More

    ಯಜ್ಞಗಳಿಗಿಂತ ಕೃಷಿಯೇ ಮೇರು; ಸಾವಯವ ಕೃಷಿ ಕಾರ್ಯಾಗಾರದಲ್ಲಿ ಶ್ರೀ ರಾಘವೇಶ್ವರ ಸ್ವಾಮೀಜಿ ಅಭಿಮತ

    ಹೊಸನಗರ: ನೇಗಿಲು ಲಕ್ಷ್ಮೀ ಪ್ರತೀಕ, ನೇಗಿಲಿನ ಆಧಾರದ ಮೇಲೆ ಶ್ರೀಮಂತಿಕೆಯನ್ನು ಗುರುತಿಸಲಾಗುತ್ತಿತ್ತು. ಆದರೆ ಇಂದು ನಿಜವಾದ ಅರ್ಥದ ಶ್ರೀಮಂತಿಕೆಯಿಲ್ಲ. ಒಂದು ಅರ್ಥದಲ್ಲಿ ಶ್ರೀಮಠದಲ್ಲಿ ನಡೆದ ಯಜ್ಞಯಾಗಾದಿಗಿಂತ ಕೃಷಿ ಕಾರ್ಯಕ್ರಮವೇ ಮೇರು ಎಂದು ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
    ಕೃಷಿ ಇಲಾಖೆ ಶಿವಮೊಗ್ಗ, ಧರ್ಮಚಕ್ರ ಟ್ರಸ್ಟ್‌ನಿಂದ ಸೋಮವಾರ ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ಸಾವಯವ ಸಿರಿ ಕಾರ್ಯಾಗಾರದ ಸಾನ್ನಿಧ್ಯ ವಹಿಸಿ ಮಾತನಾಡಿ, ಉಳುಮೆ ಮಾಡುವಾಗ ನೇಗಿಲ ಗೆರೆಯಲ್ಲಿ ಸೀತಾಮಾತೆ ದೊರಕುತ್ತಾಳೆ. ನೇಗಿಲು ಲಕ್ಷ್ಮೀಯ ಪ್ರತೀಕ. ಕೆಲವೊಂದು ಧಾನ್ಯಗಳನ್ನು ಸಿರಿಧಾನ್ಯ ಎಂದು ಕರೆಯುತ್ತೇವೆ. ಅಮೂಲಾಗ್ರವಾಗಿ ಹೇಳೋದಾದರೆ ಇಡೀ ಕೃಷಿಯೇ ಸಿರಿ, ಕೃಷಿ ಮತ್ತು ಋಷಿ ಎರಡು ಕೂಡ ಮಹತ್ವದ್ದಾಗಿದೆ ಎಂದರು.
    ಕೃಷಿಗೂ ಮತ್ತು ಶ್ರೀಮಠಕ್ಕೂ ಅವಿನಾಭಾವ ಸಂಬಂಧ, ಶ್ರೀ ಮಠದ ಆವರಣದಲ್ಲೂ ತಲೆತಲಾಂತರದಿಂದ ಕೃಷಿ ನಡೆದುಕೊಂಡು ಬರುತ್ತಿದೆ. ಇಂತಹ ಸ್ಥಳದಲ್ಲಿ ಕೃಷಿ ಆಧಾರಿತ ಕಾರ್ಯಕ್ರಮಗಳೇ ಶ್ರೀ ಮಠಕ್ಕೆ ಶೋಭೆ ತರುತ್ತದೆ. ಇಂಥ ಯಾವುದೇ ಕಾರ್ಯಕ್ರಮಗಳಿಗೆ ಶ್ರೀಮಠದ ಸಮ್ಮತಿ ಬೇಕಾಗಿಲ್ಲ. ಮಠದ ಬಾಗಿಲು ಸದಾ ತೆರೆದಿರುತ್ತದೆ ಎಂದರು.
    ಸಾವಯವ ಕೃಷಿಯ ಉತ್ಪನ್ನಗಳಿಗೆ ಮಾರುಕಟ್ಟೆ ಸಮಸ್ಯೆ ಇದೆ ಎಂದು ರೈತರು ಎದೆಗುಂದುವುದು ಬೇಡ. ಸಾವಯವ ಉತ್ಪನ್ನಗಳ ಖರೀದಿಗೆ ಶ್ರೀಮಠ ಸಿದ್ಧವಿದೆ. ಅದು ವ್ಯಾಪಾರವಲ್ಲ, ಸೇವಾ ಮನೋಭಾವದಿಂದ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.
    ಗೃಹ ಸಚಿವ ಆರಗ ಜಾನೇಂದ್ರ ಅವರು ಕರ್ನಾಟಕದ ಸರ್ದಾರ್ ವಲ್ಲಭ ಬಾಯ್ ಪಟೇಲ್. ಅವರು ಗೃಹ ಸಚಿವರಾದ ಮೇಲೆ ಸಾಕಷ್ಟು ಒತ್ತಡ, ಅನೇಕ ಘಟನೆಗಳು ನಡೆದವು. ಆದರೆ ಅವೆಲ್ಲವನ್ನು ದಿಟ್ಟತನದಿಂದ ನಿಭಾಯಿಸಿ ಯಶಸ್ಸು ಸಾಧಿಸಿದ್ದಾರೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.
    ಸಾವಯವ ಕೃಷಿ ಅಗತ್ಯತೆ ಮತ್ತು ಪದ್ಧತಿ ಕುರಿತು ಕೃಷಿ ತಜ್ಞರಾದ ರಾಜೇಂದ್ರ ಹೆಗಡೆ ಮತ್ತು ಸಾವಯವ ಉತ್ಪನ್ನಗಳ ಮಾರುಕಟ್ಟೆ ಕುರಿತು ಕೃಷ್ಣಪ್ರಸಾದ್ ಉಪನ್ಯಾಸ ನೀಡಿದರು. ಶಾಸಕ ಹರತಾಳು ಹಾಲಪ್ಪ, ಕೃಷಿ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್, ಜಂಟಿ ಕೃಷಿ ನಿರ್ದೇಶಕಿ ಜಿ.ಸಿ.ಪೂರ್ಣಿಮಾ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಶಿವಯೋಗಿ ಯಲಿ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಡಾ. ಜಿ.ಎನ್.ಪ್ರಕಾಶ್, ಧರ್ಮಚಕ್ರ ಟ್ರಸ್ಟ್‌ನ ಐ.ಎನ್.ಸೀತಾರಾಮ್, ವಿವಿಧ ಇಲಾಖೆಯ ಅಧಿಕಾರಿಗಳು, ಕೃಷಿ ಪೂರಕ ಸಂಘಟನೆಗಳ ಪ್ರಮುಖರು, ಶ್ರೀಮಠದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
    ಉತ್ತಮ ಕೃಷಿ ಸಾಧನೆಗಾಗಿ ಶೃಂಗೇರಿ ತಾಲೂಕಿನ ಮೇಗಳಬೈಲು ಗ್ರಾಮದ ವಾಣಿಶ್ರೀ ಸಾಗರ್ ಮತ್ತು ಶಿಕಾರಿಪುರ ಗ್ರಾಮದ ಚುರ್ಚಿಗುಂಡಿ ಗ್ರಾಮದ ಬಿ.ಎನ್.ನಂದೀಶ ಅವರನ್ನು ಸನ್ಮಾನಿಸಲಾಯಿತು.
    ಕೃಷಿಯೇ ಜೀವಾಳ:  ನಿನ್ನೆ, ಇಂದು ಮತ್ತು ನಾಳೆ ಕೃಷಿಯೇ ಜೀವಾಳ. ಸಾವಯವ ಕೃಷಿಯ ಬಗ್ಗೆ ಹೆಚ್ಚು ಒತ್ತು ನೀಡಬೇಕಿದೆ. ಬೆಂಗಳೂರಿನಂತಹ ಮಹಾನಗರದಲ್ಲೂ ಸಾವಯವ ಉತ್ಪನ್ನಗಳ ಕೇಂದ್ರಗಳೇ ಸಿಗುತ್ತವೆ. ಆದರೆ ಅದನ್ನು ಪರಿಶೀಲಿಸಿ ತೆಗೆದುಕೊಳ್ಳಿ. ಮೋಸ ಹೋಗಬೇಡಿ ಎಂದು ಅಧ್ಯಕ್ಷತೆ ವಹಿಸಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts