More

    ಮೈಲುತುತ್ತ ಸಹಾಯಧನಕ್ಕೆ ಕೊಕ್ಕೆ

    ಶಿರಸಿ: ಮಲೆನಾಡಿನಲ್ಲಿ ಅಡಕೆಗೆ ಬರುವ ಕೊಳೆರೋಗ ನಿಯಂತ್ರಿಸಲು ಬೆಳೆಗಾರರು ಸಿಂಪಡಿಸುವ ಬೋಡೋ ದ್ರಾವಣ ತಯಾರಿಕೆಯ ಮೂಲವಸ್ತು ಮೈಲುತುತ್ತಕ್ಕೆ ಈ ಬಾರಿಯೂ ಸಹಾಯಧನ ಬಿಡುಗಡೆಯಾಗಿಲ್ಲ.
    ಉತ್ತರ ಕನ್ನಡ ಜಿಲ್ಲೆ ತೋಟಗಾರಿಕೆ ಜಿಲ್ಲೆಯೆಂದೇ ಪ್ರಸಿದ್ಧಿಯಾಗಿದೆ. 32 ಸಾವಿರ ಹೆಕ್ಟೇರ್ ಅಡಕೆ ಕ್ಷೇತ್ರ ಜಿಲ್ಲೆಯಲ್ಲಿದೆ.
    1 ಲಕ್ಷಕ್ಕೂ ಅಧಿಕ ಅಡಕೆ ಬೆಳೆಗಾರರು ಇಲ್ಲಿದ್ದಾರೆ. ಶಿರಸಿ ಅಡಕೆ ಎಂದು ಗ್ಲೋಬಲ್ ಇಂಡಿಕೇಶನ್ (ಜಿಐ) ಮಾನ್ಯತೆ ಹೊಂದಿದ್ದು, ಅದಕ್ಕೆ ಹೊರ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಆದರೆ ಇಂಥ ಅಡಕೆಯನ್ನು ಕೊಳೆ ರೋಗದಿಂದ ರಕ್ಷಿಸಿಕೊಳ್ಳಲು ಅತಿ ಮುಖ್ಯವಾಗಿ ಸಿಂಪಡಿಸುವ ಮೈಲುತುತ್ತಕ್ಕೆ ಸರ್ಕಾರ ಸಹಾಯಧನ ನೀಡಲು ಮೀನಮೇಷ ಎಣಿಸುತ್ತಿದೆ.
    ಮೈಲುತುತ್ತಕ್ಕೆ ವರ್ಷವೂ ಮೂರು ಹಂತದಲ್ಲಿ ಸಹಾಯಧನ ಬಿಡುಗಡೆ ಆಗುತ್ತಿತ್ತು. ತಾಲೂಕು ಪಂಚಾಯಿತಿ ಕೂಡ ಮೈಲುತುತ್ತಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡುತ್ತಿತ್ತು. ಪ್ರತಿ ವರ್ಷ 1 ಲಕ್ಷ ರೂ. ಇದಕ್ಕಾಗಿ ತಾಪಂಗಳು ಮೀಸಲಿಡುತ್ತಿದ್ದವು.
    ಅರ್ಜಿ ಸ್ವೀಕಾರಕ್ಕೆ ಬ್ರೇಕ್: ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿ ರಾಜ್ಯ ಹಾಗೂ ಕೇಂದ್ರ ವಲಯಗಳಿಂದ ಪ್ರತ್ಯೇಕ ಸಹಾಯಧನಕ್ಕಾಗಿ ಹಣ ಬಿಡುಗಡೆ ಮಾಡಲಾಗುತ್ತಿತ್ತು. ರೈತರಿಂದ ಅರ್ಜಿ ಸ್ವೀಕರಿಸುವ ತೋಟಗಾರಿಕೆ ಇಲಾಖೆ ಈ ಮೂರು ಅನುದಾನವನ್ನು ಒಳಗೊಂಡಂತೆ ಪ್ರತಿ ಹೆಕ್ಟೇರ್ ಅಡಕೆ ತೋಟಕ್ಕೆ 1500 ರೂ. ಸಹಾಯಧನ ನೀಡುತ್ತಿತ್ತು. ಆದರೆ ಕಳೆದೆರಡು ಅವಧಿಯಿಂದ ಕರೊನಾ ನೆಪವೊಡ್ಡಿ ಮೈಲುತುತ್ತಕ್ಕೆ ನೀಡುತ್ತಿದ್ದ ಸಹಾಯಧನಕ್ಕೆ ಕೊಕ್ಕೆ ಹಾಕಲಾಗಿದೆ. ಇದರಿಂದ ಜಿಲ್ಲೆಯ 2 ಸಾವಿರ ರೈತರಿಗೆ ಕಳೆದ ವರ್ಷ ಬರಬೇಕಿದ್ದ ಅಂದಾಜು 15 ಲಕ್ಷ ರೂ. ಸಹಾಯಧನ ಬಾಕಿಯಿದೆ.
    ಈ ಬಾರಿ ಇನ್ನೂ ಸಹಾಯಧನದ ಮೊತ್ತ ಬಿಡುಗಡೆಯಾಗದ ಕಾರಣ ಈ ವರ್ಷ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯನ್ನು ತೋಟಗಾರಿಕಾ ಇಲಾಖೆ ಕೈಬಿಟ್ಟಿದೆ. ಇದರಿಂದ ಬೋಡೋ ತಯಾರಿಕೆಗಾಗಿ ಈಗಾಗಲೇ ಮೈಲುತುತ್ತ ಖರೀದಿಸಿದ ರೈತರು ಇಲಾಖೆಗೆ ಅರ್ಜಿ ನೀಡಲು ಮುಂದಾದರೂ ಪ್ರಯೋಜನ ಇಲ್ಲದಂತಾಗಿದೆ.


    ಕಳೆದೊಂದು ದಶಕದಿಂದ ಮೈಲುತುತ್ತ ಖರೀದಿ ಮೇಲೆ ಸರ್ಕಾರ ಸಹಾಯಧನ ನೀಡುತ್ತಿತ್ತು. ಖರೀದಿ ಬಿಲ್ ಜತೆ ಕೆಲ ದಾಖಲೆಯನ್ನು ತೋಟಗಾರಿಕೆ ಇಲಾಖೆಗೆ ನೀಡಿದರೆ ಅಂತಹ ಕೃಷಿಕರ ಖಾತೆಗೆ ಇಲಾಖೆಯಿಂದ ಸಹಾಯಧನ ಮೊತ್ತ ಜಮೆ ಮಾಡಲಾಗುತ್ತಿತ್ತು. ಆದರೆ, ಕಳೆದ ವರ್ಷ ಅರ್ಜಿ ನೀಡಿದರೂ ಈವರೆಗೂ ಮೊತ್ತ ನೀಡಿಲ್ಲ.
    | ಸದಾಶಿವ ಹೆಗಡೆ ಅಡಕೆ ಬೆಳೆಗಾರ

    ಕಳೆದ ವರ್ಷ ಅರ್ಜಿ ಸಲ್ಲಿಸಿದ್ದ ರೈತರಿಗೆ ಮೈಲುತುತ್ತದ ಸಹಾಯಧನ ನೀಡುವುದು ಬಾಕಿಯಿದೆ. ಈ ಬಾರಿ ಕೂಡ ಸಹಾಯಧನ ಮೊತ್ತ ಬಿಡುಗಡೆಯಾಗಿಲ್ಲ. ಮೈಲುತುತ್ತ ಸಹಾಯಧನ ನೀಡುವ ಸಂಬಂಧ ಸರ್ಕಾರದ ನಿರ್ದೇಶನಕ್ಕೆ ಕಾಯಲಾಗುತ್ತಿದೆ.
    | ಸತೀಶ ಹೆಗಡೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts