More

    ಮೈಕ್ ನಿಷೇಧಿಸದಿದ್ದರೆ ಸಾವಿರಾರು ಠಾಣೆಯಲ್ಲಿ ದೂರು

    ಕಾರವಾರ: ಮಸೀದಿಗಳಲ್ಲಿ ಮೈಕ್ ಬಳಕೆ ನಿಷೇಧಿಸಬೇಕು ಎಂದು ಆಗ್ರಹಿಸಿ ರಾಜ್ಯದ ಸಾವಿರಕ್ಕೂ ಅಧಿಕ ಪೊಲೀಸ್ ಠಾಣೆಗಳಲ್ಲಿ ಏಪ್ರಿಲ್ ಕೊನೆಯ ವಾರ ಏಕ ಕಾಲದಲ್ಲಿ ದೂರು ಸಲ್ಲಿಸಲಿದ್ದೇವೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಮಸೀದಿಗಳಲ್ಲಿ ಮೈಕ್ ಬಳಕೆಯಿಂದ ಶಬ್ದ ಮಾಲಿನ್ಯ ಉಂಟಾಗಿ ತೊಂದರೆಯಾಗಲಿದೆ ಎಂಬ ದೂರಿನ ಕಾರಣ, ಅವುಗಳನ್ನು ತೆಗೆಯಬೇಕು ಎಂದು ಸುಪ್ರೀಂ ಕೋರ್ಟ್ 22 ವರ್ಷಗಳ ಹಿಂದೆಯೇ ಆದೇಶ ಮಾಡಿದೆ. ಆದರೆ, ಆದೇಶ ಜಾರಿಯಾಗಿಲ್ಲ.

    ಈಗ ರಾಜ್ಯ ವಕ್ಪ್ ಬೋರ್ಡ್ ರಾಜ್ಯದ 32 ಸಾವಿರ ಮಸೀದಿಗಳಿಗೆ ನೋಟಿಸ್ ನೀಡಿ, ರಾತ್ರಿ ವೇಳೆ ಮೈಕ್ ಬಳಸದಂತೆ ತಿಳಿಸಿದೆ. ಈ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಪಾಲನೆಯಾಗುವ ವಿಶ್ವಾಸವಿಲ್ಲ. ಇನ್ನೊಂದು ತಿಂಗಳಲ್ಲಿ ರಾತ್ರಿ ಮೈಕ್ ನಿಷೇಧ ಪಾಲನೆಯಾಗದೇ ಇದ್ದಲ್ಲಿ ಪೊಲೀಸ್ ಠಾಣೆಗಳಲ್ಲಿ ನ್ಯಾಯಾಂಗ ನಿಂದನೆ ಆರೋಪದ ಮೇಲೆ ಮಸೀದಿಗಳ ವಿರುದ್ಧ ದೂರು ನೀಡಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ದೂರು ಬಂದಲ್ಲಿ ದೇವಸ್ಥಾನಗಳ ಮೈಕ್​ಗಳನ್ನೂ ತೆಗೆಸಬೇಕು. ಪಟಾಕಿ ಹೊಡೆಯುವುದನ್ನೂ ನಿಲ್ಲಿಸಬೇಕು ಎಂಬುದು ನಮ್ಮ ನಿಲುವು ಎಂದರು.

    ಟೆಂಡರ್ ಅವ್ಯವಹಾರ: ಭಟ್ಕಳ ತಾಲೂಕಿನ ಮುರ್ಡೆಶ್ವರದಲ್ಲಿ ಜಲ ಸಾಹಸ ಕ್ರೀಡೆ ಹಾಗೂ ಸ್ಕೂಬಾ ಡೈವಿಂಗ್ ಟೆಂಡರ್ ಹಂಚಿಕೆಯಲ್ಲಿ ಅವ್ಯವಹಾರವಾಗಿದೆ. ಇದರಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ನೇರವಾಗಿ ಭಾಗಿಯಾಗಿದ್ದಾರೆ. ಕಳೆದ ವರ್ಷಗಳ ಗುತ್ತಿಗೆ ಒಪ್ಪಂದದ ಹಣ ಪಾವತಿಸದೇ ಇದ್ದರೂ ಮತ್ತೆ ಗಣೇಶ ಹರಿಕಾಂತ ಎಂಬುವವರಿಗೆ ಟೆಂಡರ್ ನೀಡಲಾಗಿದೆ. ಈ ಸಂಬಂಧ ಮಾಹಿತಿ ಹಕ್ಕಿನಡಿ ದಾಖಲೆ ಪಡೆದ ಕಾರಣಕ್ಕೆ ಶ್ರೀರಾಮ ಸೇನೆ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕ ವಿರುದ್ಧ ಸತ್ಯಕ್ಕೆ ದೂರವಾದ ಆರೋಪ ಮಾಡಿ ಪ್ರಕರಣ ದಾಖಲಿಸಲಾಯಿತು. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಲಾಗುವುದು. ಕ್ರಮವಾಗದೇ ಇದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದರು.

    ಕಾರವಾರದ ಅಂಜುದೀವ್ ದ್ವೀಪದಲ್ಲಿ ಯಾವುದೇ ಕಾರಣಕ್ಕೂ ಕ್ರಿಶ್ಚಿಯನ್ ಆಚರಣೆಗೆ ಅವಕಾಶ ನೀಡಬಾರದು. ನೀಡಿದಲ್ಲಿ, ನಾವು ಅಂಜುದೀವ್ ಚಲೋ ಮಾಡುತ್ತೇವೆ ಎಂದು ಎಚ್ಚರಿಸಿದರು. ಜಯಂತ ನಾಯ್ಕ, ರಾಜೇಶ್ ಸುದ್ದಿಗೋಷ್ಠಿಯಲ್ಲಿದ್ದರು.

    ಸ್ಪರ್ಧಿಸುವ ಇಚ್ಛೆ ಇದೆ

    ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಉಪ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಟ್ಟಲ್ಲಿ ಸ್ಪರ್ಧೆ ಮಾಡಿ, ಗೆಲ್ಲುತ್ತೇನೆ. ಎರಡೂವರೆ ವರ್ಷದಲ್ಲಿ ಸಾಕಷ್ಟು ಜನಪರ ಕೆಲಸ ಮಾಡುತ್ತೇನೆ. ಟಿಕೆಟ್ ಕೊಡದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸುವುದಿಲ್ಲ. ಬಯಸಿದರೆ, ಬಿಜೆಪಿ ಪರ ಪ್ರಚಾರಕ್ಕೆ ತೆರಳುತ್ತೇನೆ ಎಂದು ಪ್ರಮೋದ ಮುತಾಲಿಕ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts