More

    ಮೊಳಕಾಲ್ಮೂರಿಗೆ ತಪ್ಪದ ಬರ ಕಳಂಕ

    ಕೆ.ಕೆಂಚಪ್ಪ ಮೊಳಕಾಲ್ಮೂರು
    ‘ನೀರೊಳಗಿದ್ದುಕೊಂಡೇ ಮಡಿವಾಳನಿಗೆ ನೀರಡಿಕೆ’ ಇದು ಮೊಳಕಾಲ್ಮೂರು ರೈತರ ಸ್ಥಿತಿ.
    ಕಳೆದ ವರ್ಷ ಸುರಿದ ಮಳೆಗೆ ಕೆರೆ-ಕಟ್ಟೆಗಳು ಮೈದುಂಬಿದ್ದವು. ಆದರೆ, ದುರಸ್ತಿ, ನಿರ್ವಹಣೆ ಕೊರತೆ ಕಾರಣಕ್ಕೆ ಜಲಪಾತ್ರೆಗಳು ಬರಿದಾಗುತ್ತಿವೆ. ಜತೆಗೆ ಮಳೆಗಾಲ ಆರಂಭವಾಗಿದ್ದರೂ ವರುಣನ ಸುಳಿವೇ ಇಲ್ಲದೆ, ಕೃಷಿಕರ ಮೊಗದಲ್ಲಿ ಆತಂಕದ ಛಾಯೆ ದಟ್ಟವಾಗಿ ಆವರಿಸಿದೆ.

    ಜೂನ್ ಮುಗಿಯುತ್ತಾ ಬಂದರೂ ಮಳೆ ಇಲ್ಲ. ಬೇಸಿಗೆಯ ರೀತಿಯಲ್ಲಿ ಸುಡು ಬಿಸಿಲಿದೆ. ಇನ್ನೂ ಬಹುತೇಕ ಕಡೆಗಳಲ್ಲಿ ಜಮೀನು ಹದ ಮಾಡಿಕೊಳ್ಳುವಷ್ಟೂ ಮಳೆ ಆಗಿಲ್ಲ. ಹೊಲದಲ್ಲಿ ದುಡಿಯಬೇಕಾದ ರೈತ ಮುಖ ಸಪ್ಪೆ ಮಾಡಿಕೊಂಡು ಮನೆ ಸೇರಿದ್ದಾನೆ. ಮುಂಗಾರು ಕೃಷಿ ಚಟುವಟಿಕೆಗಳು ಕೂಡ ಸಂಪೂರ್ಣ ನಿಂತಿವೆ. ಕುಡಿಯುವ ನೀರಿನ ಅಭಾವದ ಜತೆಗೆ ದನಕರುಗಳಿಗೆ ಮೇವಿನ ಸಮಸ್ಯೆ ತಲೆದೋರಿದೆ.

    ಮೊಳಕಾಲ್ಮೂರು ಹೇಳಿ-ಕೇಳಿ ಬಯಲುಸೀಮೆ ಪ್ರದೇಶ. ಶಾಶ್ವತ ನೀರಾವರಿ ಮೂಲಗಳಿಲ್ಲದ ಕಾರಣ ತಾಲೂಕಿನ 28.400 ಹೆಕ್ಟೇರ್ ಪ್ರದೇಶದಲ್ಲಿ ಶೇ.80ರಷ್ಟು ಮಳೆಯಾಶ್ರಿತ ಕೃಷಿಯೇ ಹೆಚ್ಚಿದೆ. ಉಳಿದಂತೆ ಕೊಳವೆಬಾವಿ ನೀರಿನ ಸೆಲೆ ಇರುವ ಕಡೆ ತೋಟಗಾರಿಕೆ ಬೆಳೆ ಪದ್ಧತಿ ಇದೆ. ಕಾಲಕ್ಕೆ ತಕ್ಕಂತೆ ವಾಡಿಕೆ ಮಳೆ ಬಂದರೆ ಬೆಳೆ ಇಲ್ಲವಾದರೆ ಬರಗಾಲ ನಿಶ್ಚಿತ. ಹೊಟ್ಟೆ ಪಾಡಿಗಾಗಿ ಕುಟುಂಬ ಸಮೇತ ವಲಸೆ ಹೋಗುವ ಪದ್ಧ್ದತಿ ಇಲ್ಲಿ ಎಂದಿಗೂ ತಪ್ಪದು.
    ಇಷ್ಟಕ್ಕೆಲ್ಲ ಮಳೆರಾಯನ ಕಣ್ಣಾಮುಚ್ಚಾಲೆ ಆಟ. ಒಂದು ವರ್ಷ ಮಳೆ ಬಂದರೆ ಇನ್ನೊಂದು ವರ್ಷ ಕೈಕೊಡುವ ವಾತಾವರಣಕ್ಕೆ ಜನ, ಜಾನುವಾರುಗಳ ಜೀವನ ಅಧೋಗತಿಯತ್ತ ಸಾಗಿದೆ.

    ಕಳೆದ ವರ್ಷ ಜೂನ್‌ನಲ್ಲಿ ಸುರಿದ ಧಾರಕಾರ ಮಳೆಯಿಂದ ಕೆರೆ-ಕಟ್ಟೆ, ಕಾಲುವೆಗಳು ತುಂಬಿ ತುಳುಕತ್ತ ಮಲೆನಾಡಿನ ವಾತಾವರಣ ನಿರ್ಮಾಣವಾಗಿತ್ತು.
    ಜನರಿಗೆ ಒಂದು ಕಡೆ ಖುಷಿ ತಂದರೆ ಜಲಚರ ಪ್ರಾಣಿಗಳಿಗಂತೂ ಪುನರ್ಜನ್ಮ ಕೊಟ್ಟಂತಾಗಿತ್ತು. ಬಾಡಿ ಬೆಂಡಾಗಿದ್ದ ಕಾಡು ಸಂಪತ್ತು ಹಚ್ಚ ಹಸರಿನಿಂದ ಕಂಗೊಳಿಸುತ್ತಿತ್ತು. ಆದರೆ, ಮತ್ತೇ ಬರದೂರಿಗೆ ಬರ ಅಪ್ಪಳಿಸುವ ಮುನ್ಸೂಚನೆ ಎದುರಾಗಿದ್ದು, ಜನರ ನಿದ್ದೆಗೆಡಿಸಿದೆ.

    ಜೂನ್ ಕೊನೆ ಹಾಗೂ ಜುಲೈ ತಿಂಗಳಲ್ಲಿ ಈ ಭಾಗದ ಮುಖ್ಯಬೆಳೆ ಶೇಂಗಾ ಬಿತ್ತನೆ ವಾಡಿಕೆ ಇದೆ. ಕೃಷಿ ಇಲಾಖೆಯವರು ಶೇಂಗಾ ಬೀಜ ವಿತರಣೆಗೆ 15 ದಿನದ ಹಿಂದೆಯೇ ಚಾಲನೆ ಕೊಟ್ಟಿದ್ದಾರೆ. ಪ್ರಸ್ತುತ ರಾಂಪುರ ಮತ್ತು ಮೊಳಕಾಲ್ಮೂರು ರೈತ ಸಂಪರ್ಕ ಕೇಂದ್ರದಲ್ಲಿ ಶೇಂಗಾ ಬೀಜ 1400 ಕ್ವಿಂ. ದಾಸ್ತಾನು ಇದೆ. ಇದುವರೆಗೂ 400 ಕ್ವಿಂಟಾಲ್ ಬಿತ್ತನೆ ಬೀಜವನ್ನಷ್ಟೇ ರೈತರು ಖರೀದಿಸಿದ್ದಾರೆ.

    ಮತ್ತೊಂದೆಡೆ ದರ ಏರಿಕೆ ಬರೆ
    ಮಳೆ ಕೊರತೆ ಆತಂಕ ಒಂದೆಡೆಯಾದರೆ, ಶೇಂಗಾ ಬೀಜ ದರ ದುಪ್ಪಟ್ಟು ಏರಿಕೆ ರೈತರಿಗೆ ಬರೆ ಹಾಕಿದೆ. ರಿಯಾಯಿತಿ ದರದಲ್ಲಿ ಎಸ್ಸಿ, ಎಸ್ಟಿಗೆ ಕ್ವಿಂಟಾಲ್‌ಗೆ 6,750 ರೂ., ಸಾಮಾನ್ಯರಿಗೆ 8,400 ಇದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 400 ರೂ. ಹೆಚ್ಚಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದೆ. ಪಕ್ಕದ ಆಂಧ್ರ ಸರ್ಕಾರ ಒಂದು ಕ್ವಿಂ.ಗೆ 5,100 ರೂ ನಂತೆ ವಿತರಣೆ ಮಾಡುತ್ತಿದೆ.

    ಬರಿದಾಗುವತ್ತ ಜಲಾಶಯ
    ಪಟ್ಟಣಕ್ಕೆ ಕುಡಿಯುವ ನೀರಿನ ಜೀವನಾಡಿಯಾಗಿರುವ ರಂಗಯ್ಯನದುರ್ಗ ಜಲಾಶಯದಲ್ಲಿ ಪ್ರಸ್ತುತ 20 ಅಡಿ ನೀರಿದೆ. 3-4 ತಿಂಗಳು ಮಾತ್ರ ಲಭ್ಯವಾಗಬಹುದಷ್ಟೆ. ಮಳೆ ಕೈಕೊಟ್ಟರೆ ಪುನಃ ಕೊಳವೆಬಾವಿ ಅವಲಂಬಿಸಬೇಕಾಗುತ್ತದೆ. ಇನ್ನು ಕೆಲ ಗ್ರಾಮಗಳಲ್ಲೂ ನೀರಿನ ದಾಹ ಕಾಡುವ ಸಾಧ್ಯತೆ ಇದೆ. ಕಳೆದ ವರ್ಷ ಭರ್ಜರಿ ಮಳೆಗೆ ತುಂಬಿ ತುಳುಕುತ್ತಿದ್ದ ಡ್ಯಾಂ ಸೇರಿ ಕೆರೆಗಳ ಸಣ್ಣ-ಪಟ್ಟ ದುರಸ್ತಿಗೆ ಮುನ್ನಚ್ಚರಿಕೆ ವಹಿಸದ ಅಧಿಕಾರಿಗಳ ನಿರ್ಲಕ್ಷೃ ಧೋರಣೆಯಿಂದ ನೀರು ವ್ಯರ್ಥವಾಗಿರುವ ಕಾರಣ ಸಮಸ್ಯೆ ಎದುರಾಗಿದೆ.

    ಮುಂಗಾರು ಬೆಳೆಗಳ ಬಿತ್ತನೆಗಾಗಿ ಹತ್ತಿ, ಜೋಳ, ಸಜ್ಜೆ, ನವಣೆ ಇತ್ಯಾದಿ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಮಳೆ ಕೊರತೆಯಿಂದ ಖರೀದಿ ಆಗುತ್ತಿಲ್ಲ. ಶೇಂಗಾ ಬಿತ್ತನೆ ಬೀಜದ ಕಾಯಿ ವಿತರಣೆ ಪ್ರಗತಿಯಲ್ಲಿದೆ. ಮಳೆಗಾಗಿ ರೈತರು ಕಾದು ನೋಡುತ್ತಿದ್ದಾರೆ. ಜೂನ್ ಕೊನೆ ಅಥವಾ ಜುಲೈ ತಿಂಗಳಲ್ಲಿ ಉತ್ತಮ ಮಳೆ ಬರುವ ಸಾಧ್ಯತೆ ಇದೆ.
    ಡಾ.ಉಮೇಶ್, ಸಹಾಯಕ ಉಪ ನಿರ್ದೇಶಕ, ಕೃಷಿ ಇಲಾಖೆ

    ಚಳ್ಳಕೆರೆ-ಮೊಳಕಾಲ್ಮೂರು ತಾಲೂಕಿನ ಪ್ರದೇಶ ಈರುಳ್ಳಿ ಬೆಳೆಗೆ ಯೋಗ್ಯವಾದ ಭೂಮಿ. ಪ್ರತಿ ವರ್ಷ 8500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗುತ್ತಿತ್ತು. ಈ ವರ್ಷ ಶೇ.25ರಷ್ಟು ಮಾತ್ರ ನಾಟಿ ಮಾಡಲಾಗಿದೆ. ಉಳಿದ ಬೆಳೆಗಳಿಗೂ ಮಳೆಯ ಬರದ ಛಾಯ ಆತಂಕ ತರಿಸಿದೆ.
    ಪ್ರೊ.ವಿರೂಪಾಕ್ಷಪ್ಪ, ಸ.ಹಿ.ನಿರ್ದೇಶಕ, ತೋಟಗಾರಿಕೆ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts