More

    ಮೊರಬ ಸಂಪೂರ್ಣ ಸ್ತಬ್ಧ

    ಧಾರವಾಡ: ಜಿಲ್ಲೆಯಲ್ಲಿ ಸತತ 4ನೇ ದಿನವೂ ಕರೊನಾ ಮಹಾಮಾರಿ ಆರ್ಭಟ ಮುಂದುವರಿದಿದೆ. 155 ಸೋಂಕಿತರಲ್ಲಿ ನವಲಗುಂದ ತಾಲೂಕಿನ ಮೊರಬ ಗ್ರಾಮವೊಂದರಲ್ಲೇ 27 ಜನ ಪೀಡಿತರಾಗಿದ್ದಾರೆ. ಕರೊನಾ ಹಾವಳಿಗೆ ಇಡೀ ಮೊರಬ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

    ಸೋಮವಾರ ಒಂದೇ ದಿನ 34 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಪೈಕಿ ನವಲಗುಂದ ತಾಲೂಕಿನ ಮೊರಬ ಗ್ರಾಮದ 23 ಜನರಲ್ಲಿ ಕರೊನಾ ವೈರಾಣು ಕಂಡುಬಂದಿದೆ.

    ಗ್ರಾಮದ ಜಾಡರಪೇಟೆಯ 59 ವರ್ಷದ ವ್ಯಕ್ತಿಯ ಸಂಪರ್ಕದಿಂದ ಸೋಮವಾರ 23 ಜನರಿಗೆ ಕರೊನಾ ಸೋಂಕು ತಗುಲಿದೆ. ಈ ಮೊದಲು 8, 12 ವರ್ಷದ ಬಾಲಕರು ಹಾಗೂ 48 ವರ್ಷದ ಮಹಿಳೆಗೆ ಸೋಂಕು ತಗುಲಿತ್ತು. ಸೋಮವಾರ ಸೋಂಕು ಖಚಿತವಾದ 23 ಜನರಲ್ಲಿ ಒಬ್ಬನಾದ 65 ವರ್ಷದ ವೃದ್ಧ ಮೃತಪಟ್ಟಿದ್ದು, ಆತಂಕ ಹೆಚ್ಚಿಸಿದೆ.

    ಕರೊನಾ ಕೇಂದ್ರಬಿಂದು: ದಶಕಗಳ ಹಿಂದೆ ಕೆಲವರ ಅಪರಾಧಿಕ ಚಟುವಟಿಕೆಗಳಿಂದಾಗಿ ಮೊರಬ ಗ್ರಾಮ ರಾಜ್ಯದ ಗಮನ ಸೆಳೆದಿತ್ತು. ಈಗ ಕರೊನಾದಿಂದ ಮತ್ತೊಮ್ಮೆ ಗಮನ ಸೆಳೆದಿದೆ. ಗ್ರಾಮದ ಜಾಡರ ಓಣಿ(ಜೇಡರ ಪೇಟೆ)ಯ 59 ವರ್ಷದ ನಿವಾಸಿ ಸೋಂಕಿನ ಕೇಂದ್ರಬಿಂದುವಾಗಿದ್ದಾರೆ. ಈತನ ಕೋವಿಡ್ ಸಂಪರ್ಕ ಬೆಂಗಳೂರಿನದ್ದು ಎನ್ನಲಾಗಿದೆ. ದೆಹಲಿಯಲ್ಲಿ ನೌಕರಿ ಮಾಡುತ್ತಿದ್ದ ಈತನ ಪುತ್ರಿ ಬೆಂಗಳೂರಿಗೆ ಬಂದಿಳಿದಿದ್ದರು. ಆಕೆಯನ್ನು ಕರೆತರಲು ಮಗ ನೊಂದಿಗೆ ಕಾರ್​ನಲ್ಲಿ ಬೆಂಗಳೂರಿಗೆ ತೆರಳಿದ್ದರು.

    ಒಂದೇ ಕುಟುಂಬದ 10 ಜನ: ಬೆಂಗಳೂರಿನಿಂದ ಪುತ್ರ, ಪುತ್ರಿ ಹಾಗೂ ಮೊಮ್ಮಗಳೊಂದಿಗೆ ವಾಪಸ್ಸಾಗಿದ್ದರು. ನಂತರದಲ್ಲಿ ವ್ಯಕ್ತಿಯಲ್ಲಿ ಕೆಮ್ಮು, ಜ್ವರ ಕಾಣಿಸಿಕೊಂಡಿತ್ತು. ಗಂಟಲ ದ್ರವದ ಪರೀಕ್ಷೆಗೊಳಪಟ್ಟಾಗ ಜೂ. 11ರಂದು ಕೋವಿಡ್ ಸೋಂಕು ದೃಢಪಟ್ಟು ಹುಬ್ಬಳ್ಳಿಯ ಕಿಮ್ಸ್​ಗೆ ದಾಖಲಿಸಲಾಗಿದೆ. ನಂತರ ವ್ಯಕ್ತಿಯ ಪತ್ನಿ, ಮಗ, ಮಗಳು, ಸಹೋದರ, ಆತನ ಪತ್ನಿ, ಮೊಮ್ಮಕ್ಕಳು ಸೇರಿ 10 ಜನರಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ. ದೆಹಲಿಯಿಂದ ಮರಳಿದ ಆತನ ಮಗಳ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.

    ಗ್ರಾಮದಲ್ಲೆಲ್ಲ ಸುತ್ತಾಟ: ಬೆಂಗಳೂರಿನಿಂದ ಮರಳಿದ 59 ವರ್ಷದ ವ್ಯಕ್ತಿ ಇಡೀ ಗ್ರಾಮದಲ್ಲೆಲ್ಲ ಸುತ್ತಾಡಿದ್ದಾರೆ. ಕೃಷಿಕನಾಗಿರುವ ಆತ, ರಾಜಕೀಯದಲ್ಲೂ ಗುರುತಿಸಿಕೊಂಡಿರುವುದರಿಂದ ಜನರ ಬಳಕೆ ಜಾಸ್ತಿ. ಗ್ರಾಮದ ಮಾರುಕಟ್ಟೆ, ವಿಜಯಾ ಬ್ಯಾಂಕ್, ಕೆಎಂಎಫ್, ಹೋಟೆಲ್, ಗಿರಣಿ ಹೀಗೆ ಎಲ್ಲೆಡೆ ಸುತ್ತಾಡಿದ್ದಾರೆ. ಆತನ ಸಂಪರ್ಕಕ್ಕೆ ಬಂದವರು ಈಗ ಸಹಜವಾಗಿ ಆತಂಕಕ್ಕೀಡಾಗಿದ್ದಾರೆ.

    ಗಾಬರಿಗೊಳಿಸಿದೆ ಆಂಬುಲೆನ್ಸ್​ಗಳ ಓಡಾಟ: 59 ವರ್ಷದ ವ್ಯಕ್ತಿಯಲ್ಲಿ ಕಳೆದ ಗುರುವಾರ ಕೋವಿಡ್ ಸೋಂಕು ದೃಢಪಟ್ಟ ನಂತರ ಆತನ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು. ಹಲವರ ಗಂಟಲ ದ್ರವದ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಂದಿನಿಂದ ಪ್ರತಿದಿನ ಆರೋಗ್ಯ ಇಲಾಖೆಯ ಆಂಬುಲೆನ್ಸ್​ಗಳ ಓಡಾಟ ಗ್ರಾಮಸ್ಥರನ್ನು ಗಾಬರಿಗೊಳಿಸಿದೆ. ಕೋವಿಡ್ ಸಂಖ್ಯೆ ಹೆಚ್ಚಳವಾಗಿದ್ದರಿಂದ ಗ್ರಾಮಸ್ಥರೇ ಸ್ವಯಂಪ್ರೇರಿತ ಬಂದ್​ಗೆ ಮುಂದಾಗಿದ್ದಾರೆ. ಗ್ರಾಮದಿಂದ ಯಾರೂ ಹೊರಗೆ ಹೋಗುತ್ತಿಲ್ಲ, ಹೊರಗಡೆಯಿಂದ ಯಾರೂ ಬರದಂತೆ ದಿಗ್ಬಂಧನ ವಿಧಿಸಿಕೊಂಡಿದ್ದಾರೆ. ಮುಂಜಾಗ್ರತೆ ಕ್ರಮವಾಗಿ ಮಕ್ಕಳನ್ನು ಬೇರೆ ಊರಿಗೆ ಕಳುಹಿಸಿದ್ದಾರೆ. ಗ್ರಾಮದಲ್ಲಿ ಪೊಲೀಸ್ ಪಹರೆ ಬಿಗಿಗೊಳಿಸಲಾಗಿದೆ.

    ಮೃತಪಟ್ಟ ಮೇಲೆ ದೃಢ: ಮೊರಬ ಗ್ರಾಮದ 65 ವರ್ಷದ ಪುರುಷ ಕಿಮ್ಸ್​ನಲ್ಲಿ ಭಾನುವಾರ ರಾತ್ರಿ ಮೃತಪಟ್ಟಿದ್ದಾನೆ. ಜೂ. 11ರಂದು ಸೋಂಕು ದೃಢಪಟ್ಟ ನವಲಗುಂದ ತಾಲೂಕಿನ ಮೊರಬ ಗ್ರಾಮದ 59 ವರ್ಷದ ವ್ಯಕ್ತಿಯ ಸಂಪರ್ಕ ಹೊಂದಿದ್ದ ಈತನಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ಗಂಟಲ ದ್ರವ ಪರೀಕ್ಷೆ ಮಾಡಿದಾಗಲೇ ಈತನಿಗೆ ಕರೊನಾ ಕಾಡಿದಂತೆ ಕಂಡುಬಂದಿತ್ತು. ಹೀಗಾಗಿ ಕಿಮ್್ಸ ವೈದ್ಯರು ಔಷಧೋಪಚಾರ ನಡೆಸಿದ್ದರು. ಉಸಿರಾಟದ ತೊಂದರೆ ಸೇರಿ ಬೇರೆ ಆರೋಗ್ಯ ಸಮಸ್ಯೆಗಳೂ ಇದ್ದಿದ್ದರಿಂದ ಸಂಕೀರ್ಣ ಪ್ರಕರಣ ಎಂದು ಪರಿಗಣಿಸಲಾಗಿತ್ತು. ಭಾನುವಾರ ರಾತ್ರಿ ಈತ ಮೃತಪಟ್ಟಿದ್ದು, ಗಂಟಲ ದ್ರವ ಪರೀಕ್ಷಾ ವರದಿ ಸೋಮವಾರ ಬಂದಿದೆ. ಅದರಲ್ಲಿ ‘ಪಾಸಿಟಿವ್’ ಎಂದು ಇದೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮೊರಬ ಗ್ರಾಮದ ಹೊರವಲಯದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.

    ಉಣಕಲ್ಲ ಮನೆ ಮಾಲೀಕರಿಬ್ಬರಿಗೆ ವೈರಸ್: ಹುಬ್ಬಳ್ಳಿಯ ಉಣಕಲ್ಲ ಕೊರವಿ ಓಣಿಯ ಸೋಂಕಿತ ವ್ಯಕ್ತಿಯ (49) ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಇನ್ನೂ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಲ್ಲಿ 65 ಹಾಗೂ 44 ವಯಸ್ಸಿನ ಇಬ್ಬರು ಮಹಿಳೆಯರಿದ್ದು, ಮನೆಯ ಮಾಲೀಕರಾಗಿದ್ದಾರೆ. ಇನ್ನೊಬ್ಬ 36 ವಯಸ್ಸಿನ ವ್ಯಕ್ತಿ ಇಂಗಳಹಳ್ಳಿ ನಿವಾಸಿಯಾಗಿದ್ದಾರೆ. ಆದರೆ ಸೋಂಕಿತ ವ್ಯಕ್ತಿಯೊಂದಿಗೆ ಹೇಗೆ ಸಂಪರ್ಕ ಆಗಿದೆ ಎನ್ನುವುದು ಪತ್ತೆಯಾಗಿಲ್ಲ. ಪಕ್ಕದ ಕೆರಿ ಓಣಿಯ 8 ಜನರಿಗೆ ಈಗಾಗಲೇ ಸೋಂಕು ದೃಢಪಟ್ಟಿದೆ. ಹೀಗೆ ದಿನೇ ದಿನೆ ಉಣಕಲ್ಲನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮತ್ತಷ್ಟು ಆತಂಕ ಮನೆ ಮಾಡಿದೆ. ಈಗಾಗಲೇ ನಿವಾಸಿಗಳು ಸ್ವಯಂ ರಕ್ಷಣೆಯಲ್ಲಿ ತೊಡಗಿದ್ದಾರೆ. ತಾವೇ ಸೀಲ್​ಡೌನ್ ಮಾಡಿಕೊಂಡು ಸುರಕ್ಷತೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಆದರೂ ಸಿದ್ದಪ್ಪಜ್ಜನ ದೇವಸ್ಥಾನದ ಮುಂದೆ ನಡೆಯುತ್ತಿದ್ದ ಸಂತೆ ಅಬಾಧಿತವಾಗಿದ್ದು, ಬೇರೆ ಓಣಿಯ ಜನರಲ್ಲಿ ಭಯ ಹುಟ್ಟಿಸಿದೆ.

    ಗ್ರಾಮಸ್ಥರ ಸಹಕಾರ ಅವಶ್ಯ: ಕರೊನಾ ಸೋಂಕು ನವಲಗುಂದ, ಅಣ್ಣಿಗೇರಿ ತಾಲೂಕಿಗೂ ವ್ಯಾಪಿಸಿರುವುದು ತಾಲೂಕಾಡಳಿತವನ್ನು ನಿದ್ದೆಗೆಡಿಸಿದೆ. ಪ್ರಾಣದ ಹಂಗು ತೊರೆದು ಕೋವಿಡ್ ನಿಯಂತ್ರಣಕ್ಕಾಗಿ ಹೋರಾಡುತ್ತಿರುವ ಕರೊನಾ ಸೇನಾನಿಗಳಿಗೆ ತಾಲೂಕಿನ ನಾಗರಿಕರು ಸಹಕಾರ ನೀಡಬೇಕು ಎಂದು ತಾಲೂಕಾಡಳಿತ ಮನವಿ ಮಾಡಿದೆ.

    ಚಮನಮನೆ ಓಣಿ ಸೀಲ್​ಡೌನ್: ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮದ ಚಮನಮನೆ ಓಣಿಯಲ್ಲಿ 4 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಓಣಿಯಿಂದ 100 ಮೀ. ಪ್ರದೇಶವನ್ನು ಜಿಲ್ಲಾಡಳಿತ ಸೋಮವಾರ ಸೀಲ್​ಡೌನ್ ಮಾಡಿದೆ. ಅಗತ್ಯ ವಸ್ತುಗಳನ್ನು ಮನೆ ಮನೆಗೆ ಪೂರೈಸಲು ಕ್ರಮ ವಹಿಸಲಾಗಿದೆ. ನಿವಾಸಿಗಳನ್ನು ಆಶಾ ಕಾರ್ಯಕರ್ತೆಯರು, ವೈದ್ಯರ ತಂಡ ತಪಾಸಣೆ ಮಾಡುತ್ತಿದ್ದು, ರೋಗ ಹರಡದಂತೆ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಗ್ರಾಮಸ್ಥರು ಮನೆಯಿಂದ ಆಚೆಗೆ ಬರಲು ಭಯಪಡುತ್ತಿದ್ದಾರೆ. ಕೆಲವರು ಊರನ್ನು ತೊರೆದು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಅನೇಕ ಮನೆಗಳಿಗೆ ಬೀಗ ಹಾಕಿರುವ ದೃಶ್ಯಗಳು ಕಂಡು ಬಂದವು. ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಬಸವರಾಜ ಕಲ್ಲಮ್ಮನವರ, ಪಿಎಸ್​ಐ ನವೀನ ಜಕ್ಕಲಿ, ಘಟನಾ ಕಮಾಂಡೋ ವೀರಕರ್ ಪರಿಶೀಲಿಸಿದರು.

    ಗ್ರಾಮಕ್ಕೆ ಬಸ್ ಬಿಡದಂತೆ ಒತ್ತಾಯ!: ಕರೊನಾ ಹಾವಳಿಯಿಂದ ಬೆಚ್ಚಿ ಬಿದ್ದಿರುವ ಧಾರವಾಡ ತಾಲೂಕಿನ ಗ್ರಾಮವೊಂದರ ಜನರು ತಮ್ಮ ಗ್ರಾಮಕ್ಕೆ ‘ಬಸ್ ಬಿಡುವುದು ಬೇಡ’ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ!

    ಜಿಲ್ಲೆಯಲ್ಲಿ ಕರೊನಾ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಜನರು ಆತಂಕಕ್ಕೀಡಾಗಿದ್ದಾರೆ. ನಗರ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಮನಸೂರ ಗ್ರಾಮದ ಜನರು ತಮ್ಮ ಗ್ರಾಮಕ್ಕೆ ಬಸ್ ಬಿಡದಂತೆ ಆಗ್ರಹಿಸಿ ಸೋಮವಾರ ಮನವಿಪತ್ರ ಸಲ್ಲಿಸಿದ್ದಾರೆ. ಮನಸೂರ ಗ್ರಾಮ ಧಾರವಾಡಕ್ಕೆ ಸಮೀಪ ಇರುವುದರಿಂದ ಈ ಗ್ರಾಮಕ್ಕೂ ಸೋಂಕು ಹರಡದಿರಲಿ ಎಂಬ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಸಾರಿಗೆ ಬಸ್ ಸೇವೆ ನಿಲ್ಲಿಸಬೇಕು ಎಂದು ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಸಾರ್ವಜನಿಕರ ಮನವಿಯನ್ನು ಪುರಸ್ಕರಿಸಿರುವ ಗ್ರಾಪಂ, ಧಾರವಾಡದ ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದೆ. ಕರೊನಾ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ಹೀಗಾಗಿ ಗ್ರಾಮಕ್ಕೆ ಸರ್ಕಾರಿ ಬಸ್ ಸಂಚಾರ ನಿಲ್ಲಿಸಬೇಕು ಎಂದು ಕೋರಲಾಗಿದೆ. ಮನವಿ ಪತ್ರವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts