More

    ಮೈಗಳ್ಳರಿಗೆ ಚಾಟಿ ಬೀಸಲು ವಿಜಿಲೆನ್ಸ್ ಕಮಿಟಿ

    ಶಿವಮೊಗ್ಗ: ಸಿಮ್್ಸ ಆಡಳಿತ ಮಂಡಳಿ ಸದಸ್ಯರಾದ ಡಾ. ವಾಣಿ ಕೋರಿ, ಡಾ. ಗೌತಮ್ ಹಾಗೂ ದಿವಾಕರ ಶೆಟ್ಟಿ ಅವರ ವಿಜಿಲೆನ್ಸ್ ಕಮಿಟಿ ರಚಿಸಲಾಗಿದೆ. ಕಮಿಟಿ ರಚಿಸಿರುವುದು ಯಾರನ್ನೋ ಬಲಿಪಶು ಮಾಡುವುದಕ್ಕಲ್ಲ. ಬದಲಾಗಿ ಮೈಗಳ್ಳರಿಗೆ ಚಾಟಿ ಬೀಸಲು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

    ಮೆಗ್ಗಾನ್ ಆಸ್ಪತ್ರೆಯಲ್ಲಿ ಶನಿವಾರ 16 ವಿಭಾಗಗಳ ಮುಖ್ಯಸ್ಥರು ಹಾಗೂ ಹಿರಿಯ ವೈದ್ಯರೊಂದಿಗೆ ಸಭೆ ನಡೆಸಿದ ಅವರು, ಡ್ಯೂಟಿಯಲ್ಲಿರುವ ವೈದ್ಯರು ಆಸ್ಪತ್ರೆಯಲ್ಲಿರುವುದು ಸೇರಿ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಸಮಿತಿ ರಚಿಸಲಾಗಿದೆ ಎಂದರು.

    ಹಿರಿಯ ವೈದ್ಯರು ಮೆಗ್ಗಾನ್ ಆಸ್ಪತ್ರೆಗೆ ತಮ್ಮ ಅನುಭವವನ್ನು ಧಾರೆಯೆರೆಯಬೇಕು. ಇನ್ನೊಂದು ವರ್ಷದಲ್ಲಿ ಮೆಗ್ಗಾನ್​ನಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುವಂತೆ ಕೆಲಸ ಮಾಡಬೇಕು. ಆಸ್ಪತ್ರೆಗೆ ಬರುವವರನ್ನು ವೈದ್ಯರು ನಿಮ್ಮ ಅಣ್ಣನೋ, ತಮ್ಮನೋ ಅಥವಾ ಸಂಬಂಧಿಯೋ ಎಂದು ತಿಳಿದರೆ ಶೇ.90 ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದರು.

    ಕರ್ತವ್ಯದ ಸಮಯದಲ್ಲಿ ಹಿರಿಯ ವೈದ್ಯರು ಇರಲ್ಲ ಎಂಬ ದೂರು ಬರುತ್ತಿವೆ. ವಾಟ್ಸ್​ಆಪ್ ಮೂಲಕ ಕಿರಿಯ ವೈದ್ಯರಿಗೆ ಸಲಹೆ ಸೂಚನೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇಲ್ಲಿ ನಿಮ್ಮನ್ನು ತೆಗಳುವುದಕ್ಕೆ ಅಥವಾ ಶಿಕ್ಷಿಸುವುದಕ್ಕೆ ಬಂದಿಲ್ಲ. ಬದಲಾಗಿ ರೋಗಿಗಳಿಗೆ ಉತ್ತಮ ಸೇವೆ ನಿರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದರು.

    ಮಣಿಪಾಲ್​ಗೆ ಎಷ್ಟು ಆಂಬುಲೆನ್ಸ್ ಹೋಗ್ತಾವೆ ಗೊತ್ತಾ?: ಶಿವಮೊಗ್ಗದಿಂದ ಮಣಿಪಾಲ್​ಗೆ ಪ್ರತಿನಿತ್ಯ ಎಷ್ಟು ಆಂಬುಲೆನ್ಸ್ ಹೋಗುತ್ತಿವೆ ಎಂಬುದನ್ನು ತಿಳಿದುಕೊಳ್ಳಲು ಒಮ್ಮೆ ತೀರ್ಥಹಳ್ಳಿಗೆ ಬಂದರೆ ಗೊತ್ತಾಗುತ್ತದೆ. ಹೆಸರಿಗೆ ಇದು ಸಿಎಂ ಕ್ಷೇತ್ರ. ಚಿಕಿತ್ಸೆಗೆ ಕೋಟ್ಯಂತರ ರೂ. ವ್ಯಯಿಸಲಾಗುತ್ತಿದೆ. ಆದರೂ ಜನ ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ. ಇದಕ್ಕೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗುತ್ತಿಲ್ಲ ಎಂಬುದೇ ಕಾರಣ ಎಂದು ಶಾಸಕ ಆರಗ ಜ್ಞಾನೇಂದ್ರ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

    ಆಸ್ಪತ್ರೆಯಲ್ಲಿರುವ ಲೋಪಗಳನ್ನು ಗುರುತಿಸಿ ಸರಿಪಡಿಸಿಕೊಳ್ಳಬೇಕು. ವೈದ್ಯರನ್ನು ನಿಂದಿಸುವ ಕೆಲಸ ಆಗಬಾರದು. 8 ಜಿಲ್ಲೆಯಿಂದ ಮೂಳೆ ಮುರಿತ ರೋಗಿಗಳು ಮೆಗ್ಗಾನ್​ಗೆ ಬರುತ್ತಾರೆ. ಆದರೆ ಆ ರೋಗಿಗಳಿಗೆ ಚಿಕಿತ್ಸೆ ನೀಡಲು ಇಲ್ಲಿ ರೇಡಿಯೋಲಾಜಿ ವಿಭಾಗ, ಎಂಆರ್​ಐ, ಎಲ್ಲ ವಿಭಾಗವಿದ್ದರೂ ನುರಿತ ತಜ್ಞರಿಲ್ಲ. ಇದರಿಂದ ತುರ್ತು ರೋಗಿಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಪ್ರಮಾಣ ಮಾಡಿದ್ದೀರಿ ಎಚ್ಚರ: ಮೆಗ್ಗಾನ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯರಿಗೆ ಶಿಕ್ಷಣ ನೀಡಿ ಡ್ಯೂಟಿ ಮಾಡುವ ನಿಮಗೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಸಮಯ ಹೇಗೆ ಸಿಗುತ್ತದೆ? ಎಂದು ಡಿಸಿ ಕೆ.ಬಿ.ಶಿವಕುಮಾರ್ ಹಿರಿಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮಲ್ಲಿರುವ ವೈದ್ಯರೇ ನಿಮ್ಮ ಶತ್ರುಗಳು. ನೀವು ಪ್ರಮಾಣ ತೆಗೆದುಕೊಂಡು ಕರ್ತವ್ಯ ಮಾಡುತ್ತಿದ್ದೀರಿ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮೂಲಕ ಉಲ್ಲಂಘನೆ ಮಾಡುತ್ತಿದ್ದೀರಿ. ಕಿರಿಯ ವೈದ್ಯರಿಗೆ ಸೂಚನೆ ನೀಡಿ ಹಿರಿಯ ವೈದ್ಯರು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆಂದು ನಿಮ್ಮವರೇ ಬಂದು ನಮ್ಮ ಬಳಿ ದೂರು ನೀಡಿದ್ದಾರೆ. ಇನ್ಮುಂದೆ ದೂರು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದರು.

    ರಾಜೀನಾಮೆ ನೀಡಿದ್ದು ಸರಿಯಲ್ಲ: ಸಿಮ್್ಸ ನಿರ್ದೇಶಕರಾಗಿ ಡಾ. ಒ.ಎಸ್.ಸಿದ್ದಪ್ಪ ಅವರು ಅಧಿಕಾರ ಸ್ವೀಕರಿಸಿರುವುದು ಸಂತೋಷದ ವಿಷಯ. ಆದರೆ ಪ್ರಭಾರರಾಗಿದ್ದ ಡಾ. ಕೆ.ಗುರುಪಾದಪ್ಪ ರಾಜೀನಾಮೆ ನೀಡಿದ್ದು ಸರಿಯಲ್ಲ. ನಿಮ್ಮ ವಿರುದ್ಧ ಒಂದು ದಿನವೂ ಮಾತನಾಡಿಲ್ಲ. ಟೆನ್ಶನ್ ಮಾಡಿಕೊಂಡು ರಾಜೀನಾಮೆ ನೀಡಿದ್ರಾ ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದರು. ನೀವು ರಾಜೀನಾಮೆ ನೀಡಿದ್ದು ಬಹಳ ಬೇಸರ ತಂದಿದೆ ಎಂದರು.

    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಕೆ.ಬಿ.ಅಶೋಕ್​ನಾಯ್್ಕ ಎಂಎಲ್​ಸಿ ಆರ್.ಪ್ರಸನ್ನಕುಮಾರ್, ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಜಿಪಂ ಸಿಇಒ ಎಂ.ಎಲ್.ವೈಶಾಲಿ, ಸಿಮ್್ಸ ನಿರ್ದೇಶಕ ಡಾ. ಓ.ಎಸ್.ಸಿದ್ದಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts