More

    ಮೊಬೈಲ್ ಇ- ಸ್ಯಾಪ್ ಯೋಜನೆ ಆರಂಭಿಕ ಹಂತದಲ್ಲಿ ಮೊಟಕು

    ರಾಜೇಂದ್ರ ಶಿಂಗನಮನೆ ಶಿರಸಿ

    ತೋಟಗಾರಿಕೆ ಹಾಗೂ ಕೃಷಿ ಕ್ಷೇತ್ರದ ಸಮಗ್ರ ನಿರ್ವಹಣೆ ಕುರಿತು ರೈತರಿಗೆ ಸಂಪೂರ್ಣ ಮಾಹಿತಿ ಒದಗಿಸುವ ಮೊಬೈಲ್ ಇ- ಸ್ಯಾಪ್ ಇ-ಸಲ್ಯೂಷನ್ಸ್ ಅಗೆನೆಸ್ಟ್ ಅಗ್ರಿಕಲ್ಚರಲ್ ಪೆಸ್ಟ್) ಯೋಜನೆಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ತರಬೇತಿ ಹಂತದಲ್ಲಿಯೇ ಮೊಟಕಾಗಿದೆ.

    ರೈತರಿಗೆ ಬೆಳೆ ವಿಧಾನ, ಹವಾಮಾನ ವರದಿ, ಕೀಟಭಾದೆ ಹತೋಟಿಗೆ ಕೈಗೊಳ್ಳಬೇಕಾದ ಕ್ರಮ, ಕೃಷಿ ಯೋಜನೆಗಳು, ಸರ್ಕಾರದಿಂದ ಸಿಗುವ ಸಹಾಯಧನ ಮತ್ತು ಸವಲತ್ತುಗಳು, ಬೇಸಾಯ ಕ್ರಮ, ಬೆಳೆ ವಿಮೆ, ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಆವಕ ಮತ್ತು ಬೆಲೆಗಳ ತಕ್ಷಣದ ಮಾಹಿತಿಗೆ ಇ- ಸ್ಯಾಪ್ ಅನುಕೂಲವಾಗಲಿದೆ. ಈ ಕಾರಣಕ್ಕೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ 2017ರಲ್ಲಿ ಅನುಷ್ಠಾನಗೊಂಡಿತ್ತು. ಯೋಜನೆಯ ಸಾಧಕ- ಬಾಧಕ ತಿಳಿದು ಜಿಲ್ಲೆಯಲ್ಲಿಯೂ ಅನುಷ್ಠಾನಕ್ಕೆ ತೋಟಗಾರಿಕೆ ಇಲಾಖೆ ಮುಂದಡಿಯಿಟ್ಟಿತ್ತು.

    ಈ ಬಗ್ಗೆ 2019ರಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಕ್ತ ತರಬೇತಿ ಕೂಡ ಆಗಿತ್ತು. 2020ರ ಜನವರಿಯಲ್ಲಿ ಯೋಜನೆ ಅನುಷ್ಠಾನ ಆಗಬೇಕಿತ್ತಾದರೂ ಈವರೆಗೆ ಯಾವುದೇ ಬೆಳವಣಿಗೆಯಾಗಿಲ್ಲ. ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆ ಜತೆಗೆ ಯೋಜನೆ ಅನುಷ್ಠಾನಕ್ಕೆ ಸರ್ಕಾರದಿಂದ ಸೂಕ್ತ ನಿರ್ದೇಶನ ಬಾರದ ಹಿನ್ನೆಲೆಯಲ್ಲಿ ನನೆಗುದಿಗೆ ಬೀಳುವಂತಾಗಿದೆ.

    ಅಲೆಯುವ ಸ್ಥಿತಿ: ರೈತರಿಗೆ ಎಲ್ಲ ಮಾಹಿತಿ ತಲುಪಿಸಿ ಉತ್ತಮ ಬೆಳೆ ಬೆಳೆದು ಹೆಚ್ಚಿನ ಇಳುವರಿ ಪಡೆಯುವಂತೆ ಮಾಡುವ ಉದ್ದೇಶದಿಂದ ಇಲಾಖೆಯು ಈ ಯೋಜನೆ ಅಳವಡಿಸಿಕೊಳ್ಳಲು ಮುಂದಾಗಿತ್ತು. ಆದರೆ, ಅನುಷ್ಠಾನಕ್ಕೆ ವಿಘ್ನಗಳು ಎದುರಾದ ಕಾರಣ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ಸಾವಿರಾರು ರೈತರು ಮಾಹಿತಿಗಾಗಿ ಇಲಾಖೆ ಕಚೇರಿವರೆಗೆ ಅಲೆಯಲೇ ಬೇಕಾಗಿದೆ.

    ಅನುದಾನ ನಿಗದಿಯಾಗಿತ್ತು: ಸರ್ಕಾರದ ವಿವಿಧ ಸಹಾಯಧನ ಪಡೆಯಲು ತೋಟಗಾರಿಕೆ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ರೈತರ ವೈಯಕ್ತಿಕ ವಿವರ, ಜಮೀನಿನ ವಿಸ್ತೀರ್ಣ, ಬೆಳೆ, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಹಾರ್ಟಿ ಕ್ಲಿನಿಕ್​ನಲ್ಲಿ ಇ- ಸ್ಯಾಪ್ ತಂತ್ರಾಂಶಕ್ಕೆ ಜೋಡಣೆ ಮಾಡಿ, ನಿಯಮಿತವಾಗಿ ರೈತರ ಮೊಬೈಲ್ ಫೋನ್​ಗಳಿಗೆ ಸಂದೇಶ ರವಾನಿಸಬೇಕು. ಈ ಇಡೀ ಪ್ರಕ್ರಿಯೆಯ ನಿರ್ವಹಣೆ ಜವಾಬ್ದಾರಿಯನ್ನು ಇಲಾಖೆಗೆ ವಹಿಸಲಾಗಿತ್ತು. ಆದರೆ, ಅನುಷ್ಠಾನಕ್ಕೆ ತೊಡಕಾಗಿರುವ ಕಾರಣ ತರಬೇತಿ ಪಡೆದ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಷ್ಟಕ್ಕೇ ಸೀಮಿತಗೊಂಡಿದ್ದಾರೆ. ವಿಶೇಷ ಎಂದರೆ ಯೋಜನೆಯ ವೆಚ್ಚಕ್ಕಾಗಿ ರಾಜ್ಯ ಸರ್ಕಾರ ಜಿಲ್ಲೆಗೆ ಈ ಹಿಂದೆಯೇ ಅಂದಾಜು 15 ಲಕ್ಷ ರೂ. ಅನುದಾನ ಕೂಡ ನಿಗದಿಪಡಿಸಿತ್ತು. ಆದರೆ, ಕರೊನಾ ಆರ್ಥಿಕ ಸಂಕಷ್ಟದ ನಡುವೆ ಈ ಅನುದಾನ ಕೂಡ ವಾಪಸಾಗುವ ಆತಂಕ ಎದುರಾಗಿದೆ.

    ಇ- ಸ್ಯಾಪ್ ತಂತ್ರಾಂಶ ಬಳಕೆ ಸಂಬಂಧ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿತ್ತು. ಆದರೆ, ತಾಂತ್ರಿಕ ಕಾರಣದ ಜತೆಗೆ ಸರ್ಕಾರದ ಸೂಕ್ತ ನಿರ್ದೇಶನ ಬಾರದ ಹಿನ್ನೆಲೆಯಲ್ಲಿ ಯೋಜನೆ ಕಾರ್ಯಾರಂಭ ಆಗಿಲ್ಲ. ಜಿಲ್ಲೆಯ ಒಟ್ಟಾರೆ ಭೂ ಪ್ರದೇಶದಲ್ಲಿ ಅಂದಾಜು 1.21 ಲಕ್ಷ ಹೆಕ್ಟೇರ್​ನಲ್ಲಿ ತೋಟಗಾರಿಕೆ ಬೆಳೆಗಳಿವೆ. 1.30 ಲಕ್ಷ ರೈತರು ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದು, ಯೋಜನೆ ಜಾರಿಯಾದರೆ ಅನುಕೂಲ ಆಗಲಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
    | ಬಿ.ಪಿ. ಸತೀಶ ತೋಟಗಾರಿಕೆ ಇಲಾಖೆ ಉಪನಿರ್ದೇಶಕ

    ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ರೈತರ ಬೆನ್ನೆಲುಬಾಗಿದೆ. ಇಲ್ಲಿ ಬೆಳೆಯುವ ಅಡಕೆ, ತೆಂಗು, ಕಾಳುಮೆಣಸು, ಅನಾನಸ್, ತರಕಾರಿ, ಹೂವು ರಾಜ್ಯ, ರಾಷ್ಟ್ರದ ವಿವಿಧೆಡೆ ರಫ್ತಾಗುತ್ತಿದೆ. ಇಳುವರಿ ಹೆಚ್ಚಿಸಿಕೊಳ್ಳಲು ಇ-ಸ್ಯಾಪ್ ಯೋಜನೆ ಅನುಕೂಲವಾಗುವ ಸಾಧ್ಯತೆಯಿತ್ತು. ಆದರೆ, ಈ ಯೋಜನೆ ಕೂಡ ಅನುಷ್ಠಾನ ಹಂತದಲ್ಲಿಯೇ ಮುಗ್ಗರಿಸಿದೆ.
    | ಆರ್.ಆರ್. ಹೆಗಡೆ ಯಡಳ್ಳಿ ಕೃಷಿಕ

    ಏನಿದು …?
    ಈ ಸಾಧನ ಜಿಪಿಆರ್​ಎಸ್/ ತ್ರಿಜಿ/ ವೈಫೈ/ ಜಿಪಿಎಸ್ ಸೌಲಭ್ಯಗಳ ಜತೆ ಕ್ಯಾಮರಾವನ್ನೂ ಹೊಂದಿರುವ, ನೋಡಲು ಟ್ಯಾಬ್ಲೆಟ್ ಅನ್ನೇ ಹೋಲುವ ಪುಟ್ಟ ವಿದ್ಯುನ್ಮಾನ ಸಾಧನವಾಗಿದೆ. ಇದರಲ್ಲಿರುವ ಇ-ಸ್ಯಾಪ್ ತಂತ್ರಾಂಶ ರೈತರು ಹಾಗೂ ಕೃಷಿ ತಜ್ಞರ ಮಧ್ಯದ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತದೆ. ಸಕಾಲದಲ್ಲಿ ಪಾಲಿಸಬೇಕಾದ ನಿರ್ವಹಣಾ ಕ್ರಮ ಹಾಗೂ ಹೊಸ ಕೀಟಗಳು- ರೋಗಗಳಿಗೆ ತಜ್ಞರಿಂದ ರೈತರು ಸಲಹೆ ಪಡೆಯಲು ಬಳಸುವ ಉತ್ತಮ ಸಂಪರ್ಕ ಮಾಧ್ಯಮವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts