More

    ಮೋದಿ ಮಾತು ಮಾತ್ರ ಚೆಂದ, ಕೃತಿ ಶೂನ್ಯ

    ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರ  ಮಾತು ಕೇಳಲು ತುಂಬಾ ಚೆಂದ. ಆದರೆ ಕೃತಿ ಮಾತ್ರ ಶೂನ್ಯ. ವೋಟಿಗಾಗಿ ಅವರು ಎಂಥ ಕೆಲಸವನ್ನೂ ಮಾಡಲು ಹಿಂಜರಿಯುವುದಿಲ್ಲ ಎಂದು ಸಚಿವ ಶಿವಾನಂದ ಪಾಟೀಲ ವಾಗ್ದಾಳಿ ಮಾಡಿದರು.

    ಇಲ್ಲಿನ ಎಪಿಎಂಸಿ ಆವರಣದಲ್ಲಿ ಭಾಗವಾನ ಸಮಾಜ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾತನಾಡಬೇಕಾದ ವಿಷಯದ ಬಗ್ಗೆ ಪ್ರಧಾನಿ ಮೋದಿ ಮಾತನಾಡುವುದೇ ಇಲ್ಲ. ಮಣಿಪುರ ಹಿಂಸಾಚಾರವನ್ನು ಕಂಡೂ ಕಾಣದಂತೆ ಮೌನವಾಗಿದ್ದರು. ದೇಶದ ಆರ್ಥಿಕ ಸ್ಥಿತಿ ಸುಧಾರಣೆ, ಸಮಾಜದಲ್ಲಿ ಕೋಮು ಸೌಹಾರ್ದತೆ ಪಾಲನೆ, ಅಭಿವೃದ್ಧಿ ಬಿಜೆಪಿ ಸರ್ಕಾರದ ಆದ್ಯತೆ ಪಟ್ಟಿಯಲ್ಲೇ ಇಲ್ಲ ಎಂದು ಟೀಕಿಸಿದರು.

    ಕಾಂಗ್ರೆಸ್‌ ಪಕ್ಷ 70 ವರ್ಷ ಅಧಿಕಾರ ನಡೆಸಿ ದೇಶಕ್ಕೆ ಏನು ಕೊಡುಗೆ ನೀಡಿದೆ ಎಂದು ಬಿಜೆಪಿ ಮುಖಂಡರು ಪ್ರಶ್ನೆ ಮಾಡುತ್ತಾರೆ. ಆದರೆ ಅವರ 10 ವರ್ಷದ ಕೊಡುಗೆ ಏನು ಎಂಬುದನ್ನು ದೇಶದ ಜನರಿಗೆ ಹೇಳಬೇಕಾಗಿದೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಏನೂ ಮಾಡದಿದ್ದರೆ ಭಾರತ ದೇಶ ಅಭಿವೃದ್ಧಿ ಕಾಣಲು ಸಾಧ್ಯವಿತ್ತೇ ಎಂದು ಪ್ರ‍ಶ್ನಿಸಿದರು.

    ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣುವ ಏಕೈಕ ಪಕ್ಷ ಕಾಂಗ್ರೆಸ್‌ ಎಂದು ಬಣ್ಣಿಸಿದ ಅವರು, ಸಮಾಜದಲ್ಲಿ ಕೋಮು ಸಾಮರಸ್ಯ ಕಾಯ್ದುಕೊಳ್ಳಲು ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ ಎಂದರು. ದೇಶದಲ್ಲಿ ಮತ್ತೊಮ್ಮೆ ಮೋದಿ ಆಡಳಿತ ಬಂದರೆ ದೇಶ ಗಂಡಾಂತರಕ್ಕೆ‌ ಸಿಲುಕಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಹೇಳಿಕೆಗಳನ್ನು ಪ್ರಸ್ತಾಪಿಸಿ ವಾಗ್ದಾಳಿ ಮಾಡಿದರು. ನರೇಂದ್ರ ಮೋದಿ ಪ್ರಧಾನಿ ಯಾದರೆ ಭಾರತ ದೇಶ ಬಿಟ್ಟು ಹೋಗುವೆ ಎಂದು ಹೇಳಿದ್ದ ಗೌಡರು, ಇಂದು ಅವರ ಪಕ್ಕದಲ್ಲೇ ಕುಳಿತು ಗುಣಗಾನ ಮಾಡುತ್ತಾರೆ. ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಆಶಿಸುತ್ತಾರೆ. ಅವರ ಪಕ್ಷದ ತತ್ವ-ಸಿದ್ಧಾಂತಗಳು ಎಲ್ಲಿ ಹೋದವು ಎಂದು ಪ್ರಶ್ನಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಶ್ರೀಮಂತರ ಪರ, ಅವರಿಗೆ ಈ ದೇಶದ ಬಡವರ ಬಗ್ಗೆ ಕಾಳಜಿಇಲ್ಲ. ಅಂಬಾನಿ, ಅದಾನಿ ಅವರಂಥ ಉದ್ಯಮಗಳ ಪರವಾಗಿ ನಿಲ್ಲುವ ಮೋದಿಯವರಿಗೆ ನೇಕಾರರು, ರೈತರು , ಕೂಲಿಕಾರ್ಮಿಕರ ಬಗ್ಗೆ ಕಳಕಳಿ ಇಲ್ಲ. ಬಣ್ಣದ ಮಾತುಗಳ ಮೂಲಕ ಜನರನ್ನುಮರುಳು ಮಾಡಿ ಮತ ಗಳಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ ಎಂದು ಗೇಲಿ ಮಾಡಿದರು.

    ನಷ್ಟದ ನೆಪದಲ್ಲಿ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡುತ್ತಿದ್ದಾರೆ. ನಷ್ಟದಲ್ಲಿರುವ ಅವುಗಳನ್ನು ಪುನಶ್ಚೇತನಗೊಳಿಸುವ ಬದಲಿಗೆ ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ಇಂದು ಬಿಜೆಪಿ ನೇತೃತ್ವದ ಸರ್ಕಾರದ ಜನಪರ ಕಾಳಜಿ ಎಂದು ಕುಟುಕಿದರು.

    ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ದೇಶಕ್ಕೆ ನೀಡಿದ ಕೊಡುಗೆ ಏನು ಎಂದು ಪ್ರಶ್ನೆ ಮಾಡುವ ಬಿಜೆಪಿ ನಾಯಕರು ಜವಾಹರಲಾಲ ನೆಹರೂ, ಲಾಲಬಹದ್ದೂರ ಶಾಸ್ತ್ರಿ, ಶ್ರೀಮತಿ ಇಂದಿರಾಗಾಂದಿ, ರಾಜೀವಗಾಂಧಿ, ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಅನುಷ್ಠಾನಕ್ಕೆ ತಂದಿರುವ ಅಭಿವೃದ್ಧಿ ಯೋಜನೆಗಳ ಅವಲೋಕನ ಮಾಡಬೇಕು. ಆಹಾರ ಭದ್ರತೆ, ಹಸಿರು ಕ್ರಾಂತಿ, ಡಿಜಿಟಲೈಜೇಷನ್‌, ಬ್ಯಾಂಕುಗಳ ರಾಷ್ಟ್ರೀಕರಣ ಇವೆಲ್ಲ ಕೊಡುಗೆ ಯಾರದ್ದು ಎಂಬುದನ್ನು ನೆನಪು ಮಾಡಿಕೊಳ್ಳಬೇಕು ಎಂದರು.

    ಮಾಜಿ ಸಚಿವ ಎಸ್.ಆರ್‌. ಪಾಟೀಲ, ಕೆಪಿಸಿಸಿ ಉಪಾಧ್ಯಕ್ಷ ಅಜಯಕುಮಾರ ಸರನಾಯಕ, ಹಟ್ಟಿ ಗೋಲ್ಡ್‌ ಮೈನ್ಸ್‌ ಅಧ್ಯಕ್ಷ ಜೆ.ಟಿ. ಪಾಟೀಲ, ಶಾಸಕ ಎಚ್‌.ವೈ. ಮೇಟಿ ಮಾತನಾಡಿದರು. ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಜಮಾತ ಅಧ್ಯಕ್ಷ ಎಂ.ಎಂ. ಭಾಗವಾನ್‌, ಐ.ಎ. ಮಮದಾಪುರ, ಎಚ್.ಡಿ. ಚೌಧರಿ, ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಶಾಂತಾನಾಯಕ್‌, ಮಲ್ಲಿಕಾರ್ಜುನ ಚರಂತಿಮಠ, ಸಂತೋಷ ಹೊಕ್ರಾಣಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts