More

    ಮೆಕ್ಕೆಜೋಳ ತೆನೆ ಕೀಳಲು ರೈತರ ಹರಸಾಹಸ!

    ಹಾವೇರಿ: ಇಲ್ಲಿ ಮೆಕ್ಕೆಜೋಳ ತೆನೆ ಕೀಳಲು ರೈತರು ಹರಸಾಹಸ ಪಡಬೇಕು. ಮೊಣಕಾಲುದ್ದದ ನೀರಿನಲ್ಲಿ ನಿಂತು ಬುಟ್ಟಿ ತೇಲಿಸಿಕೊಂಡು ಫಸಲು ರಕ್ಷಿಸಿಕೊಳ್ಳಬೇಕು.. ಇದು ಇಲ್ಲಿನ ರೈತರ ಪ್ರತಿವರ್ಷದ ಗೋಳು…!

    ಇದಕ್ಕೆ ಕಾರಣ ಹೆಗ್ಗೇರಿ ಕೆರೆ ಹಿನ್ನೀರು…!

    ಹೌದು! ತಾಲೂಕಿನ ಕೆರಿಮತ್ತಿಹಳ್ಳಿಯ ಹೆಗ್ಗೇರಿ ಕೆರೆ ಈ ಬಾರಿ ಸುರಿದ ಅತಿವೃಷ್ಟಿಯಿಂದಾಗಿ ಸಂಪೂರ್ಣ ತುಂಬಿದೆ. ಹೀಗಾಗಿ ಕೆರೆಯ ಸುತ್ತಲಿನ ರೈತರು ಜಮೀನಿನಲ್ಲಿ ಕೆರೆಯಿಂದ ಒಕ್ಕುವ ಹಿನ್ನೀರು ಮೊಣಕಾಲುದ್ದ ನಿಂತಿದೆ. ರೈತರು ಜಮೀನಿನಿಂದ ಫಸಲನ್ನು ತೆಗೆದುಕೊಳ್ಳಲು ಹರಸಾಹಸ ಪಡುವಂತಾಗಿದೆ.

    ತಾಲೂಕಿನ ಕೆರಿಮತ್ತಿಹಳ್ಳಿಯ ರೈತ ಕಾಂತೇಶ ಪಾಟೀಲ, ಚನ್ನಪ್ಪ ಕಳ್ಳಿಮನಿ ಎಂಬ ರೈತರು ತಮ್ಮ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಕಳೆದ ತಿಂಗಳು ಸುರಿದ ಅಕಾಲಿಕ ಮಳೆಯಿಂದ ಜಮೀನಿನ ಪಕ್ಕದಲ್ಲಿರುವ ಹೆಗ್ಗೇರಿಕೆರೆಯ ಹಿನ್ನೀರು ರೈತನ ಜಮೀನಿನಲ್ಲಿ ನಿಂತಿದೆ. ಹೀಗಾಗಿ ರೈತ ಕಾಂತೇಶ ಮಂಗಳವಾರ ಕೂಲಿ ಕಾರ್ವಿುಕರನ್ನು ಕರೆದುಕೊಂಡು ಮೊಣಕಾಲುದ್ದ ನೀರಿನಲ್ಲಿಯೇ ಬುಟ್ಟಿಗಳನ್ನು ತೇಲಿಸುತ್ತ ಮೆಕ್ಕೆಜೋಳ ತೆನೆಗಳನ್ನು ಕಟಾವು ಮಾಡುತ್ತಿದ್ದಾರೆ. ಇನ್ನೊಬ್ಬ ರೈತ ಚನ್ನಪ್ಪ ಸ್ವಲ್ಪ ದಿನ ಕಾಯ್ದು ಕಟಾವು ಮಾಡಲು ನಿರ್ಧರಿಸಿದ್ದಾರೆ.

    ನೀರಿನಲ್ಲಿ ತೇಲಿದ ಬುಟ್ಟಿಗಳು: ಮೆಕ್ಕೆಜೋಳ ತೆನೆ ಮುರಿದ ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಹಾಕುತ್ತಿದ್ದ ವೇಳೆ ಬುಟ್ಟಿಗಳು ನೀರಿನಲ್ಲಿ ತೇಲಿ ಹೋಗುತ್ತಿದ್ದವು. ಅವುಗಳನ್ನು ಹಿಡಿದು ತೆನೆ ಮುರಿದು ಹಾಕಿ ಬೆಳೆ ರಕ್ಷಿಸಿಕೊಳ್ಳಲು ರೈತರು ಹರಸಾಹಸಪಟ್ಟರು. ಅಲ್ಲದೆ, ಕಟಾವು ಮಾಡಿದ ತೆನೆಗಳನ್ನು ಸಾಗಿಸಲು ಮೊಣಕಾಲುದ್ದ ನೀರಿನಲ್ಲಿ ಬುಟ್ಟಿಯನ್ನು ತಲೆ ಮೇಲೆ ಹೊತ್ತು ಸಾಗಿಸಿದರು.

    ಪ್ರತಿವರ್ಷ ತಪ್ಪದ ಗೋಳು: ತಾಲೂಕಿನಲ್ಲಿ ಅತಿಹೆಚ್ಚು ಮಳೆ ಸುರಿದಾಗ ಕೆರಿಮತ್ತಿಹಳ್ಳಿಯಲ್ಲಿ ಹೆಗ್ಗೇರಿಕೆರೆಗೆ ಹೊಂದಿಕೊಂಡಿರುವ ಜಮೀನುಗಳಿಗೆ ಹಿನ್ನೀರು ನುಗ್ಗುತ್ತಿದೆ. ಈ ಭಾಗದಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುತ್ತಾರೆ. ಹಿನ್ನೀರು ಬರುವಷ್ಟರಲ್ಲಿ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿ ತೆನೆಗಳು ಕಾಳುಕಟ್ಟಿರುತ್ತವೆ. ಇದನ್ನು ಬಿಟ್ಟು ಬೇರೆ ಬೆಳೆ ಹಾಕಿದರೆ ಅದು ನೀರಿನಲ್ಲಿ ಹಾಳಾಗಿ ಹೋಗುತ್ತದೆ. ಮೆಕ್ಕೆಜೋಳ ತೆನೆ ಕಟ್ಟುವ ಸಮಯಕ್ಕೆ ಕೆರೆಯ ಹಿನ್ನೀರು ಜಮೀನುಗಳಿಗೆ ಬರಲಾರಂಭಿಸುತ್ತದೆ. ಆದ್ದರಿಂದ ರೈತರು ತೆನೆ ಒಣಗುವ ಸಮಯದವರೆಗೆ ಬಿಟ್ಟು ನೀರು ಕಡಿಮೆಯಾದ ಮೇಲೆ ಕಟಾವು ಮಾಡುತ್ತಿದ್ದರು. ಆದರೆ, ಈ ಬಾರಿ ಡಿಸೆಂಬರ್ ಬಂದರೂ ನೀರು ಕಡಿಮೆಯಾಗಲಿಲ್ಲ. ಹೀಗಾಗಿ ಬೆಳೆ ರಕ್ಷಿಸಲು ಹರಸಾಹಸ ಪಡುವಂತಾಗಿದೆ ಎಂದು ರೈತ ಚನ್ನಪ್ಪ ಕಳ್ಳಿಮನಿ ತಿಳಿಸಿದ್ದಾರೆ.

    ಕೂಲಿ ಕಾರ್ವಿುಕರು ಬರಲು ಹಿಂದೇಟು: ಜಮೀನಿನ ತುಂಬ ನೀರು ತುಂಬುವ ಕಾರಣ ಹಾವು, ಚೇಳು ಸೇರಿ ವಿಷಕಾರಿ ಜಲಚರಗಳು ನೀರಿನಲ್ಲಿ ತೇಲಿ ಬರುತ್ತವೆ. ಅಲ್ಲದೆ, ಸಂಪೂರ್ಣ ನೀರಿನಲ್ಲಿ ನಿಂತು ಮೆಕ್ಕೆಜೋಳ ತೆನೆ ಕಟಾವು ಮಾಡಬೇಕು. ಹೀಗಾಗಿ ಕಟಾವು ಮಾಡಲು ಕೂಲಿ ಕಾರ್ವಿುಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ದುಬಾರಿ ಕೂಲಿ ಕೊಡುವ ಸ್ಥಿತಿಯಲ್ಲಿ ರೈತರಿಲ್ಲ. ಈಗಾಗಲೇ ಮೆಕ್ಕೆಜೋಳದ ಬೆಲೆಯೂ ಕುಸಿತ ಕಂಡಿದ್ದು, ಇದರಿಂದ ರೈತರಿಗೆ ಮತ್ತಷ್ಟು ನಷ್ಟವಾಗುತ್ತಿದೆ.

    ಹೆಚ್ಚಿನ ಮಳೆಯಾದಾಗಲೊಮ್ಮೆ ಹೆಗ್ಗೇರಿಕೆರೆ ತುಂಬುತ್ತದೆ. ಇದರಿಂದ ಕೆರಿಮತ್ತಿಹಳ್ಳಿ ಭಾಗದಲ್ಲಿರುವ ನಮ್ಮ ಜಮೀನುಗಳಿಗೆ ಹಿನ್ನೀರು ನುಗ್ಗಿ ಸಮಸ್ಯೆಯಾಗುತ್ತಿದೆ. ಕೆರೆಯ ಏರಿಯನ್ನು ಸ್ವಲ್ಪ ಕಡಿಮೆ ಮಾಡಿದರೆ ಮಾತ್ರ ನಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು. ಇಲ್ಲವಾದರೆ ಹೆಚ್ಚು ಮಳೆಯಾದಾಗಲೊಮ್ಮೆ ನಮ್ಮೂರಿನ ಅನೇಕ ರೈತರು ಇದೇ ರೀತಿ ಸಂಕಷ್ಟ ಪಡುತ್ತೇವೆ.
    | ಕಾಂತೇಶ ಪಾಟೀಲ, ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts