More

    ಮ.ಬೆಟ್ಟದಲ್ಲಿ ದಸರಾ ಸಿದ್ಧತೆ

    ಮಹದೇಶ್ವರಬೆಟ್ಟ: ಮಲೆ ಮಹದೇಶ್ವರಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಮಹಾನವಮಿಯಂದು ತೂಗುಯ್ಯಲೆ ಹಾಗೂ ವಿವಿಧ ಉತ್ಸವವನ್ನು ನೆರವೇರಿಸುವುದರ ಮೂಲಕ ದಸರಾವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇದಕ್ಕಾಗಿ ಬೇಡಗಂಪಣ ಅರ್ಚಕರಿಂದ ಅಗತ್ಯ ಸಿದ್ಧತೆಗಳು ನಡೆದಿವೆ.


    ಪವಾಡ ಪುರುಷ ಮಹದೇಶ್ವರ ಸ್ವಾಮಿಗೆ ಬೇಡಗಂಪಣ ಪರಂಪರೆಯ ಪದ್ಧತಿಯಂತೆ ಮಹಾನವಮಿಯಂದು ಶ್ರೀ ಸಾಲೂರು ಬೃಹನ್ಮಠದ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮಹಾನವಮಿಯ ಪಟ್ಟದ ಉಯ್ಯಲೆ ಉತ್ಸವಕ್ಕೆ ಈಗಾಗಲೇ ಅಗತ್ಯವಿರುವ ಬಿದಿರು ಮರಗಳನ್ನು ಕಾಡಿನಿಂದ ತಂದು ದೇವಾಲಯದ ಪಶ್ಚಿಮ ದಿಕ್ಕಿನ ಕಂಠಶಾಲೆಯ ಆವರಣದಲ್ಲಿ ಹಸಿರು ಚಪ್ಪರ ಹಾಕಿ ತೂಗೂಯ್ಯಲೆಯ ತೊಟ್ಟಿಲು ಮಂಟಪವನ್ನು ನಿರ್ಮಿಸಲಾಗಿದೆ.


    9 ದಿನಗಳ ಕಾಲ ಪ್ರತಿದಿನ ದೇವಾಲಯದ ಒಳಾಂಗಣದಲ್ಲಿ ಮಾದಪ್ಪನ ಪಟ್ಟದ ಉಯ್ಯಲೆ ಉತ್ಸವ ಸೇವೆಯು ಬೇಡಗಂಪಣ ಮನೆತನದ ಅರ್ಚಕರಿಂದ ಜರುಗುತ್ತದೆ.
    ಉಪವಾಸ ಆಚರಿಸುವ 30ಕ್ಕೂ ಹೆಚ್ಚು ಬೇಡಗಂಪಣ ಅರ್ಚಕರು ಆಯುಧ ಪೂಜೆಯಂದು ಮಡಿವಸ್ತ್ರ ಧರಿಸಿ ದೇವಾಲಯದಲ್ಲಿರುವ ಪಟ್ಟಗಾರ ರಾಯಣ್ಣ ನಾಯಕನ ಯುದ್ಧ ಬಳಕೆಯ ಕತ್ತಿ, ಖಡ್ಗ, ಕಠಾರಿ, ಭರ್ಜಿಗಳು ಹಾಗೂ ಪಟ್ಟದ ಕತ್ತಿಗಳನ್ನು ಹೊತ್ತು ಮಂಗಳವಾದ್ಯಮೇಳದೊಂದಿಗೆ ಸತ್ತಿಗೆ, ಸೂರಿಪಾನಿ, ಛತ್ರಿ, ಚಾಮರ, ನಂದಿ ಧ್ವಜಕಂಬ, ತಮಟೆ, ನಗಾರಿ, ಜಾಗಟೆ ಸಮೇತ ಸಮೀಪದ ನಂದನವನದ ಮಜ್ಜನ ಬಾವಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.


    ವಜ್ರ, ರತ್ನಾಭರಣಗಳಿಂದ ಸಿಂಗಾರ: ಮೈಸೂರು ಅರಸು ಮನೆತನದ ಜಯಚಾಮರಾಜೇಂದ್ರ ಒಡೆಯರ್ ಅವರು ದಸರಾ ಅಂಗವಾಗಿ ಈ ಹಿಂದೆ ಮ.ಬೆಟ್ಟಕ್ಕೆ ವಜ್ರ, ರತ್ನಾಭರಣಗಳನ್ನು ನೀಡಿದ್ದರು. ಈ ಆಭರಣಗಳನ್ನು ಪ್ರತಿ ವರ್ಷ ಆಯುಧ ಪೂಜೆಯಂದು ಶಿವ -ಪಾರ್ವತಿ ಮೂರ್ತಿಗಳನ್ನು ಸಿಂಗರಿಸಿ ಉಯ್ಯಲೆ ಉತ್ಸವ ನೆರವೇರಿಸಲಾಗುತ್ತದೆ. ಈ ವೇಳೆ ಆನೆಯ ಕೊಂಬಿನ ದೊಡ್ಡಮುತ್ತು, ಮುತ್ತಿನಹಾರ, ಪಚ್ಚೆಯ ಪದಕ, ಬಂಗಾರದ ಮೀಸೆ, ಕಣ್ಮಣಿಗಳ ಜತೆಗೆ 37 ಬಂಗಾರದ ರುದ್ರಾಕ್ಷಿಯ ಮಾಲೆ, ವಜ್ರರತ್ನ ಖಚಿತವಾದ ಮುತ್ತುಗಳ ಕಿರೀಟ ಹಾಗೂ ಗಂಡಭೇರುಂಡ ಮುತ್ತಿನ ಹಾರದಿಂದ ಮೂರ್ತಿಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ತೂಗೂಯ್ಯಲೆಯಲ್ಲಿ ಮೂರ್ತಿಯನ್ನು ಕೂರಿಸಲಾಗುತ್ತಿದೆ.


    ಜಂಬೂಸವಾರಿ: ಬಿಳಿ ಕುದುರೆ ವಾಹನವು ವಿಜಯದಶಮಿಯಂದು ಜರುಗುವುದರ ಮೂಲಕ ಜಂಬೂಸವಾರಿಯನ್ನು ನಡೆಸಲಾಗುತ್ತದೆ. ಈ ಶ್ವೇತ ವರ್ಣದ ಕುದುರೆಯ ಮೇಲೆ ಮಹದೇಶ್ವರ ಸ್ವಾಮಿಯ ಪಟ್ಟದ ಕತ್ತಿಯನ್ನು ಬೇಡಗಂಪಣ ಅರ್ಚಕರು ಹಿಡಿದು ದುಷ್ಟ ಶಕ್ತಿಯನ್ನು ಸಂಹಾರ ಮಾಡುವುದು ಸಂಪ್ರದಾಯವಾಗಿದೆ.
    ಪಟ್ಟದ ಕತ್ತಿಗೆ ಬಲಿಪೂಜೆ: ಬೇಡಗಂಪಣ ರಾಜ್ಯದ ಮೇಲೆ ತಮಿಳುನಾಡಿನ ಕೊಂಗದೊರೆಯು ಪಟ್ಟಗಾರ ರಾಯಣ್ಣ ನಾಯಕನ ಮಗಳು ದೇವಕಿಯನ್ನು ಸೆರೆ ಹಿಡಿಯಲು ಬಂದಾಗ ಈಕೆಗೆ ಪಟ್ಟದ ಕತ್ತಿಯನ್ನು ನೀಡಲಾಗುತ್ತದೆ. ಈ ವೇಳೆ ಸೊರೆಕಾಯಿ ಮಡುವಿನಲ್ಲಿ ರಾಯಣ್ಣ ಗೆದ್ದ ಕಾರಣಕ್ಕೆ ಪಟ್ಟದ ಕತ್ತಿಗೆ ಪೂಜೆ ನೆರವೇರಿಸಲಾಗುತ್ತದೆ. ಇದು ಮ.ಬೆಟ್ಟದಲ್ಲಿ ದಸರಾ ಹಿನ್ನೆಲೆ ನಡೆಯುವ ಧಾರ್ಮಿಕ ಸಂಪ್ರದಾಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts