More

    ಮೇಲುಕೋಟೆಯಲ್ಲಿ ವೈಭವದ ಮಹಾರಥೋತ್ಸವ

    • ಮಂಡ್ಯ : ಮೇಲುಕೋಟೆಯ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಮಂಗಳವಾರ ನಡೆಯಲಿರುವ ಶ್ರೀ ರಾಮಾನುಚಾರ್ಯರ 1006ನೇ ಜಯಂತ್ಯುತ್ಸವದ ಪೂರ್ವಭಾವಿಯಾಗಿ ಸೋಮವಾರ ಮಹಾರಥೋತ್ಸವ ವೈಭವದಿಂದ ನೆರವೇರಿತು.

    • ದೇವಾಲಯದಲ್ಲಿ ಆಚಾರ್ಯರಿಗೆ ಬೆಳಗ್ಗೆ 8ಗಂಟೆಗೆ ಯಾತ್ರಾದಾನವಾದ ನಂತರ ವೇದಪಾರಾಯಣ, ಮಂಗಳವಾದ್ಯದೊಂದಿಗೆ ಒಳ ಪ್ರಾಕಾರದಲ್ಲಿ ಉತ್ಸವ ನೆರವೇರಿತು. ರಾಮಾನುಜರ ಎದರು ಸೇವೆಯಲ್ಲಿ ಚೆಲುವನಾರಾಯಣಸ್ವಾಮಿಗೆ ಮಹಾಮಂಗಳಾರತಿ ನಡೆದು ರಾಮಾನುಜರಿಗೆ ಮರ್ಯಾದೆ ನಡೆದ ನಂತರ ಉತ್ಸವ ರಥದಮಂಟಪದ ಬಳಿಗೆ ಬಂದು ಸೇರಿತು.

    • ರಥಮಂಟಪಕ್ಕೆ ಮೂರು ಪ್ರದಕ್ಷಿಣೆ ಹಾಗೂ ಜೋಯಿಸರಿಂದ ಮಹೂರ್ತ ಪಠಣೆಯಾದ ನಂತರ 9.30ಕ್ಕೆ ರಥಾರೋಹಣ ಕಾರ್ಯಕ್ರಮ ನೆರವೇರಿತು. ದಿವ್ಯಪ್ರಬಂದ ಪಾರಾಯಣಗೋಷ್ಠಿ ನೆರವೇರಿತು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್ ಮಹೇಶ್ ರಥ ಎಳೆಯುವ ಮೂಲಕ ಚಾಲನೆ ನೀಡಿದರು. ಮಹಾರಥ ಮಾರಿಗುಡಿ ಬೀದಿ, ರಾಜಬೀದಿ, ವಾನಮಾಮಲೈಮಠದ ಬೀದಿಗಳಲ್ಲಿ ಸಂಚರಿಸಿ ಮಧ್ಯಾಹ್ನ 1ಗಂಟೆ ವೇಳೆಗೆ ಮುಕ್ತಾಯವಾಯಿತು. ಮಹಾರಥೋತ್ಸವದ ಧಾರ್ಮಿಕ ವಿಧಿ ವಿಧಾನಗಳನ್ನು ಅರ್ಚಕ ವಿದ್ವಾನ್ ಬಿ.ವಿ.ಆನಂದಾಳ್ವಾರ್, ಆಗಮ ಪ್ರವೀಣ ವಿದ್ವಾನ್ ಭಾ.ವಂ.ರಾಮಪ್ರಿಯ ನೆರವೇರಿಸಿದರು.

    • ಸಂಜೆ ಯತಿರಾಜರಮಠದಲ್ಲಿ ರಾಮಾನುಜರಿಗೆ ಅಭಿಷೇಕ ನೆರವೇರಿತು. ಭಿಕ್ಷಾಕೈಂಕರ್ಯ ಸೇವೆಯನ್ನು ರಾತ್ರಿ ರಾಮಾನುಜರ ಸನ್ನಿಧಿಯಲ್ಲಿ ಸ್ಥಾನೀಕರಾದ ಶ್ರೀನಿವಾಸ ನರಸಿಂಹನ್ ಗುರೂಜಿ ಯತಿರಾಜ ದಾಸರ್ ಗುರುಪೀಠದ ವತಿಯಿಂದ ನೆರವೇರಿಸಿದರು. ಮುನ್ನಾದಿನವಾದ ಭಾನುವಾರ ರಾತ್ರಿ ಕೋವಿಲ್ ನಂಬಿ ಸಂಪತ್ ಕುಮಾರ್ ಭಿಕ್ಷಾ ಕೈಂಕರ್ಯ ಸೇವೆ ಸಲ್ಲಿಸಿದ್ದರು.

    • ರಾಮಾನುಜಾಚಾರ್ಯರ ಜಯಂತಿಯ ಅಂಗವಾಗಿ ಮಂಗಳವಾರ ಬೆಳಗ್ಗೆ 9ಕ್ಕೆ ದ್ವಾದಶಾರಾಧನೆಯೊಂದಿಗೆ ರಾಮಾನುಜರಿಗೆ ಮಹಾಭಿಷೇಕ, ಸಂಜೆ ಗಂಧದ ಅಲಂಕಾರದಲ್ಲಿ ಬೆಳ್ಳಿಪಲ್ಲಕ್ಕಿ ಉತ್ಸವ, ರಾತ್ರಿ ಶ್ರೀ ಚೆಲುವನಾರಾಯಣಸ್ವಾಮಿದಶಾವತಾರ ಉತ್ಸವ ನಡೆಯಲಿದೆ.
    • ರಾಮಾನುಜಚಾರ್ಯರ ಮಹಾರಥವನ್ನು ಬಹುತೇಕವಾಗಿ ಹೆಚ್ಚಾಗಿ ಮಹಿಳೆಯರೇ ಎಳೆದರು. ಸುಡುಬಿಸಿಲಿದ್ದರೂ ಲೆಕ್ಕಿಸದೆ ರಾಮಾನುಜ-ಯತಿರಾಜ ಎಂಬ ಜಯಘೋಷದೊಂದಿಗೆ ರಥ ಎಳೆದರು. ಮೇಲುಕೋಟೆ ಪೊ;ಈಸ್ ಠಾಣೆ ಇನ್ಸ್‌ಪೆಕ್ಟರ್ ಸುಮಾರಾಣಿ ಬಂದೋಬಸ್ತ್ ನಿಯೋಜಿಸಿದ್ದರು.

    ಪ್ರಮುಖ ಸುದ್ದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts