More

    ಮೌಢ್ಯ ಬಿಡಿ, ಯೋಜನೆಗಳನ್ನು ಬಳಸಿ- ನ್ಯಾಯಾಧೀಶೆ ರಾಜೇಶ್ವರಿ

    ದಾವಣಗೆರೆ: ಗರ್ಭಿಣಿ, ಬಾಣಂತಿಯರು ಮೌಢ್ಯದಿಂದ ಹೊರ ಬಂದು ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್.ಹೆಗಡೆ ಹೇಳಿದರು.

    ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಪೋಷಣ್ ಮಾಸಾಚರಣೆ ಮತ್ತು ಮಾತೃವಂದನಾ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
    ಪ್ರಜೆಗಳು ಉತ್ತಮ ಆರೋಗ್ಯ ಹೊಂದಿದ್ದರೆ ಸದೃಢ ಸಮಾಜ ಕಾಣಬಹುದು. ಮಕ್ಕಳು ದೇಶದ ಭವಿಷ್ಯ. ಹಾಗಾಗಿ ಅವರು ಆರೋಗ್ಯ ಕಾಪಾಡಬೇಕು. ಗರ್ಭಿಣಿ ಮತ್ತು ಮಗು ಇಬ್ಬರು ಶಕ್ತಿಯುತವಾಗಿರಲು ಪೌಷ್ಟಿಕ ಆಹಾರ ಒದಗಿಸಬೇಕು. ಗರ್ಭಿಣಿಯರಿಗೆ ನೀಡಬೇಕಾದ ಆಹಾರ ಕುರಿತು ತಜ್ಞ ವೈದ್ಯರೊಂದಿಗೆ ಚರ್ಚಿಸಿ ಕ್ರಮ ವಹಿಸಬೇಕು ಎಂದರು.
    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್‌ನಾಯ್ಕ ಮಾತನಾಡಿ, ಗರ್ಭಿಣಿ ಮಹಿಳೆಯರಿಗೆ ಆಯಾ ಭೌಗೋಳಿಕ ಪ್ರದೇಶಗಳಿಗೆ ತಕ್ಕಂತೆ ಆಹಾರಗಳನ್ನು ಒದಗಿಸಲಾಗುತ್ತದೆ. ಉತ್ತಮ ಆಹಾರ ಸೇವನೆಯಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದರು.
    ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಮಾತನಾಡಿ, ಗರ್ಭಿಣಿ ಮಹಿಳೆಯರು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಸಬಲೀಕರಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದರು.
    ಜಿಲ್ಲಾ ಆಯುಷ್ ಅಧಿಕಾರಿ ಶಂಕರಗೌಡ ಮಾತನಾಡಿ, ಜಿಲ್ಲೆಯ 12,000 ಬಾಣಂತಿಯರಿಗೆ ಆಯುರ್ವೇದ ಔಷಧ ನೀಡುವ ಮೂಲಕ ಅಪೌಷ್ಟಿಕತೆ ಹೋಗಲಾಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಮಾತನಾಡಿದರು. ಪೋಷಣ್ ಮಾಸಾಚರಣೆ ಮತ್ತು ಮಾತೃವಂದನ ಸಪ್ತಾಹ ಕುರಿತ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಆರ್‌ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ ಅವರು ಆರೋಗ್ಯ ನೈರ್ಮಲ್ಯಿಕರಣ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
    ಕಾರ್ಯಕ್ರಮದಲ್ಲಿ ಡಿಎಚ್‌ಒ ಡಾ.ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ಜಿಲ್ಲಾ ಅಂಗವಿಲಕರ ಸಬಲೀಕರಣಾಧಿಕಾರಿ ಡಾ.ಕೆ.ಕೆ ಪ್ರಕಾಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪೂರ್ಣಿಮಾ ಸೇರಿದಂತೆ ವಿವಿಧ ಅಂಗನವಾಡಿ ಕಾರ್ಯಕರ್ತರು, ಸಿಡಿಪಿಒ ಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts