಲಲ್ಲೇ ಇದೆ. ಆದರೆ, ತಾಲೂಕಿನ ಯಾವುದೇ ಭಾಗದಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಅದನ್ನು ನಂದಿಸಲು ಹನೂರು, ಚಾಮರಾಜನಗರ ಅಥವಾ ಕೊಳ್ಳೇಗಾಲದಿಂದಲೇ ಅಗ್ನಿಶಾಮಕ ವಾಹನ ಬರಬೇಕು. ದೂರದಿಂದ ವಾಹನ ಬರುವುದರೊಳಗೆ ಸಾಕಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇದೆ.

    ಹಳ್ಳಿಗಳಲ್ಲಿ ಸಮಸ್ಯೆ
    ತಾಲೂಕಿನ ಗ್ರಾಮೀಣ ಭಾಗದಲ್ಲಿ ಹುಲ್ಲಿನ ಮೆದೆಗಳು ಮತ್ತು ಕಬ್ಬಿನ ಗದ್ದೆಗಳು ಬೆಂಕಿ ಆಕಸ್ಮಿಕಕ್ಕೆ ಒಳಗಾದಾಗ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸುವುದು ಸ್ಥಳೀಯರು ಬೆಂಕಿ ನಂದಿಸಿದ ನಂತರವೇ. ಇದರಲ್ಲಿ ಸಿಬ್ಬಂದಿಯನ್ನು ದೂರುವಂತಿಲ್ಲ. ಏಕೆಂದರೆ, ಜಿಲ್ಲಾ ಕೇಂದ್ರದಿಂದ ಹದಗೆಟ್ಟ ರಸ್ತೆ, ಸಂಚಾರ ದಟ್ಟಣೆಯ ನಡುವೆ 21 ಕಿಲೋ ಮೀಟರ್ ಕ್ರಮಿಸಿ ಈ ಹಳ್ಳಿಗಳನ್ನು ತಲುಪುವುದರೊಳಗೆ ಎಲ್ಲ ಮುಗಿದುಹೋಗಿರುತ್ತದೆ. ಇನ್ನು ಕೆಲವು ಕುಗ್ರಾಮಗಳಲ್ಲಿ ಬೆಂಕಿ ಬಿದ್ದರೆ ಯಾರಿಗೆ ವಿಷಯ ಮುಟ್ಟಿಸಬೇಕೆಂದೂ ತಿಳಿಯದೆ, ಪ್ರಕರಣ ದಾಖಲಾಗದ ಸಂಗತಿಗಳೂ ಸಾಕಷ್ಟಿವೆ.

    ಗಮನಹರಿಸದ ಜನಪ್ರತಿನಿಧಿಗಳು
    ಜನಪ್ರತಿನಿಧಿಗಳಿಗೆ ಉತ್ತಮ ಸೇವಾ ಮನೋಭಾವನೆ ಇದ್ದರೆ ಕ್ಷೇತ್ರದ ಅಭಿವೃಧಿಯಾಗುತ್ತದೆ. ಆದರೆ, ಅವರು ಕ್ಷೇತ್ರದ ಅಭಿವೃದ್ಧಿ ಕಡೆ ಗಮನಹರಿಸದೆ ನಿರ್ಲಕ್ಷೃ ತೋರುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿವೆ. ಅಗ್ಮಿಶಾಮಕ ದಳದ ಬೇಡಿಕೆ ಇಟ್ಟು ಸಾಕಷ್ಟು ಬಾರಿ ಶಾಸಕರು ಹಾಗೂ ಸಂಸದರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಪಡೆದುಕೊಂಡು ಬರುವ ಪ್ರಯತ್ನವನ್ನೂ ಸಂಬಂಧಪಟ್ಟವರು ಮಾಡುತ್ತಿಲ್ಲ ಎಂಬುದು ಇಲ್ಲಿನವರ ಆರೋಪ.

    ಹೋರಾಟದ ನಿರ್ಧಾರ
    ತಾಲೂಕಿನಲ್ಲಿ ಗುಡಿಸಲು ನಿವಾಸಿಗಳೇ ಹೆಚ್ಚಿದ್ದು, ಇಲ್ಲಿನ ರೈತರು ಹೆಚ್ಚಾಗಿ ಕಬ್ಬು, ಭತ್ತ ಬೆಳೆಯುತ್ತಾರೆ. ಬೇಸಿಗೆಯಲ್ಲಿ ಫಸಲುಗಳಿಗೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದರೆ, ಜಿಲ್ಲಾ ಕೇಂದ್ರದಿಂದ ಅಗ್ನಿಶಾಮಕ ದಳದವರು ಬರುವುದರೊಳಗೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಬೆಂಕಿಗಾಹುತಿಯಾಗಿರುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

    ಮಲ್ಲಹಳ್ಳಿ ಬಳಿ 2 ಎಕರೆ ಜಾಗ

    ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ಕಾರ್ಯರಂಭ ಮಾಡಲು ಹಿಂದೆ ಸ್ಥಳದ ಕೊರತೆ ಕಾಡಿತ್ತು. ಆದರೆ ಸದ್ಯ ಮೆಲ್ಲಹಳ್ಳಿ ಬಳಿ ಇರುವ ಸರ್ಕಾರಿ ಗೋಮಾಳದಲ್ಲಿ ಠಾಣೆ ಕಾರ್ಯಾರಂಭ ಮಾಡಲು 2 ಎಕರೆ ಜಾಗ ಮೀಸಲಿರಿಸಲಾಗಿದ್ದು, ಠಾಣೆ ನಿರ್ಮಾಣಕ್ಕೆ ಆಡಳಿತ ವ್ಯವಸ್ಥೆ ಉತ್ಸಾಹ ತೋರುತ್ತಿಲ್ಲ.

    ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಹೆಚ್ಚಿನ ಗಮನಹರಿಸಿ ಠಾಣೆಯನ್ನು ನಿರ್ಮಿಸಿದರೆ, ಬಿಆರ್‌ಟಿ ಅರಣ್ಯ ಸಂಪತ್ತನ್ನು ರಕ್ಷಿಸುವುದರ ಜತೆಗೆ, ಗ್ರಾಮೀಣ ಭಾಗದಲ್ಲಿ ಸಂಭವಿಸುವ ಬೆಂಕಿ ಅನಾಹುತಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಸಂಬಂಧಪಟ್ಟವರು ಗಮನಹರಿಸಬೇಕು.
    ಅರವಿಂದ್, ಯಳಂದೂರು ಪಟ್ಟಣ ನಿವಾಸಿ


    ಯಳಂದೂರು ತಾಲೂಕು ಹಾಗೂ ಮಲೆಮಹದೇಶ್ವರ ಬೆಟ್ಟದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ ಮಾಡಲು ಸಾರ್ವಜನಿಕರು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಜನಪ್ರತಿನಿಧಿಗಳು ಹಾಗೂ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸರ್ಕಾರದಿಂದ ಅನುಮೋದನೆ ದೊರೆತಲ್ಲಿ ಠಾಣೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಗಮಹರಿಸಲಾಗುವುದು.
    ಗುರುರಾಜ್
    ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಚಾಮರಾಜನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts