More

    ಮೋದಿ ಅದಾನಿ, ಅಂಬಾನಿ ರಕ್ಷಕ

    ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸ ಅದಾನಿ, ಅಂಬಾನಿ ಪೋಷಣೆಗಾಗಿಯೇ ಹೊರತು ದೇಶದ ಹಿತಾಸಕ್ತಿಗಾಗಿ ಅಲ್ಲ. ಈವರೆಗೂ ಅನ್ಯ ರಾಷ್ಟ್ರಗಳಿಂದ ಎಷ್ಟು ಬಂಡವಾಳ ತಂದಿದ್ದಾರೆ ಎಂಬುದನ್ನೇ ತಿಳಿಸಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಆರೋಪಿಸಿದರು.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯವಷ್ಟೇ ಅಲ್ಲ, ಇಡೀ ದೇಶದಲ್ಲೇ ಬರಗಾಲ ಎದುರಾಗಿದೆ. ಈ ಕುರಿತು ಮೋದಿ ಚಕಾರ ಎತ್ತುತ್ತಿಲ್ಲ. ಅಗತ್ಯ ನೆರವು ನೀಡುತ್ತಿಲ್ಲ. ಜಲ ಮತ್ತು ವಿದ್ಯುತ್ ಕ್ಷಾಮ ಎದುರಾಗಿದ್ದು, ಕೇಂದ್ರದ ಮುಂದೆ ವಾಸ್ತವ ಪರಿಸ್ಥಿತಿ ತಿಳಿಸಿ ಅನುದಾನ ತಂದು ವಿರೋಧ ಪಕ್ಷವಾಗಿ ಜನಪರ ಕೆಲಸ ಮಾಡುವ ಬದಲು ಯಾರದೋ ಮನೆಯಲ್ಲಿ ಸಿಕ್ಕ ದುಡ್ಡನ್ನೇ ಕಾಂಗ್ರೆಸ್ ಪಕ್ಷದ್ದು ಎನ್ನುವ ಬಿಜೆಪಿ ನಾಯಕರು ಕೆಟ್ಟ ರಾಜಕೀಯಕ್ಕೆ ಮುಂದಾಗಿದ್ದಾರೆ ಎಂದು ಕೆಂಡಾಮಂಡಲವಾದರು.

    ಮೋದಿ ವಿರೋಧಿ ಅಲೆ ಇದ್ದು, ಜನಪರ ಆಡಳಿತ ನೀಡಲಾಗದ ಕೋಮುವಾದಿಗಳು ಧರ್ಮಗಳ ಮಧ್ಯೆ ಬೆಂಕಿ ಹಚ್ಚಿ, ತಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಳ್ಳುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷವನ್ನೇ ದೇಶದಿಂದಲೇ ಹೊರಹಾಕಬೇಕಿದೆ. ಕಾಂಗ್ರೆಸ್ ಗಟ್ಟಿಯಾಗುತ್ತಿದ್ದು, ಸಂಘಟನೆ ಚುರುಕಾಗಿದೆ. ರಾಜ್ಯದಲ್ಲಿ 28 ಸೀಟು ಗೆಲ್ಲಲಿದ್ದೇವೆ. ಕೇಂದ್ರದಲ್ಲಿ ನಮ್ಮದೇ ಸರ್ಕಾರ ಎಂದು ಭವಿಷ್ಯ ನುಡಿದರು.

    ದೇಶದಲ್ಲಿ ಅಘೋಷಿತ ತುರ್ತು ಸಂದರ್ಭವಿದೆ. ಪ್ರಧಾನಿ ವಿರುದ್ಧ ಯಾರೂ ಮಾತನಾಡುವಂತಿಲ್ಲ. ಪತ್ರಿಕೆಗಳನ್ನು ಹತ್ತಿಕ್ಕುವ ಕೆಲಸ ಕೇಂದ್ರ ಈಗಾಗಲೇ ಮಾಡಿದೆ. ಕಾಂಗ್ರೆಸ್ ಮಾಡಿದರೂ ತಪ್ಪೆ. ಜಾರ್ಖಂಡ್‌ನಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ 4 ವರ್ಷಗಳ ಬಳಿಕ ನಡೆದಿದೆ. ಕರ್ನಾಟಕದಲ್ಲಿ ಸಮರ್ಥರು ಇಲ್ಲವೋ ಅಥವಾ ಇಲ್ಲಿನ ನಾಯಕರ ಕುರಿತು ತಿರಸ್ಕಾರವೋ ಗೊತ್ತಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ಬೆಳವಣಿಗೆ ಎಂದು ಕಿಡಿಕಾರಿದರು.

    ಮಾಜಿ ಶಾಸಕ ಎ.ವಿ.ಉಮಾಪತಿ, ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎಮ್ಮೇಹಟ್ಟಿ ಕೃಷ್ಣಮೂರ್ತಿ, ಮುಖಂಡರಾದ ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಬಿ.ಟಿ.ಜಗದೀಶ್, ಕರಿಯಪ್ಪ, ಗಂಗಾಧರ್, ಕಾರೇಹಳ್ಳಿ ಉಲ್ಲಾಸ್, ಹಫೀಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts