More

    ಕೆಟ್ಟ ಮೇಲೆ ಬುದ್ಧಿ ಬಂತು!

    ಮಂಜುನಾಥ ತಿಮ್ಮಯ್ಯ ಮೈಸೂರು

    ಗುಡುಗು, ಸಿಡಿಲು, ಬಿರುಗಾಳಿ, ಆಲಿಕಲ್ಲು ಸಹಿತ ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಸಾಲು ಸಾಲು ಮರಗಳು ಉರುಳಿ ಬಿದ್ದು ಸಾಕಷ್ಟು ಅವಾಂತರ ಸೃಷ್ಟಿಸಿದ ಬಳಿಕ ಮೈಸೂರು ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದೆ.


    ‘ಕೆಟ್ಟ ಮೇಲೆ ಬುದ್ಧಿ ಬಂತು’ ಎನ್ನುವಂತೆ ಹಾನಿಯಾದ ಬಳಿಕ ಇದೀಗ ಪಾಲಿಕೆ ನಿದ್ದೆಯಿಂದ ಎದ್ದಿದೆ. ಈಗಾಗಲೇ ಬಿದ್ದಿರುವ ಮರಗಳ ತೆರವು ಕಾರ್ಯಾಚರಣೆ ನಡೆಸಿ, ಬೀಳುವ ಸ್ಥಿತಿಯಲ್ಲಿರುವ ಮರಗಳ ತೆರವು, ದುರ್ಬಲ ಕೊಂಬೆಗಳ ಟ್ರಿಮ್ ಮಾಡುವ ಕೆಲಸಕ್ಕೆ ಪಾಲಿಕೆ ಮುಂದಾಗಿದೆ.


    ಮೇ 3ರಂದು ಸುರಿದ ಧಾರಾಕಾರ ಮಳೆ ನಗರದ ಬಣ್ಣ ಬಯಲು ಮಾಡಿತು. 200 ಮರಗಳು ನೆಲಕ್ಕೆ ಉರುಳಿದವು. ಇದರ ಪರಿಣಾಮವಾಗಿ 177 ವಿದ್ಯುತ್ ಕಂಬಗಳು ಉರುಳಿ ಕಾರು, ಬೈಕ್‌ಗಳಿಗೂ ಹಾನಿ ಉಂಟಾಯಿತು.

    ಜನಜೀವನವೂ ಅಸ್ತವ್ಯಸ್ತಗೊಳಿಸಿತು. ಇದಕ್ಕೆ ಬಲಹೀನ ಮರಗಳು ಗಾಳಿ, ಮಳೆಗೆ ನೆಲಕ್ಕೆ ಅಪ್ಪಳಿಸಿದ್ದು ಮುಖ್ಯ ಕಾರಣ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಸಕಾಲಕ್ಕೆ ಪಾಲಿಕೆ ದುರ್ಬಲ ಮರಗಳನ್ನು ತೆರವು ಮಾಡದಿದ್ದರಿಂದ ಈ ಅನಾಹುತ ಸೃಷ್ಟಿಯಾಯಿತು ಎಂದು ಚರ್ಚಿಸಲಾಗುತ್ತಿದೆ. ಪಾಲಿಕೆ ನಿರ್ಲಕ್ಷೃದ ಕುರಿತು ಸಾರ್ವಜನಿಕ ವಲಯದಲ್ಲೂ ಆಕ್ರೋಶ ವ್ಯಕ್ತವಾಗಿದೆ.


    ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪಾಲಿಕೆ ಅಧಿಕಾರಿಗಳ ಸಭೆಯಲ್ಲಿ ಮುಂದೇನು ಮಾಡಬೇಕು ಎಂಬುದರ ಕುರಿತು ಸಮಾಲೋಚಿಸಲಾಯಿತು.

    ದುರ್ಬಲ ಮರಗಳ ತೆರವು, ಬೀಳುವ ಮರಗಳ ಕಡಿಯಲು ಕ್ರಮ, ರಸ್ತೆಗೆ ಚಾಚಿಕೊಂಡಿರುವ ಅಶಕ್ತ ಕೊಂಬೆಗಳ ಟ್ರಿಮ್ ಮಾಡಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಇದರ ಬೆನ್ನ ಹಿಂದೆಯೇ ಪಾಲಿಕೆಯ 7 ವಲಯವಾರು ತೆರವು ಕಾರ್ಯಾಚರಣೆ ಕೈಗೊಳ್ಳಲು ತಕ್ಷಣದಿಂದ ಕಾರ್ಯಪ್ರವೃತ್ತವಾಗಿದೆ. ಇದೇ ಕೆಲಸವನ್ನು ಮೊದಲೇ ಮಾಡಿದ್ದರೆ ಇಷ್ಟೊಂದು ಅನಾಹುತ ಆಗುತ್ತಿರಲಿಲ್ಲ.


    ಪ್ರತಿ ವರ್ಷ ಪಾಲಿಕೆ ವತಿಯಿಂದ ಮಳೆಗಾಲಕ್ಕೂ ಮುನ್ನ ಒಣಗಿದ ಮರಗಳು, ಅಶಕ್ತ ಮರಗಳನ್ನು ಸಮೀಕ್ಷೆ ಮಾಡಿ ಗುರುತಿಸಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಈ ಕೆಲಸವಾಗಿಲ್ಲ.


    ಪ್ರತಿವರ್ಷ ಶಕ್ತಿಹೀನ ಮರಗಳನ್ನು ಗುರುತಿಸುವ ಪ್ರಕ್ರಿಯೆ ಮಾಡಿಲ್ಲ. ಅರಣ್ಯ ಇಲಾಖೆ ಹಾಗೂ ನಗರಪಾಲಿಕೆ ನಡುವೆ ಈ ಕುರಿತು ಸಮಾಲೋಚನಾ ಸಭೆಯೂ ಜರುಗಿಲ್ಲ. ಈ ಕೆಲಸವೂ ಕಾರ್ಯಗತವಾಗಲಿಲ್ಲ. ನಗರದಲ್ಲಿರುವ ಬಲಹೀನ ಮರಗಳನ್ನು ಗುರುತಿಸಿ ಕಟಾವು ಮಾಡಲು, ಇಲ್ಲವೆ ರೆಂಬೆ ಕೊಂಬೆಗಳನ್ನು ಕಡಿತ ಮಾಡಲು ಪಾಲಿಕೆ ಪ್ರತಿ ವರ್ಷ ಮಾಡುವ ಪ್ರಕ್ರಿಯೆ.

    ಅದಕ್ಕಾಗಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸುತ್ತದೆ. ಆದರೆ ಈ ಸಲ ಪಾಲಿಕೆ ವತಿಯಿಂದ ಇನ್ನೂ ಸಮೀಕ್ಷೆ ಪ್ರಕ್ರಿಯೆ ಶುರು ಮಾಡಲಿಲ್ಲ. ಇದರ ಫಲವಾಗಿ ಇತ್ತೀಚಿಗೆ ಮಳೆಗೆ ನಗರದ ವಿವಿಧ ಬಡಾವಣೆಗಳಲ್ಲಿ ಸುಮಾರು 200 ಮರಗಳು, 80 ಮರಳ ರೆಂಬೆಕೊಂಬೆಗಳು ನೆಲಕ್ಕುರುಳಿವೆ.


    ಪಾಲಿಕೆ ಅಭಯ ತಂಡ ಹಾಗೂ ಸೆಸ್ಕ್ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿ ನಗರವನ್ನು ಸಹಜ ಸ್ಥಿತಿಗೆ ತರಲು ಹರಸಹಾಸಪಟ್ಟರು. ಅರಣ್ಯ ಇಲಾಖೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಈ ಕೆಲಸಕ್ಕೆ ಸಹಕಾರ ನೀಡಲಿಲ್ಲ ಎನ್ನಲಾಗಿದೆ. ಸರ್ಕಾರಿ ಸಂಸ್ಥೆಗಳ ಸಮನ್ವಯತೆ ಕೊರತೆಯಿಂದ ಬಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯ ಪರಿಣಾಮಕಾರಿ ಆಗಿಲ್ಲ. ಇನ್ನೂ ಬಹಳಷ್ಟು ಬಡಾವಣೆ, ರಸ್ತೆಯಲ್ಲಿ ಮರಗಳ ಅವಶೇಷಗಳು ಹಾಗೇ ಬಿದ್ದಿರುವುದೇ ಇದಕ್ಕೆ ಸಾಕ್ಷಿ.


    ಈ ಬಾರಿ ಅಧಿಕ ಉಷ್ಣಾಂಶದಿಂದ ನಗರದ ವಿವಿಧೆಡೆ ಮರಗಳೆಲ್ಲ ಒಣಗಿ ಶಕ್ತಿ ಕಳೆದುಕೊಂಡಿವೆ. ತೇವಾಂಶ ಇಲ್ಲದೆ ರೆಂಬೆಕೊಂಬೆಗಳು ಮುರಿದು ಬೀಳುವ ದುಸ್ಥಿತಿ ತಲುಪಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

    ಪಾಲಿಕೆ ಹಾಗೂ ಅರಣ್ಯ ಇಲಾಖೆ ಅಸಡ್ಡೆಯಿಂದ ಜನರು ಭಯದಲ್ಲೇ ಜೀವನ ನಡೆಸುವಂತಾಗಿದೆ. ಶುಕ್ರವಾರ ಸುರಿದ ಮಳೆಯಿಂದ ಬಲಹೀನ ಮರಗಳು, ಅವುಗಳ ರೆಂಬೆಕೊಂಬೆ ಆಟೋ, ಬಸ್, ಮನೆ ಹಾಗೂ ಶಾಲಾ ವಾಹನಗಳ ಮೇಲೆ ಬಿದ್ದು ಹಾನಿ ಉಂಟು ಮಾಡಿವೆ. ಇದಕ್ಕೆ ಯಾರು ಹೊಣೆ ? ಸಾರ್ವಜನಿಕ ಆಸ್ತಿ-ಪಾಸ್ತಿಯೂ ನಷ್ಟವಾಗಿದೆ.

    ಬಿದ್ದ ಮರಗಳಿಂದ ಸಾವು-ನೋವು


    ಮಳೆಯಿಂದ ಮರಗಳು ಬಿದ್ದು ಸಾವು-ನೋವುಗಳು ಸಂಭವಿಸಿವೆ. ನಗರದ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ರಾಜೀವ್‌ನಗರದ ನಿವಾಸಿ ನೂರ್ ಅಹಮ್ಮದ್(54) ಮೇಲೆ ಮರದ ಕೊಂಬೆ ಬಿದ್ದು ಗಾಯಗೊಂಡಿದ್ದರು.


    ಜೋರು ಮಳೆಗೆ ಗಾರೆ ಕೆಲಸ ಮಾಡುತ್ತಿದ್ದ ಕಾರ್ಮಿಕ, ಮಾರಶೆಟ್ಟಿಹಳ್ಳಿ ನಿವಾಸಿ ಶಿವಕುಮಾರ್(36) ಮೃತಪಟ್ಟಿದ್ದರು. ಮರ ಹಾಗೂ ಕೊಂಬೆ ಮುರಿದು ಬಿದ್ದು ನಾಲ್ವರಿಗೆ ಗಾಯಗಳಾಗಿವೆ. ಇವರು ಕಟ್ಟಡ ನಿರ್ಮಾಣ ಕೆಲಸ ನಿರ್ವಹಿಸುತ್ತಿದ್ದ ಶಿವಕುಮಾರ್ ಗಾಳಿ-ಮಳೆ ಆರಂಭವಾದಾಗ ಪಕ್ಕದ ಕೊಠಡಿಯಲ್ಲಿ ಆಶ್ರಯ ಪಡೆಯುತ್ತಿದ್ದರು. ಈ ವೇಳೆ ಘಟನೆ ನಡೆದಿದೆ. ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


    ಮಳೆಗೆ ಮರದ ಕೊಂಬೆಗಳು ಬಿದ್ದು ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಗಾಯಗೊಂಡಿರುವ ಜೆಎಸ್‌ಎಸ್ ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿ ಸಹನಾ, ಅಮೀರ್, ಎಂ.ಡಿ. ಶಂಶುದ್ಧೀನ್ ಅವರು ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.


    ಸೆಸ್ಕ್‌ಗೆ ಹೆಚ್ಚಿನ ಹಾನಿ

    ಮಳೆಯಿಂದ ನಗರದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದ ಆಸ್ತಿಗಳಿಗೆ ಹೆಚ್ಚಿನ ಹಾನಿಯಾಗಿದೆ. ಮೈಸೂರಿನಲ್ಲಿ 117 ವಿದ್ಯುತ್ ಕಂಬಕ್ಕೆ ಭೂಮಿಗೆ ಉರುಳಿ 19.94 ಲಕ್ಷ ರೂ., ಹಾಳಾದ 9 ವಿದ್ಯುತ್ ಪರಿವರ್ತಕ(ಟಿಸಿ)ಗಳಿಂದ 6.26 ಲಕ್ಷ ರೂ. ನಷ್ಟವಾಗಿದೆ. ವಿದ್ಯುತ್ ಕಂಬಗಳು, ಮರಗಳು ಉರುಳಿ ಬಿದ್ದಿರುವುದರಿಂದ 13.80 ಕಿಲೋ ಮೀಟರ್‌ನಷ್ಟು ವಿದ್ಯುತ್ ತಂತಿ ಹಾಳಾಗಿ 5.19 ಲಕ್ಷ ರೂ. ಹಾನಿಯಾಗಿದ್ದು, ಅಂದಾಜು 30.29 ಲಕ್ಷ ರೂ. ಲುಕ್ಸಾನವಾಗಿದೆ.


    ಮಳೆಯಿಂದ ನಗರದಲ್ಲಿ ಸಾಕಷ್ಟು ಮರಗಳು ಬಿದ್ದಿವೆ. ಇವುಗಳು ತೆರವುಗೊಳಿಸಿ ರಸ್ತೆ, ಪಾದಚಾರಿ ಮಾರ್ಗ ಸುಗಮಗೊಳಿಸಲಾಗುವುದು. ಬೀಳುವ ಸ್ಥಿತಿಯಲ್ಲಿರುವ ಮರಗಳನ್ನೂ ತೆರವುಗೊಳಿಸಲಾಗುವುದು.
    ಎನ್.ಎನ್.ಮಧು,

    ಆಯುಕ್ತೆ, ಮೈಸೂರು ಮಹಾನಗರ ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts