More

    ಮೂಗನೂರ ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷ ವಿರುದ್ಧ ಅವಿಶ್ವಾಸ

    ಕಮತಗಿ: ಸಮೀಪದ ಮೂಗನೂರ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನೆಗೆ ಅವಶ್ಯವಿದ್ದ 2/3ಕ್ಕಿಂತ ಹೆಚ್ಚಿನ (11) ಸದಸ್ಯರು ಅವಿಶ್ವಾಸ ಮಂಡನೆ ಪರವಾಗಿ ಮತ ಚಲಾವಣೆ ಮಾಡಿದ್ದರಿಂದ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು ಅಧಿಕಾರ ಕಳೆದುಕೊಂಡರು.

    ಗ್ರಾಪಂ ಸಭಾಭವನದಲ್ಲಿ ಶುಕ್ರವಾರ ಬಾಗಲಕೋಟೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರ ಅಧ್ಯಕ್ಷತೆಯಲ್ಲಿ ನಡೆದ ಅವಿಶ್ವಾಸ ಮಂಡನೆಯ ಸಭೆಯಲ್ಲಿ ಮೊದಲಿಗೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನೆಯ ಸಭೆಯಲ್ಲಿ ಒಟ್ಟು 16 ಸದಸ್ಯರಲ್ಲಿ ಒಬ್ಬ ಸದಸ್ಯರು ನಿಧನರಾಗಿದ್ದರಿಂದ 15 ಜನ ಸದಸ್ಯರ ಪೈಕಿ 11 ಜನ ಸದಸ್ಯರು ಹಾಜರಿದ್ದರು. ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು ಸೇರಿ ಇನ್ನುಳಿದ ಇಬ್ಬರು ಸದಸ್ಯರು ಗೈರಾಗಿದ್ದರು. ಉಳಿದ 11 ಸದಸ್ಯರು ಹಾಜರಾಗಿ ಸಹಿ ಮಾಡಿ ಸಭೆಗೆ ಅವಶ್ಯವಿದ್ದ 2/3 ರಷ್ಟು ಕೋರಂ ತೋರಿದ್ದರಿಂದ ಮೊದಲಿಗೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನೆ ಮಂಡನೆಯನ್ನು ಮತಕ್ಕೆ ಹಾಕಲಾಯಿತು. ಆದರೆ ಅಧ್ಯಕ್ಷರ ವಿರುದ್ಧ ಮಾಡಿದ ಅವಿಶ್ವಾಸ ಮಂಡನೆ ಸೂಚನೆ ವಿರುದ್ಧವಾಗಿ ಯಾವುದೇ ಮತ ಚಲಾವಣೆ ಆಗಲಿಲ್ಲ.

    ನಂತರ ಉಪಾಧ್ಯಕ್ಷರ ವಿರುದ್ಧ ನಡೆದ ಅವಿಶ್ವಾಸದ ಮಂಡನೆಯಲ್ಲಿಯೂ 11 ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಅವಿಶ್ವಾಸ ವಿರುದ್ಧವಾಗಿ ಯಾವುದೇ ಮತ ಚಲಾವಣೆ ಆಗಲಿಲ್ಲ.

    ಕರ್ನಾಟಕ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನೆ ಮಂಡನೆ ನಿಯಮಗಳು 1994ರ ನಿಯಮ 9ರನ್ವಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನೆಗೆ ಅವಶ್ಯವಿದ್ದ 2/3ಕ್ಕಿಂತ ಹೆಚ್ಚಿನ ಸದಸ್ಯರು ಅವಿಶ್ವಾಸ ಮಂಡನೆ ಪರವಾಗಿ ಮತ ಚಲಾವಣೆ ಮಾಡಿದ್ದಾರೆ. ಆದ್ದರಿಂದ ಮೂಗನೂರ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಸೂಚನೆಯು ಅಂಗೀಕೃತವಾಗಿದೆ. ಅಧ್ಯಕ್ಷೆ ಶಂಕ್ರವ್ವ ಈರಪ್ಪ ಗಾಣಗೇರ, ಉಪಾಧ್ಯಕ್ಷ ಪಾಂಡಪ್ಪ ಪವಾಡೆಪ್ಪ ಪೂಜಾರ ಇಬ್ಬರು ತಕ್ಷಣದಿಂದ ಜಾರಿಗೆ ಬರುವಂತೆ ಮೂಗನೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸತಕ್ಕದ್ದು. ಅಲ್ಲದೆ ನಿಯಮ 10ರ ಮೇರೆಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮ್ಮ ಅಭಿರಕ್ಷೆಯಲ್ಲಿರುವ ಗ್ರಾಮ ಪಂಚಾಯಿತಿಯ ಎಲ್ಲಾ ದಸ್ತಾವೇಜುಗಳನ್ನು ಮತ್ತು ಹಣ ಅಥವಾ ಇತರ ವಸ್ತುಗಳನ್ನು ಕೂಡಲೇ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಅವರಿಗೆ ಒಪ್ಪಿಸಬೇಕು ಎಂದು 11 ಸದಸ್ಯರ ಸಮ್ಮುಖದಲ್ಲಿ ತಿಳಿಸಲಾಯಿತು. ಮುಂದಿನ ಚುನಾವಣೆಯ ದಿನಾಂಕವನ್ನು ಜಿಲ್ಲಾಧಿಕಾರಿ ಪ್ರಕಟಿಸುವರು ಎಂದು ಎಸಿ ಶ್ವೇತಾ ಬೀಡಿಕರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts