More

    ಮೇಲುಕೋಟೆ ಕ್ಷೇತ್ರದಲ್ಲಿ ಕುರುಡು ಕಾಂಚಾಣ ಕುಣಿತ : ಸಾಹಿತಿ ದೇವನೂರ ಮಹದೇವ ಆರೋಪ

    ಮಂಡ್ಯ : ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕುರುಡು ಕಾಂಚಾಣ ಕುಣಿಯುತ್ತಲಿದ್ದು, ಹಣ ಚೆಲ್ಲಿ ಮತಬೇಟೆಗೆ ಇಳಿದಿರುವವರ ಅಂದ ದರ್ಬಾರ್ ಕೊನೆಗಾಣಬೇಕು ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.


    ಶಾಸಕ ಸಿ.ಎಸ್.ಪುಟ್ಟರಾಜು ಅವರು ಕ್ಷೇತ್ರದಲ್ಲಿ ದುಡ್ಡಿನ ಹೊಳೆ ಹರಿಸುತ್ತಿದ್ದಾರೆ. ಈ ವಿಷಯ ಪಕ್ಕದ ಜಿಲ್ಲೆ ಮೈಸೂರಿನಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ಎಲ್ಲವನ್ನೂ ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ಅಧಿಕಾರಕ್ಕೆ ಬರುವ ಮುನ್ನ ಎಷ್ಟು ಆಸ್ತಿ ಹೊಂದಿದ್ದರು? ಈಗ ಅವರ ಬಳಿ ಸಂಗ್ರಹವಾಗಿರುವ ಹಣ ಹಾಗೂ ಆಸ್ತಿಯ ಮೌಲ್ಯವೆಷ್ಟು ಎಂಬ ಲೆಕ್ಕಾಚಾರ ಬೇಕಾಗಿದೆ. ಇದು ಸಾರ್ವಜನಿಕರ ತೆರಿಗೆ ಹಣ ಎಂಬ ಪ್ರಶ್ನೆ ಕೂಡ ಇದರಲ್ಲಿ ಅಡಗಿದೆ. ದುಡಿದು ಸಂಪಾದಿಸಿರುವ, ಬೆವರು ಸುರಿಸಿದ ಅಥವಾ ಪಿತ್ರಾರ್ಜಿತವಾಗಿ ಬಂದ ಹಣ ಅಲ್ಲವೇ ಅಲ್ಲ. ನಮ್ಮ ಹಣದಲ್ಲಿ ಕಿಂಚಿತ್ತು ಕಿತ್ತು ನಮಗೆ ಹಂಚುತ್ತಿದ್ದಾರೆ. ಮತದಾರರು ಹೆಂಡ, ಹಣದ ಅಮಿಷಕ್ಕೆ ಒಳಗಾದರೆ ಉಳಿದ 5 ವರ್ಷಗಳ ಕಾಲ ದುಃಖ ಅನುಭವಿಬೇಕಾಗುತ್ತದೆ ಎಂದು ಪಾಂಡವಪುರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.


    ಸ್ವಹಿತಾಸಕ್ತಿಗಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿಯನ್ನು ಬಲಿ ಕೊಟ್ಟ ಕೀರ್ತಿ ಸಿ.ಎಸ್.ಪುಟ್ಟರಾಜು ಅವರಿಗೆ ಸಲ್ಲುತ್ತದೆ. ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕಾಗಿ ಪುಟ್ಟಣ್ಣಯ್ಯ ಅವಧಿಯಲ್ಲಿ ಮಂಜೂರಾಗಿದ್ದ 2.5 ಕೋಟಿ ರೂ. ಹಣ ವಾಪಸ್ಸಾಗಿದೆ. ಕಾಲೇಜು ಕಟ್ಟಡ ನಿರ್ಮಿಸಲು ನಿಗದಿಯಾಗಿದ್ದ ಸ್ಥಳವನ್ನು ಮಟ್ಟ ಮಾಡಿಸಲು ಬಿಡುಗಡೆಯಾಗಿದ್ದ 99 ಲಕ್ಷ ರೂ. ಕೂಡ ಬಳಕೆ ಮಾಡಿಕೊಳ್ಳಲಿಲ್ಲ. ಸರ್ಕಾರಿ ಸ್ವಾಮ್ಯದ ಕಾಲೇಜುಗಳು ಅಭಿವೃದ್ಧಿಯಾದರೆ ತಮ್ಮ ಎಸ್‌ಟಿಜಿ ಶಿಕ್ಷಣ ಸಂಸ್ಥೆಗೆ ತೊಂದರೆಯಾಗುತ್ತದೆ ಎಂಬ ದುರುದ್ದೇಶ ಇದರಲ್ಲಿ ಅಡಗಿದೆ. ರಕ್ಷಕರೇ ಭಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣದ ಮೂಲಕ ಸೇವೆ ಮಾಡಬೇಕು ಎಂಬ ಮನಸ್ಸಿದ್ದರೆ ಮಾಜಿ ಪ್ರಧಾನಿ ದೇವೇಗೌಡರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿ ಉಚಿತ ಶಿಕ್ಷಣ ನೀಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.


    ಕೆಪಿಸಿಸಿ ವಕ್ತಾರ ಟಿ.ಎಸ್.ಸತ್ಯಾನಂದ ಮಾತನಾಡಿ, ಹೋರಾಟಗಾರರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ಮತ್ತು ಜಿ.ಮಾದೇಗೌಡ ಅಗಲಿಕೆಯ ನಂತರ ಜಿಲ್ಲೆಯಲ್ಲಿ ಹೋರಾಟಗಳು ಕ್ಷೀಣಿಸಿದ್ದು, ವ್ಯಾಪಕವಾಗಿ ಹರಡುತ್ತಿರುವ ಭ್ರಷ್ಟಾಚಾರ ಮತ್ತು ಜಿಲ್ಲೆಯಿಂದ ಆಯ್ಕೆಯಾದ ಶಾಸಕರ ಆಡಳಿತ ವೈಖರಿ ಇದಕ್ಕೆ ಕಾರಣವಾಗಿದೆ. ದರ್ಶನ್ ಪುಟ್ಟಣ್ಣಯ್ಯ ಅವರನ್ನು ಚುನಾಯಿಸಿ ವಿಧಾನಸೌಧಕ್ಕೆ ಕಳುಹಿಸುವ ಮೂಲಕ ಹೋರಾಟಕ್ಕೆ ಮರುಜೀವ ನೀಡಬೇಕಿದೆ ಎಂದು ಹೇಳಿದರು.


    ದರ್ಶನ್ ಪುಟ್ಟಣ್ಣಯ್ಯ ಅವರ ವಿರುದ್ಧ ಕ್ಷುಲ್ಲಕ ವಿಚಾರಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗುತ್ತಿದ್ದು, ಈ ಮೂಲಕ ರೈತ ಹೋರಾಟಕ್ಕೆ ಅಪಮಾನ ಮಾಡುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಚುನಾವಣೆಯ ನಂತರ ವಿದೇಶಕ್ಕೆ ಹೋಗುತ್ತಾರೆ ಎಂಬ ನಕಲಿ ಟಿಕೆಟ್ ಸೃಷ್ಟಿಸಿ ಅಪಪ್ರಚಾರ ಮಾಡಲಾಗುತ್ತಿದೆ. ದರ್ಶನ್‌ಗೆ ವಿದೇಶಕ್ಕೆ ಹೋಗುವ ಸ್ವಾತಂತ್ರ್ಯ ಇದೆ. ಆದರೆ ನೀವು ದೇಶ ಬಿಟ್ಟು ಹೋಗಲು ನ್ಯಾಯಾಲಯದ ಅನುಮತಿ ಪಡೆಯಬೇಕು. ವಿದೇಶಿಗರು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ. ನೀವು ಹಲ್ಲಿನ ಚಿಕಿತ್ಸೆಗೆ ವಿದೇಶಕ್ಕೆ ಹೋಗುತ್ತೀರಾ. ಚುನಾವಣೆಯನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಿ. ನಾನೇ ಗೆಲ್ಲುತ್ತೇನೆ ಎಂಬ ಭ್ರಮಾಲೋಕದಲ್ಲಿ ತೇಲಬೇಡಿ ಎಂದು ಶಾಸಕ ಸಿ.ಎಸ್.ಪುಟ್ಟರಾಜು ವಿರುದ್ಧ ವಾಗ್ದಾಳಿ ನಡೆಸಿದರು.
    ಪುಟ್ಟರಾಜು ಅವರು ಕುರುಬ ಸಮುದಾಯದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಹೆಸರನ್ನು ಹೇಳಿಕೊಂಡು ರಾಜಕಾರಣ ಮಾಡಲು ಹೊರಟಿರುವುದು ಅವರ ರಾಜಕೀಯ ದಿವಾಳಿತನವನ್ನು ತೋರುತ್ತದೆ ಎಂದು ಕಿಡಿಕಾರಿದರು.


    ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಪ್ರಸನ್ನ ಎನ್.ಗೌಡ, ಹರವು ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ಸಿ.ಆರ್.ರಮೇಶ್, ಅಂತನಹಳ್ಳಿ ಬಸವರಾಜು, ಡಿ.ಕೆ.ಅಂಕಯ್ಯ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts