More

    ಯಲ್ಲಾಪುರದಲ್ಲಿ ಮಹಿಳಾ ಪ್ರಾಬಲ್ಯ

    ಯಲ್ಲಾಪುರ: ಇಲ್ಲಿನ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಸುನಂದಾ ದಾಸ್ ಹಾಗೂ ಉಪಾಧ್ಯಕ್ಷರಾಗಿ ಶಾಮಲಿ ಪಾಟಣಕರ್ ಆಯ್ಕೆಯಾಗಿದ್ದಾರೆ. ಶುಕ್ರವಾರ ಪ.ಪಂ. ಕಾರ್ಯಾಲಯದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 13 ಮತಗಳ ಅಂತರದಿಂದ ಇಬ್ಬರೂ ಗೆಲುವು ಸಾಧಿಸಿದರು.

    ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸುನಂದಾ ದಾಸ್ ಹಾಗೂ ಕಾಂಗ್ರೆಸ್​ನಿಂದ ನರ್ಮದಾ ನಾಯ್ಕ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಶಾಮಿಲಿ ಪಾಟಣಕರ್ ಹಾಗೂ ಕಾಂಗ್ರೆಸ್​ನಿಂದ ಕೈಸರ್ ಸೈಯದ್ ಅಲಿ ನಾಮಪತ್ರ ಸಲ್ಲಿಸಿದ್ದರು. ನಂತರ ಸದಸ್ಯರು ಕೈ ಎತ್ತುವ ಮೂಲಕ ಮತದಾನ ಪಕ್ರಿಯೆ ನಡೆಯಿತು. ಬಿಜೆಪಿ ಅಭ್ಯರ್ಥಿಗಳಿಗೆ ಸಚಿವ ಹೆಬ್ಬಾರ ಮತವೂ ಸೇರಿ ತಲಾ 15 ಮತಗಳು, ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಲಾ 2 ಮತಗಳು ಬರುವ ಮೂಲಕ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದರು.

    ಕಾಂಗ್ರೆಸ್​ನ ಇಬ್ಬರು ಸದಸ್ಯರು ಆಯ್ಕೆ ಪ್ರಕ್ರಿಯೆಗೆ ಗೈರಾಗಿದ್ದರು. ಪಕ್ಷೇತರ ಸದಸ್ಯ ರಾಧಾಕೃಷ್ಣ ನಾಯ್ಕ ಹಾಜರಿದ್ದೂ ಮತ ಚಲಾಯಿಸದೇ ತಟಸ್ಥರಾಗಿ ಉಳಿದರು. ತಹಸೀಲ್ದಾರ್ ಗಣಪತಿ ಶಾಸ್ತ್ರಿ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸಚಿವರು, ಪ.ಪಂ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಅಭಿನಂದಿಸಿದರು.

    ಆಯ್ಕೆಗಾಗಿ ಸರಣಿ ಸಭೆಗಳು: ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸಾಮಾನ್ಯ ಮೀಸಲಾತಿ ಬಂದಿರುವುದರಿದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿತ್ತು. ಯಾರನ್ನು ಆಯ್ಕೆ ಮಾಡಬೇಕೆಂಬ ಗೊಂದಲ ಬಿಜೆಪಿ ಪ್ರಮುಖರನ್ನು ಕಾಡಿತ್ತು, ಅದರ ನಿವಾರಣೆಗಾಗಿ ತಾಲೂಕು ಉಸ್ತುವಾರಿ ನಾಗರಾಜ ನಾಯಕ ಹಾಗೂ ಸಚಿವ ಹೆಬ್ಬಾರ ನೇತೃತ್ವದಲ್ಲಿ ಗುರುವಾರ ಸಂಜೆ, ಶುಕ್ರವಾರ ಬೆಳಗ್ಗೆ ಸರಣಿ ಸಭೆ ನಡೆಯಿತು. ಶುಕ್ರವಾರ ಬೆಳಗ್ಗೆ 10 ಗಂಟೆ ನಂತರ ಕೊನೆಗೂ ಅಂತಿಮ ನಿರ್ಣಯಕ್ಕೆ ಬರಲಾಗಿದ್ದು, ಅಲ್ಲಿಂದಲೇ ಅಭ್ಯರ್ಥಿಗಳು ಪ.ಪಂ.ಗೆ ಹೊರಟು ನಾಮಪತ್ರ ಸಲ್ಲಿಸಿದರು.

    ಅಸಮಾಧಾನ ಸ್ಫೋಟ: ಸಾಮಾನ್ಯ ಮೀಸಲಾತಿ ಬಂದಾಗಲೂ ಮಹಿಳೆಯರಿಗೆ ಸ್ಥಾನ ಕೊಟ್ಟಿರುವುದು ಆಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಯಿತು. ಆಕಾಂಕ್ಷಿಗಳಾಗಿದ್ದ ಸತೀಶ ನಾಯ್ಕ, ಸೋಮೇಶ್ವರ ನಾಯ್ಕ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಫಲಿತಾಂಶ ಘೊಷಣೆಯಾಗುತ್ತಿದ್ದಂತೆ ಅಲ್ಲಿಂದ ತೆರಳಿದರು. ಸಂಭ್ರಮಾಚರಣೆ ವೇಳೆ ಸಚಿವರಾದಿಯಾಗಿ ಎಲ್ಲರೂ ಅವರನ್ನು ಹುಡುಕಿದರೂ ಅವರು ಅಲ್ಲಿರಲೇ ಇಲ್ಲ. ಮತ್ತೊಬ್ಬ ಆಕಾಂಕ್ಷಿ ಪುಷ್ಪಾ ನಾಯ್ಕ ಸಹ ಅಸಮಾಧಾನಗೊಂಡಿರುವುದು ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts