More

    ಮೆಡಿಕಲ್ ಶಾಪ್​ನಿಂದ ಆಸ್ಪತ್ರೆಗೆ

    ವಿಜಯವಾಣಿ ಸುದ್ದಿಜಾಲ ಶಿರಸಿ: ಲಾಕ್​ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಕೋವಿಡ್-19 ಲಕ್ಷಣ ಇರುವವರ ಪತ್ತೆಗೆ ಶಿರಸಿಯಲ್ಲಿ ಹೊಸ ವಿಧಾನ ಅನುಸರಿಸಲಾಗುತ್ತಿದೆ. ವೈದ್ಯರ ಚೀಟಿಯಿಲ್ಲದೆ ಶೀತ, ಥಂಡಿ, ಕೆಮ್ಮು ಸೇರಿ ವಿವಿಧ ಕಾರಣಕ್ಕೆ ಔಷಧ ಅಂಗಡಿಗೆ ಬಂದು ಮಾತ್ರೆ ಪಡೆಯುವ ಗ್ರಾಹಕರನ್ನು ತಾಲೂಕು ಆಸ್ಪತ್ರೆಗೆ ಕಡ್ಡಾಯವಾಗಿ ಕಳುಹಿಸಲಾಗುತ್ತಿದೆ.

    ಲಾಕ್​ಡೌನ್ ನಿಯಮ ಸಡಿಲಿಕೆಯಿಂದ ಹಲವರು ರಸ್ತೆಗಿಳಿಯುತ್ತಿದ್ದಾರೆ. ಇದೇ ವೇಳೆ ಹಲವು ಜನರು ಶೀತ, ಕೆಮ್ಮು, ನೆಗಡಿ, ಗಂಟಲುನೋವು ಇದ್ದರೂ ವೈದ್ಯರನ್ನು ಸಂರ್ಪಸದೆ, ಅವರ ಸಲಹೆಯಿಲ್ಲದೆಯೂ ಔಷಧ ಅಂಗಡಿಯಿಂದ ತಮಗೆ ಬೇಕಾದ ಔಷಧ ಕೊಂಡೊಯ್ಯುತ್ತಿದ್ದಾರೆ. ಒಂದೊಮ್ಮೆ ಕೋವಿಡ್-19 ಲಕ್ಷಣ ಇರುವ ಜನರು ಹೀಗೆ ವರ್ತಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದನ್ನು ಅರಿತ ತಾಲೂಕು ಆರೋಗ್ಯಾಧಿಕಾರಿ ‘ಯಾರಾದರು ಶೀತ, ಕೆಮ್ಮು, ನೆಗಡಿ, ಜ್ವರ, ಗಂಟಲುನೋವು ಸೇರಿ ಯಾವುದೇ ರೋಗಕ್ಕೆ ಸಂಬಂಧಿಸಿ ಮಾತ್ರೆ ಅಥವಾ ಸಿರಪ್ ತೆಗೆದುಕೊಳ್ಳುತ್ತಾರೋ ಅವರ ವಿಳಾಸ, ದೂರವಾಣಿ ಸಂಖ್ಯೆಯನ್ನು ಪಡೆದು ತಮಗೆ ಕಡ್ಡಾಯವಾಗಿ ಕಳುಹಿಸಿ’ ಎಂಬ ಖಡಕ್ ಸೂಚನೆ ನೀಡಿದ್ದಾರೆ.

    ನಗರದಲ್ಲಿ ಸುಮಾರು 40ರಷ್ಟು ಔಷಧ ಅಂಗಡಿಗಳು ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲರಿಗೂ ಈ ಸೂಚನೆ ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ಚೀಟಿಯಿಲ್ಲದೆ ಬಂದವರನ್ನು ತಾಲೂಕು ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ. ಹಲವರು ಔಷಧ ಅಂಗಡಿವರೆಗೆ ಬಂದು ನಂತರ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆದು ನಂತರ ಔಷಧ ಪಡೆಯುತ್ತಿದ್ದಾರೆ. ಕೋವಿಡ್ ಪರೀಕ್ಷೆಗೆ ಈ ವಿಧಾನ ಅನುಕೂಲ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.

    ಕೋವಿಡ್-19 ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಔಷಧ ಅಂಗಡಿ ಮಾಲೀಕರಿಗೆ ಸೂಚಿಸಿದ್ದು, ಅವರ ಹೇಳಿಕೆಯಂತೆ ಆಸ್ಪತ್ರೆಗೆ ಬಂದ ರೋಗಿಗಳನ್ನು ಫೀವರ್ ಕ್ಲೀನಿಕ್​ಗೆ ಕಳುಹಿಸಿ ಪರೀಕ್ಷೆ ಮಾಡಲಾಗುತ್ತದೆ. ನಂತರ ಸಂಬಂಧಪಟ್ಟ ರೋಗಕ್ಕೆ ಔಷಧ ನೀಡಲಾಗುತ್ತಿದ್ದು, ಕೋವಿಡ್-19 ಲಕ್ಷಣ ಕಂಡು ಬಂದರೆ ಹೆಚ್ಚಿನ ಕ್ರಮ ವಹಿಸಲಾಗುತ್ತದೆ. | ಡಾ.ವಿನಾಯಕ ಭಟ್ಟ ತಾಲೂಕು ಆರೋಗ್ಯಾಧಿಕಾರಿ

    ಈ ಮೊದಲು ಗ್ರಾಹಕರು ಶೀತ, ಕೆಮ್ಮು, ನೆಗಡಿ, ಜ್ವರ, ಗಂಟಲುನೋವು ಕಾರಣಕ್ಕೆ ಮಾತ್ರೆ ಅಥವಾ ಸಿರಪ್ ಕೇಳಿದರೆ ನೀಡಲಾಗುತ್ತಿತ್ತು. ಆದರೆ, ಈಗ ಆರೋಗ್ಯಾಧಿಕಾರಿಗಳ ಸೂಚನೆ ಬಂದಿದ್ದು, ಗ್ರಾಹಕರಿಗೆ ಆಸ್ಪತ್ರೆಗೆ ತೆರಳಿ ಪರೀಕ್ಷೆ ನಂತರವಷ್ಟೇ ಔಷಧ ವಿತರಿಸಲಾಗುತ್ತಿದೆ. | ಹೆಸರು ಹೇಳಲಿಚ್ಛಿಸದ ಔಷಧ ಅಂಗಡಿ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts