More

    ಅನುರಣಿಸಿದ ಕನ್ನಡ ಡಿಂಡಿಮ

    ಹುಣಸೂರು: ತಾಲೂಕಿನಾದ್ಯಂತ 37 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಂಠದಿಂದ ಕನ್ನಡ ಡಿಂಡಿಮ ಅನುರಣಿಸಿತು. ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕನ್ನಡದ ಹಾಡಿಗೆ ಕಂಠವಾಗುವ ಮೂಲಕ ಕೋಟಿ ಕಂಠಕ್ಕೆ ಸಾಕ್ಷಿಯಾದರು.

    ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕೋಟಿ ಕಂಠ ಗಾಯಕ ಕಾರ್ಯಕ್ರಮಕ್ಕೆ ತಾಲೂಕಿನಲ್ಲಿ ಉತ್ತಮ ಸ್ಪಂದನೆ ದೊರಕಿತು. ತಾಲೂಕಿನ 300ಕ್ಕೂ ಹೆಚ್ಚು ಶಾಲೆಗಳ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ ನೋಂದಾಯಿಸಿಕೊಂಡಿದ್ದ 36,500 ವಿದ್ಯಾರ್ಥಿಗಳ ಕಂಠದಿಂದ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಕುವೆಂಪು ವಿರಚಿತ ಜಯಭಾರತ ಜನನಿಯ ತನುಜಾತೆ ಗಾಯನ ಮೂಡಿಬಂದಿತು. ಹುಯಿಲಗೋಳ ನಾರಾಯಣರಾವ್ ಅವರ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು, ಡಾ.ಚನ್ನವೀರ ಕಣವಿ ಅವರ ವಿಶ್ವವಿನೂತನ ವಿದ್ಯಾಚೇತನ, ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವಾ, ಡಿ.ಎಸ್.ಕರ್ಕಿ ಅವರ ಹಚ್ಚೇವು ಕನ್ನಡ ದೀಪ ಮತ್ತು ಡಾ.ಹಂಸಲೇಖರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳ ಗಾಯನ ನಡೆಯಿತು.

    ತಾಲೂಕು ದಂಡಾಧಿಕಾರಿ ಡಾ.ಎಸ್.ಯು.ಅಶೋಕ್ ನೇತೃತ್ವದಲ್ಲಿ ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಭಾರತೀಯ ಜನತಾ ಪಾರ್ಟಿ, ವಿವಿಧ ಹಿಂದುಪರ ಸಂಘಟನೆಗಳ ವತಿಯಿಂದ ನಗರದ ಸಂವಿಧಾನವೃತ್ತದ ಬಳಿ ಹುಡಾ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಗಾಯಕ ಶ್ರೀನಿವಾಸ್ ಮತ್ತವರ ತಂಡ ಕನ್ನಡ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ನಗರದ ಸೆಸ್ಕ್ ಕಚೇರಿ ಆವರಣದಲ್ಲಿ ಎಇಇ ಸಿದ್ದಪ್ಪ ನೇತೃತ್ವದಲ್ಲಿ ಅಧಿಕಾರಿಗಳು, ಸಿಬ್ಬಂದಿ ಮತ್ತು ಲೈನ್‌ಮನ್‌ಗಳು ಕೋಟಿ ಕಂಠ ಗಾಯನದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಲೈನ್‌ಮನ್‌ಗಳು ಕನ್ನಡ ಬಾವುಟದೊಂದಿಗೆ ಹಾಡು ಹಾಡಿ ಖುಷಿಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts