More

    ಮೊಲ ಸಾಕಣೆ ಕೇಂದ್ರ ಸ್ಥಗಿತ

    ರಾಜೇಂದ್ರ ಶಿಂಗನಮನೆ ಶಿರಸಿ

    ನಗರದ ಹೊರವಲಯದಲ್ಲಿರುವ ಮೊಲ ಸಾಕಣೆ ಕೇಂದ್ರ ಸ್ಥಗಿತ ವಾಗಿದೆ ಎಂದು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡುವ ಮೂಲಕ 5 ಎಕರೆ ಜಾಗವನ್ನು ಕೈಗಾರಿಕೆ ವಸಾಹತು ವ್ಯಾಪ್ತಿಗೆ ಪಡೆಯುವ ಉತ್ತರ ಕನ್ನಡ ಜಿಲ್ಲಾ ಸಣ್ಣ ಕೈಗಾರಿಕೆ ಸಂಘದ ಹುನ್ನಾರ ಬಯಲಾಗಿದೆ.

    1983-84ರಲ್ಲಿ ಬನವಾಸಿ ರಸ್ತೆಯ ಹಂಚಿನಕೇರಿ ಸಮೀಪ ಸರ್ವೆ ನಂ. 81ರ 5 ಎಕರೆ ಜಾಗವನ್ನು ಪಶು ಸಂಗೋಪನೆ ಇಲಾಖೆಗೆ ನೀಡಲಾಗಿದೆ. ಇಲ್ಲಿ ಆರಂಭದಲ್ಲಿ ಮೊಲ ಸಾಕಣೆ ಕೇಂದ್ರ ಪ್ರಾರಂಭವಾಯಿತು. ನಂತರ ತಾಯಿ ಕೋಳಿ ಘಟಕ, ಪೊ›ಟೀನ್ ಪಾರ್ಕ್ ಯೋಜನೆಗಳು ಅನುಷ್ಠಾನವಾಗಿವೆ. ಆದರೆ, ಮೂರು ತಿಂಗಳ ಹಿಂದೆ ಉತ್ತರ ಕನ್ನಡ ಜಿಲ್ಲಾ ಸಣ್ಣ ಕೈಗಾರಿಕೆ ಸಂಘದ ವತಿಯಿಂದ ಸರ್ಕಾರಕ್ಕೆ ಕೈಗಾರಿಕೆ ವಸಾಹತು ವಿಸ್ತರಣೆ ಸಂಬಂಧ ಪತ್ರ ಬರೆಯಲಾಗಿದೆ. ‘ಮೊಲ ಸಾಕಣೆ ಕೇಂದ್ರ ಬಾಗಿಲು ಮುಚ್ಚಿದೆ. ಹಾಗಾಗಿ ಆ ಪ್ರದೇಶವನ್ನು ಕೈಗಾರಿಕೆ ವಸಾಹತು ವ್ಯಾಪ್ತಿಗೆ ಸೇರಿಸಲು ಅವಕಾಶ ನೀಡಬೇಕು’ ಎಂದು ಸುಳ್ಳು ಮಾಹಿತಿಯೊಂದಿಗೆ ವಿಧಾನಸಭಾಧ್ಯಕ್ಷರು ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕೋರಲಾಗಿದೆ. ಇದು ಪಶುಸಂಗೋಪನೆ ಇಲಾಖೆ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

    ಮೊಲ ಸಾಕಣೆ ಕೇಂದ್ರದಲ್ಲಿ 100ಕ್ಕೂ ಹೆಚ್ಚು ಮೊಲಗಳಿವೆ. ಗಿರಿರಾಜ ಕೋಳಿ ಮರಿಗಳನ್ನು ಬೆಳೆಸುವ ಘಟಕ ಚಾಲ್ತಿಯಲ್ಲಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕುಗಳ ಫಲಾನುಭವಿಗಳಿಗೆ ಈ ಘಟಕದಲ್ಲಿ ಬೆಳೆಸಿದ ಕೋಳಿಗಳನ್ನು ಪೂರೈಸಲಾಗುತ್ತಿದೆ. ರೈತರ ಅನುಕೂಲಕ್ಕಾಗಿ ಮೇವಿನ ಬೆಳೆಗಳ ಪ್ರಾತ್ಯಕ್ಷಿಕೆಗಳನ್ನು ಸಿದ್ಧಪಡಿಸಿದ್ದು, 300ಕ್ಕೂ ಹೆಚ್ಚು ಮೇವಿನ ಗಿಡಗಳನ್ನು ಬೆಳೆಸಲಾಗುತ್ತಿದೆ. ಇಷ್ಟರ ನಡುವೆ ಜಿಲ್ಲಾ ಸಣ್ಣ ಕೈಗಾರಿಕೆ ಸಂಘದ ವತಿಯಿಂದ ದುರುದ್ದೇಶಪೂರಿತವಾಗಿ ಸರ್ಕಾರಕ್ಕೆ ತಪ್ಪು ಮಾಹಿತಿ ರವಾನೆಯಾಗಿದ್ದು, ಇದು ಸರಿಯಲ್ಲ ಎನ್ನುತ್ತಾರೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು.

    ಆದರೆ, ಸಣ್ಣ ಕೈಗಾರಿಕೆ ಸಂಘದ ಪದಾಧಿಕಾರಿಗಳು ಹೇಳುವುದೇ ಬೇರೆ. ವಸಾಹತು ವ್ಯಾಪ್ತಿ ಚಿಕ್ಕದಾಗಿದೆ. ಬೇಡಿಕೆ ಸಾಕಷ್ಟಿದ್ದು ವಿಸ್ತರಣೆ ಅನಿವಾರ್ಯವಾಗಿದೆ. ಹಾಗಾಗಿ ವಸಾಹತುವಿಗೆ ತಾಗಿಕೊಂಡಿರುವ ಪಶುಸಂಗೋಪನೆ ಇಲಾಖೆ ಜಾಗವನ್ನು ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಯಾವುದೇ ಸುಳ್ಳು ಮಾಹಿತಿ ನೀಡಿಲ್ಲ ಎಂಬುದು ಈ ಸಂಘದ ವಾದವಾಗಿದೆ.

    ಶಿರಸಿ ಕೈಗಾರಿಕೆ ವಸಾಹತುವಿನ ವಿಸ್ತರಣೆ ಮಾಡುವುದಿದ್ದರೆ ಬೇರೆಡೆ ಸ್ಥಳ ಆಯ್ಕೆ ಮಾಡಬೇಕು. ಅದನ್ನು ಹೊರತುಪಡಿಸಿ ಚಾಲ್ತಿಯಲ್ಲಿರುವ ಮೊಲ ಸಾಕಣೆ ಕೇಂದ್ರ ಸ್ಥಗಿತ ವಾಗಿದೆ ಎಂದು ಸುಳ್ಳು ಮಾಹಿತಿ ನೀಡಿ ಸರ್ಕಾರದ ದಿಕ್ಕುತಪ್ಪಿಸುವ ಕಾರ್ಯ ಸರಿಯಲ್ಲ. ಉತ್ತರ ಕನ್ನಡ ಜಿಲ್ಲಾ ಸಣ್ಣ ಕೈಗಾರಿಕೆ ಸಂಘವು ಸರ್ಕಾರಕ್ಕೆ ನೀಡಿದ ಮಾಹಿತಿ ಸತ್ಯಕ್ಕೆ ದೂರ ವಾಗಿದ್ದು, ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.
    | ಸೋಮನಗೌಡ ಮೊಲ ಸಾಕಣೆದಾರ

    ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಮೊಲ ಸಾಕಣೆ ಕೇಂದ್ರ ಚಾಲ್ತಿಯಲ್ಲಿರುವುದು ಶಿರಸಿಯಲ್ಲಿ ಮಾತ್ರ. ಈ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮೊಲ ಸಾಕಣೆದಾರರಿದ್ದು, ಈ ಕೇಂದ್ರ ಸ್ಥಗಿತವಾದರೆ ಅವರಿಗೆ ಅನ್ಯಾಯವಾಗುತ್ತದೆ. ಮುಂದಿನ ದಿನಗಳಲ್ಲಿ ಶಿರಸಿ ಜಿಲ್ಲಾ ಕೇಂದ್ರವಾದಲ್ಲಿ ಪಶುವೈದ್ಯಕೀಯ ತರಬೇತಿಗಾಗಿ ಈ ಜಾಗವು ಪಶುಸಂಗೋಪನೆ ಇಲಾಖೆಗೆ ಅತಿ ಅವಶ್ಯವಿದೆ. ಹಾಗಾಗಿ ಸರ್ಕಾರ ಈ ಬಗ್ಗೆ ಆದ್ಯತೆಯ ಮೇರೆಗೆ ನಿರ್ಣಯ ತೆಗೆದುಕೊಳ್ಳಬೇಕು.
    | ಆರ್.ಜಿ. ಹೆಗಡೆ ಪಶುಸಂಗೋಪನೆ ಇಲಾಖೆ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts