More

    ಮೇಲಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ

    ಕೊಡಗು: ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಭಿವೃದ್ಧಿ ವಿಚಾರದಲ್ಲಿ 1 ಕೋಟಿ ರೂ.ಗೂ ಅಧಿಕ ಅವ್ಯವಹಾರ ನಡೆದಿದ್ದು, ಈಗಾಗಲೇ ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಅಧಿಕಾರಿಗಳು ಬಂದು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಆದರೂ ಆಸ್ಪತ್ರೆಯವರು ತಮ್ಮ ಚಾಳಿ ಮುಂದುವರಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಜಯಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಮಂಡೆಟ್ಟಿರ ಅನಿಲ್ ಅಯ್ಯಪ್ಪ ಎಚ್ಚರಿಕೆ ನೀಡಿದರು.


    ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಅವರ ಕಾರ್ಯವೈಖರಿ ಹಾಗೂ ಹಣ ದುರ್ಬಳಕೆ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಅಧಿಕಾರಿಗಳು ಬಂದು ವಿಚಾರಣೆ ನಡೆಸಿ, ಕೆಲವು ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಆದರೆ, ಸಂಘಟನೆ ಹಾಗೂ ಕೆಲವು ವ್ಯಕ್ತಿಗಳು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾನು ವಿಚಾರಣೆಗೂ ಹಾಜರಾಗಿದ್ದೇನೆ. ಹಾಗಾದರೆ ಸಾರ್ವಜನಿಕರು ಇವರ ಭ್ರಷ್ಟಾಚಾರವನ್ನು ಸಹಿಸಿಕೊಂಡು ಇರಬೇಕೆ ? ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ನಡೆಯುತ್ತಿದೆ ಎಂದರೆ ಲಕ್ಷಾಂತರ ರೂ. ಬೆಲೆ ಬಾಳುವ ಪೀಠೋಪಕರಣಗಳನ್ನು ನಿರುಪಯುಕ್ತ ಎಂದು ಕೇವಲ 17 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ. ತುರ್ತು ವಾಹನ, ಆಂಬುಲೆನ್ಸ್, ಜನರೇಟರ್, ಡಿಸೆಲ್ ಎಲ್ಲ ವಿಚಾರಗಳಲ್ಲೂ ಅವ್ಯವಹಾರ ನಡೆದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.


    ಆಸ್ಪತ್ರೆ ಆಡಳಿತ ವ್ಯವಸ್ಥೆಯಲ್ಲಿ ತಮಗೆ ಬೇಕಾದವರಿಗೆ ಮಣೆ ಹಾಕಲಾಗಿದೆ. ತಮಗೆ ಇಷ್ಟವಾದ ಸಿಬ್ಬಂದಿಗೆ ಬೇಕಾಗಿರುವ ವಿಭಾಗಕ್ಕೆ ನಿಯೋಜನೆ ಮಾಡಿದ್ದಾರೆ. ನಿಯಮ ಪಾಲಿಸದೆ ರಜೆ ನೀಡುತ್ತಿದ್ದಾರೆ. ಆದರೆ, ಇವರಿಗೆ ಆಗದ ಸಿಬ್ಬಂದಿಗೆ ರಜೆ ನಿರಾಕರಣೆ ಮಾಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾಜಿ ಸೈನಿಕರು, ಅಂಗವಿಕಲರು, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನೀಡಬೇಕಾದ ಕ್ಯಾಂಟಿನ್ ಗುತ್ತಿಗೆಯನ್ನು ತಮಗೆ ಬೇಕಾದವರಿಗೆ ನೀಡಲಾಗಿದೆ. ಗುತ್ತಿಗೆ ತೆಗೆದುಕೊಂಡವರು ಉಪಗುತ್ತಿಗೆ ನೀಡಿದ್ದಾರೆ. ಮಾಂಸಾಹಾರ, ಸ್ಮೋಕಿಂಗ್ ಜೋನ್ ಎಲ್ಲವನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.


    ಕರ್ನಾಟಕ ರಕ್ಷಣ ವೇದಿಕೆ ತಾಲೂಕು ಅಧ್ಯಕ್ಷ ಎನ್.ಪಿ.ಅನಿಲ್ ಮಾತನಾಡಿ, 240 ಹಾಸಿಗೆಯ ಸಾರ್ವಜನಿಕ ಆಸ್ಪತ್ರೆ ಕೇವಲ ಶಿತ ಜ್ವರ ಹಾಗೂ ನೋವು ನಿವಾರಕ ಮಾತ್ರೆ ಕೊಡುವುದಕ್ಕೆ ಮಾತ್ರ ಸೀಮಿತವಾಗಿದೆ. ಸಂಜೆ 6 ಗಂಟೆಯ ನಂತರ ಬಂದ ರೋಗಿಗಳನ್ನು ನೇರವಾಗಿ ಮಡಿಕೇರಿಗೆ ಕಳುಹಿಸುತ್ತಾರೆ. ಆಡಳಿತ ಅಧಿಕಾರಿಗಳು ವಾರಕ್ಕೆ ಮೂರು ದಿನ ಮಾತ್ರ ಕರ್ತವ್ಯ ನಿರ್ವಹಿಸುವುದರಿಂದ ಇತರ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಯಾವುದೇ ಹಿಡಿತ ಇಲ್ಲ. 2020ರಲ್ಲಿಯೇ ಅಂಬುಲೆನ್ಸ್‌ನಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಮುಖಂಡರಾದ ವರ್ಗಿಸ್ ಲೆನಿನ್, ಮಂಡೇಟಿರ ಪೊನ್ನಪ್ಪ, ತಬ್ರಿಸ್, ವಿವಾನ್ ಮತ್ಯಾಸ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts