More

    ಮೌಲ್ಯಾಧಾರಿತ ವ್ಯಕ್ತಿ ನಿರ್ಮಾಣ ಮಾಡಿ

    ಕಲಬುರಗಿ: ಶಿಕ್ಷಣ ಕೇವಲ ಉದ್ಯೋಗಾರ್ಹ ವ್ಯಕ್ತಿಯಾಗಿ ಮಾಡುವುದಕ್ಕಿಂತ ಮೌಲ್ಯಾಧಾರಿತ ವ್ಯಕ್ತಿಯನ್ನಾಗಿ ಮಾಡಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದ ವ್ಯವಹಾರ ಅಧ್ಯಯನ ವಿಭಾಗದ ನೂತನ ಮುಖ್ಯಸ್ಥ ಡಾ.ಮೊಹಮ್ಮದ್ ಜೋಹೆರ್ ಹೇಳಿದರು.

    ಸಿಯುಕೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಎಂಬಿಎ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಿಜವಾದ ಮನುಷ್ಯರಿಗಿಂತ ಉದ್ಯೋಗವಂತರನ್ನಾಗಿ ಮಾಡುವುದರ ಮೇಲೆ ಹೆಚ್ಚು ಗಮನಹರಿಸುತ್ತಿರುವುದು ದುರದೃಷ್ಟಕರ ಎಂದರು.

    ಹೊಸ ಶಿಕ್ಷಣ ನೀತಿ ಪ್ರಕಾರ ನಾವು ಪಠ್ಯಕ್ರಮ ಪುನಾರಚಿಸುತ್ತಿದ್ದು, ಡಿಜಿಟಲ್ ಮಾರ್ಕೆಟಿಂಗ್, ವ್ಯವಹಾರ ವಿಶ್ಲೇಷಣೆಯೊಂದಿಗೆ ನಿರ್ವಹಣೆಯಲ್ಲಿ ಭಾರತೀಯ ಮೌಲ್ಯಗಳನ್ನು ಪರಿಚಯಿಸಲಾಗುತ್ತಿದೆ. ಇಂದಿನ ಸಮಾಜಕ್ಕೆ ಉದ್ಯೋಗಕ್ಕಿಂತ ಹೆಚ್ಚಾಗಿ ನೈತಿಕ, ತಾತ್ವಿಕ ಮತ್ತು ಸಾಮಾಜಿಕ ಜವಾಬ್ದಾರಿಯುಳ್ಳ ಜನರ ಅಗತ್ಯವಿದೆ. ಪ್ರಸ್ತುತ ನಿರ್ವಹಣೆ ಪಠ್ಯಕ್ರಮ ಸಂಪೂರ್ಣ ಪಾಶ್ಚಿಮಾತ್ಯರಿಂದ ಎರವಲು ಪಡೆಯಲಾಗಿದೆ. ಅದನ್ನು ಭಾರತೀಕರಣ ಮತ್ತು ಮಾನವೀಕರಣಗೊಳಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

    ಭಾರತೀಯ ಮೌಲ್ಯಾಧಾರಿತ ನಿರ್ವಹಣೆ ಇಂದಿನ ಅನೇಕ ಜಾಗತಿಕ ಸಮಸ್ಯೆಗಳಾದ ಸಮರ್ಥನೀಯವಲ್ಲದ ಬೆಳವಣಿಗೆ, ಸಂಪನ್ಮೂಲ ಸವಕಳಿ, ಮಾನವ ಶೋಷಣೆ, ಸಂಪತ್ತಿನ ಅಸಮಾನ ಹಂಚಿಕೆ ಪರಿಹರಿಸಬಹುದಾಗಿದೆ ಎಂದು ಹೇಳಿದರು.

    ವ್ಯವಹಾರ ಅಧ್ಯಯನ ನಿಕಾಯದ ಡೀನ್ ಡಾ.ಪುಷ್ಪಾವತಿ ಸವದತ್ತಿ ಮಾತನಾಡಿ, ಉದ್ಯಮಕ್ಕೆ ಅಗತ್ಯವಿರುವ ಪದವೀಧರರನ್ನು ತಯಾರಿಸಲು ನಾವು ಬದ್ಧ. ಕೇವಲ ಉದ್ಯೋಗಿ ಆಗಿರುವುದಕ್ಕಿಂತ ಜವಾಬ್ದಾರಿಯುತ ನಾಗರಿಕ, ನಿಜವಾದ ಮನುಷ್ಯರಾಗಬೇಕು. ನೀವೆಲ್ಲ ವಿಶ್ವವಿದ್ಯಾಲಯದ ರೂವಾರಿಗಳು. ನಮ್ಮ ಹೆಚ್ಚಿನ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಉದ್ಯೋಗ ಸಿಕ್ಕಿರುವುದು ಸಂತಸ ತಂದಿದೆ. ಭವಿಷ್ಯದಲ್ಲಿ ನಾವು ಎಲ್ಲ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಉದ್ಯೋಗ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
    ಡಾ.ಶಿವಕುಮಾರ ಬೆಳ್ಳಿ, ಡಾ.ಗಣಪತಿ ಸಿನ್ನೂರ, ಡಾ.ಸಫಿಯಾ ಪರ್ವೀನ್, ಡಾ.ಶುಷ್ಮಾ ಎಚ್., ಡಾ.ಶೈಲಜಾ ಕೊನೇಕ್ ಇತರರಿದ್ದರು.

    ವಿದ್ಯಾರ್ಥಿಗಳು ಜವಾಬ್ದಾರಿಯುತ ನಾಗರಿಕರಾಗಿ ಹೊರಹೊಮ್ಮಬೇಕು. ಭವಿಷ್ಯದಲ್ಲಿ ಸಿಯುಕೆ ಎಲ್ಲ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಉದ್ಯೋಗ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
    | ಡಾ.ಪುಷ್ಪಾವತಿ ಸವದತ್ತಿ
    ಡೀನ್, ವ್ಯವಹಾರ ಅಧ್ಯಯನ ವಿಭಾಗ ಸಿಯುಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts