More

    ಮೊಳಗಿದ ಕೋಟಿ ಕಂಠ ಗಾಯನ

    ಮೈಸೂರು: ನೆತ್ತಿ ಸುಡುವ ಬಿಸಿಲು ಲೆಕ್ಕಿಸದೆ ಉಕ್ಕಿ ಹರಿದ ಕನ್ನಡಾಭಿಮಾನ. ಇದರೊಂದಿಗೆ ಕನ್ನಡ ಹಾಡುಗಳ ಗೀತಗಾಯನದ ನಿನಾದ, ಸಂಗೀತ ಸಿಂಚನ!


    ವಿಶ್ವವಿಖ್ಯಾತ ಮೈಸೂರು ಅರಮನೆ ಅಂಗಳದಲ್ಲಿ ಶುಕ್ರವಾರ ಆಯೋಜಿಸಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಾವಳಿಗಳು ಇವು.
    67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ‘ನನ್ನ ನಾಡು, ನನ್ನ ಹಾಡು’ ಶೀರ್ಷಿಕೆಯಡಿ ಆಯೋಜಿಸಿದ್ದ ಈ ವಿಶೇಷ ಕಾರ್ಯಕ್ರಮ ಕಳೆಗಟ್ಟಿತ್ತು. ನಗರದ ವಿವಿಧ ಶಾಲಾ, ಕಾಲೇಜುಗಳ 15 ಸಾವಿರ ವಿದ್ಯಾರ್ಥಿಗಳು ಭಾಗಿಯಾಗಿ ಸಂಭ್ರಮಿಸಿ ಕನ್ನಡಾಭಿಮಾನ ಮೆರೆದರು. ರಾಜ್ಯಾದ್ಯಂತ ನಡೆದ ಈ ಕಾರ್ಯಕ್ರಮ ಮೈಸೂರಿನಲ್ಲೂ ಕನ್ನಡ ಕಂಪು ಪಸರಿಸಿತು.


    ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಒಂದೇ ಸಮಯದಲ್ಲಿ ಏಕಕಂಠದಲ್ಲಿ ಕನ್ನಡ ಗೀತೆಗಳನ್ನು ಹಾಡಿದರು. ‘ಮಾತಾಡ್ ಮಾತಾಡು ಕನ್ನಡ’ ಎಂಬ ಘೋಷವಾಕ್ಯದೊಂದಿಗೆ ನಡೆದ ಸಾಮೂಹಿಕ ಗಾಯನದಲ್ಲಿ ಸಹಸ್ರಾರು ಕಂಠಗಳ ಸಂಗಮವಾಯಿತು.
    ಅರಮನೆ ಆವರಣದಲ್ಲಿ ಹಾಕಲಾಗಿದ್ದ ವೇದಿಕೆಯಲ್ಲಿ ಗಣ್ಯರು ನಿಂತುಕೊಂಡು ಸಂಗೀತವನ್ನು ಆಸ್ವಾದಿಸಿದರು. ಪಕ್ಕದಲ್ಲಿ ಇನ್ನೊಂದು ಸಂಗೀತ ವೇದಿಕೆಯಲ್ಲಿ 15 ಗಾಯಕರು ಸಾಮೂಹಿಕವಾಗಿ ಹಾಡಿದರು. ಇದನ್ನು ಅನುಸರಿಸಿ ಅಲ್ಲಿ ನೆರೆದಿದ್ದ ಸಹಸ್ರಾರು ಜನರು ಧ್ವನಿಗೂಡಿಸಿದರು.


    ಮಾರ್ದನಿಸಿದ ಹಾಡುಗಳು :
    ಕುವೆಂಪು ರಚನೆಯ ನಾಡಗೀತೆ ‘ಜಯಭಾರತ ಜನನಿಯ ತನುಜಾತೆ’ ಹಾಡು ಮೊದಲು ಮೊಳಗಿತು. ಬಳಿಕ ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ಡಾ.ಡಿ.ಎಸ್.ಕರ್ಕಿ ರಚನೆಯ ‘ಹಚ್ಚೇವು ಕನ್ನಡದ ದೀಪ’ ಮತ್ತು ಚನ್ನವೀರ ಕಣವಿಯ ಅವರ ‘ವಿಶ್ವವಿನೂತನ ವಿದ್ಯಾಚೇತನ’ ಹಾಡುಗಳು ಒಂದರ ಮೇಲೊಂದು ಮಾರ್ದನಿಸಿತು.


    ಆಕಸ್ಮಿಕ ಚಲನಚಿತ್ರದ, ಡಾ.ರಾಜ್‌ಕುಮಾರ್ ಕಂಠದ, ಹಂಸಲೇಖ ರಚನೆಯ ‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು’ ಹಾಡು ಜನಸಮೂಹದ ನಡುವೆ ಸಂಚಲನಕ್ಕೆ ಕಾರಣವಾಯಿತು. ಅಷ್ಟು ಹೊತ್ತು ಶಾಂತವಾಗಿದ್ದ ಗೀತಗಾಯನದಲ್ಲಿ ಈ ಹಾಡು ಎಲ್ಲರನ್ನು ರೋಮಾಂಚನಗೊಳಿಸಿತು. ವಿದ್ಯಾರ್ಥಿಗಳು ನೃತ್ಯ ಮಾಡಿದರು. ಕೆಲವರು ಚಪ್ಪಾಳೆ ತಟ್ಟಿದರು. ವೃದ್ಧರೂ ಸಾಮೂಹಿಕವಾಗಿ ನರ್ತನ ಮಾಡಿ ಗಮನ ಸೆಳೆದರು.

    ಕುಸಿದು ಬಿದ್ದ ವೃದ್ಧೆ:
    ಬೆಳಗ್ಗೆ 11ಕ್ಕೆ ಶುರುವಾದ ಕಾರ್ಯಕ್ರಮ ಅರ್ಧಗಂಟೆಯಲ್ಲಿ ಮುಕ್ತಾಯಗೊಂಡಿತು. ಬಿಸಿಲಿನ ಪ್ರಖರತೆ ಹೆಚ್ಚಿತ್ತು. ಇದರಿಂದ ವಿದ್ಯಾರ್ಥಿಗಳು ಸೇರಿದಂತೆ ಸಭಿಕರೆಲ್ಲರೂ ಬಸವಳಿದರು. ತಲೆಸುತ್ತು ಬಂದ ಕಾರಣಕ್ಕೆ ಕೆಲವರು ಸ್ಥಳದಲ್ಲೇ ಕುಳಿತುಕೊಂಡರು. ವೇದಿಕೆಯ ಮೇಲಿದ್ದ ವೃದ್ಧೆಯೊಬ್ಬರು ತಲೆತಿರುಗಿ ಕುಸಿದು ಬಿದ್ದರು. ಪಕ್ಕದಲ್ಲಿದ್ದವರು ಅವರನ್ನು ಆರೈಕೆ ಮಾಡಿದರು.

    ವಿದ್ಯಾರ್ಥಿಗಳೇ ಅಧಿಕ:
    ಸಾರ್ವಜನಿಕರಿಗೆ ಅಂಬಾವಿಲಾಸ ದ್ವಾರ ಹಾಗೂ ವರಾಹ ದ್ವಾರದ ಮೂಲಕ ಬೆಳಗ್ಗೆ 10 ಗಂಟೆಯೊಳಗೆ ಅರಮನೆ ಆವರಣಕ್ಕೆ ಪ್ರವೇಶ ಅವಕಾಶ ಕಲ್ಪಿಸಿಕೊಡಲಾಯಿತು. ದೊಡ್ಡಮಟ್ಟದಲ್ಲಿ ಜನಸಮೂಹ ನೆರೆದಿತ್ತು. ಇಲ್ಲಿ ಸಾರ್ವಜನಿಕರಿಗಿಂತ ವಿದ್ಯಾರ್ಥಿಗಳ ಸಂಖ್ಯೆಯೇ ಅಧಿಕವಾಗಿತ್ತು. ನಗರದ ವಿವಿಧ ಶಾಲಾ-ಕಾಲೇಜು, ಮೈಸೂರು ವಿವಿಯಿಂದ ವಿದ್ಯಾರ್ಥಿಗಳು ಆಗಮಿಸಿ ಕನ್ನಡಾಭಿಮಾನ ಮೆರೆದರು.


    ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಪಂ ಸಿಇಒ ಪೂರ್ಣಿಮಾ, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್, ಡಾ.ಗಂಗೂಬಾಯಿ ಹಾನಗಲ್ ಸಂಗೀತ ಸಂಗೀತ ವಿವಿ ಕುಲಪತಿ ಪ್ರೊ.ನಾಗೇಶ್ ಬೆಟ್ಟಕೋಟೆ ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಮುಖಂಡರು ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts