More

    ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಬಿಜೆಪಿ-ಜೆಡಿಎಸ್ ಒಗ್ಗೂಡಿ ಕೆಲಸ: ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್ ವಿಶ್ವಾಸ

    ಹಾಸನ: ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ಲೋಕಸಭೆ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೈ ಕಮಾಂಡ್ ಯಾವ ತೀರ್ಮಾನ ತೆಗೆದುಕೊಂಡರೂ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಲಿದ್ದಾರೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್ ವಿಶ್ವಾಸ ವ್ಯಕ್ತಪಡಿಸಿದರು.

    ಮೈತ್ರಿ ಅಡಿಯಲ್ಲಿ ಹೈ ಕಮಾಂಡ್ ಯಾವುದೇ ತೀರ್ಮಾನ ಕೈಗೊಂಡರು ಬಿಜೆಪಿ- ಜೆಡಿಎಸ್ ಎರಡು ಪಕ್ಷಗಳ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಲಿದ್ದಾರೆ. ಹಾಸನದಲ್ಲಿ ಕೂಡ ಈಗಾಗಲೇ ತಾನು ಪ್ರೀತಂ ಗೌಡ ಹಾಗೂ ಇತರರ ಜತೆಗೂ ಮಾತನಾಡಿದ್ದೇನೆ. ಬಿಜೆಪಿಗೆ ಟಿಕೆಟ್ ನೀಡಿದರು, ನೀಡದಿದ್ದರೂ ಎಲ್ಲರೂ ಒಗ್ಗೂಡಿ ಕೆಲಸ ಮಾಡಲಿದ್ದೇವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿ ಇದೀಗ ಮುಂದಿನ ಚುನಾವಣೆಗೆ ಸಜ್ಜಾಗಿದ್ದಾರೆ. ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ, ರಾಮ ಮಂದಿರ ಕಟ್ಟಿದ್ದೇವೆ. ಅಲ್ಲದೆ ಜನಸಾಮಾನ್ಯರಿಗೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದೇವೆ. ಜತೆಗೆ ಜಿಎಸ್‌ಟಿ ಮೂಲಕ ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಾಕಷ್ಟು ಹಣ ನೀಡಿದೆ. ಆದರೆ ವಿರೋಧ ಪಕ್ಷಗಳು ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿವೆ. ಆದರೆ ಅವರು ಏನೇ ಪ್ರಯತ್ನ ಮಾಡಿದರೂ ದೇಶದ ಬಗ್ಗೆ ಯೋಚಿಸುವ ಜನಸಾಮಾನ್ಯರು, ಮತದಾರರು ಮೋದಿ ಅವರಿಗೆ ಮತ ನೀಡುವ ಮೂಲಕ ಮೂರನೇ ಬಾರಿಗೆ ಪ್ರಧಾನಮಂತ್ರಿ ಮಾಡುವುದು ನಿಶ್ಚಿತ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 400 ಸೀಟ್‌ಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ. ಈಗಾಗಲೇ ಬಿಜೆಪಿ ವಿವಿಧ ನಾಯಕರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದು ರಾಜ್ಯದಲ್ಲಿ ಈ ಬಾರಿ ಬಿಜೆಪಿ ಬಗ್ಗೆ ಜನರ ಒಲವು ಹೆಚ್ಚಾಗಿದೆ ಎಂದರು.

    ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಈ ಹಿಂದೆ ಚುನಾವಣೆಯಲ್ಲಿ ಸೋಲಿಸಿ ಅವರು ಮರಣ ಹೊಂದಿದಾಗ ಅಂತ್ಯ ಸಂಸ್ಕಾರಕ್ಕೆ ಕೂಡ ಜಾಗ ನೀಡಲು ಹಿಂದೇಟು ಹಾಕಿದ್ದರು. ಆದರೆ ಬಿಜೆಪಿ ಅಂಬೇಡ್ಕರ್ ಅವರ ಕೊಡುಗೆ ಗುರುತಿಸಿ ಅವರು ಭೇಟಿ ನೀಡಿದ್ದ ಸ್ಥಳಗಳನ್ನು ಗುರುತಿಸಿ ಸ್ಮಾರಕ ನಿರ್ಮಿಸಿ ಅವರನ್ನು ನೆನಪಾಗಿ ಉಳಿಸುವ ಕೆಲಸ ಮಾಡಿದೆ. ಬರ ಪರಿಸ್ಥಿತಿ ವೇಳೆ ಕೇಂದ್ರ ಸರ್ಕಾರದ ಹಣ ಬಳಕೆ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿ ಮಾಡಿಕೊಂಡು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಕೇವಲ ಭಾವನಾತ್ಮಕ ವಿಚಾರಗಳನ್ನು ತಂದು ಜನರ ನಡುವೆ ಆತಂಕದ ವಾತಾವರಣ ಸೃಷ್ಟಿ ಮಾಡುವ ಕೆಲಸ ಮಾಡಿದೆ. ಜಿಎಸ್‌ಟಿ ಹಣದ ಬಗ್ಗೆ ಮಾತನಾಡುವ ಕಾಂಗ್ರೆಸ್ ಹೆಚ್ಚು ತೆರಿಗೆ ಕಟ್ಟುವವರಿಗೆ ಆ ಕ್ಷೇತ್ರಕ್ಕೆ ಹೆಚ್ಚಿನ ತೆರಿಗೆ ಹಣ ಬಳಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

    ಉಳ್ಳ ಹಾಗೂ ಇಲ್ಲದ ಎಲ್ಲರನ್ನೂ ಸಮಾನವಾಗಿ ಪರಿಗಣಿಸಿ ಎಲ್ಲರಿಗೂ ಸಮಾನ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಈ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ದ ಕೆಲಸಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವ ಸಲುವಾಗಿ ಶ್ರಮ ವಹಿಸುತ್ತಿದ್ದು ದೇಶದ ಸಮಸ್ತ ಜನರು ಈ ಬಾರಿ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

    ಕಾಂಗ್ರೆಸ್ ಸರ್ಕಾರ ಕೇವಲ ಬಿಜೆಪಿಯನ್ನು ದೂಷಿಸುವುದು ಬಿಟ್ಟು ಬೇರೇನೂ ಮಾಡಿಲ್ಲ. ಗ್ಯಾರಂಟಿ ಯೋಜನೆಯ ಆಮಿಷ ಒಡ್ಡಿ ಜನರ ದಿಕ್ಕು ತಪ್ಪಿಸಿ ಮತ ಗಳಿಸಿದೆ. 14ನೇ ಹಣಕಾಸು ಯೋಜನೆಯಲ್ಲಿ ಎಷ್ಟು ಹಣ ತೆಗೆದಿದ್ದೀರಿ ಎಂದು ಶ್ವೇತ್ರ ಪತ್ರ ಹೊರತನ್ನಿ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು.
    ಸುದ್ದಿಗೋಷ್ಠಿಯಲ್ಲಿ ಎಂಎಲ್‌ಸಿ ಭಾರತಿ ಶೆಟ್ಟಿ, ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮಿತ್ ಶೆಟ್ಟಿ, ಮುಖಂಡ ಪ್ರಸನ್ನ ಕುಮಾರ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts