More

    ಮುಳಬಾಗಿಲು ರಾಗಿ ಖರೀದಿ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆ

    ಮುಳಬಾಗಿಲು: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆಯಿಂದ ರೈತರು ನೋಂದಣಿ ಮಾಡಿಸಲು ಸಮಸ್ಯೆಯಾಗಿದ್ದು, ಗಂಟೆಗಂಟಲೆ ಕಾಯುವ ಪರಿಸ್ಥಿತಿ ಉಂಟಾಗಿದೆ.

    ರಾಜ್ಯ ಸರ್ಕಾರ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಬೆಂಬಲ ಬೆಲೆ ಯೋಜನೆಯಲ್ಲಿ ಜಿಲ್ಲೆಯ ರೈತರಿಂದ ಆಯಾ ತಾಲೂಕು ಉಗ್ರಾಣಗಳಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ಜ.1ರಂದು ಆರಂಭಿಸಿದ್ದು, ಜ.18ರವರೆಗೂ ಸರಾಗವಾಗಿ ನೋಂದಣಿ ನಡೆದಿದೆ. ನಂತರ ತಾಂತ್ರಿಕ ಸಮಸ್ಯೆಯಿಂದ ಜ.21ರ ನಂತರ ತಾತ್ಕಾಲಿಕವಾಗಿ ನೋಂದಣಿ ಕಾರ್ಯ ನಿಂತಿದೆ. ಹಾಗಾಗಿ ರೈತರು ರಾಗಿ ಮಾರಾಟ ಮಾಡಲು ನಿತ್ಯ ಖರೀದಿ ಕೇಂದ್ರಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಆರಂಭದಲ್ಲಿ ರೈತರು ದಾಖಲೆ ಹೊಂದಿಸುವುದೇ ಸಮಸ್ಯೆಯಾಗಿತ್ತು. ಈಗ ಎಲ್ಲ ಸರಿ ಇದ್ದರೂ ನೋಂದಣಿಗೆ ತಾಂತ್ರಿಕ ಸಮಸ್ಯೆ ಕಾಡುತ್ತಿದೆ. ಖಾಸಗಿ ವ್ಯಾಪಾರಿಗಳು ಗುಣಮಟ್ಟದ ರಾಗಿ ಕ್ವಿಂಟಾಲ್‌ಗೆ 2 ಸಾವಿರ ರೂ.ಗಳಿಗೆ ಖರೀದಿ ಮಾಡುತ್ತಿದ್ದಾರೆ. ಆದರೆ ಸರ್ಕಾರ 3377 ರೂ. ನೀಡುತ್ತಿರುವುದರಿಂದ ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡಲು ರೈತರು ಮುಂದಾಗುತ್ತಿಲ್ಲ. ಇನ್ನು ಬೆಳೆ ಸಮೀಕ್ಷೆ ಸಮಯದಲ್ಲಿ ಪಹಣಿಯಲ್ಲಿ ಬೆಳೆ ನಮೂದು ಆಗದಿದ್ದಲ್ಲಿ, ಫ್ರೂಟ್ಸ್ ಐಡಿ ಇಲ್ಲದಿದ್ದರೆ ನೋಂದಣಿ ಮಾಡಲು ಸಿಬ್ಬಂದಿ ನಿರಾಕರಿಸುತ್ತಿದ್ದಾರೆ. ಸರ್ಕಾರ ಸಮಸ್ಯೆಗಳನ್ನು ಬಗೆಹರಿಸಿ ರೈತರ ನೆರವಿಗೆ ಬರಬೇಕಿದೆ.

    11,821 ಹೆಕ್ಟೇರ್‌ನಲ್ಲಿ ಬೆಳೆ: ಮುಳಬಾಗಿಲು ತಾಲೂಕಿನಲ್ಲಿ 11,821 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆದಿದ್ದು, ಕಟಾವು ಸಂದರ್ಭದಲ್ಲಿ ಉಂಟಾದ ಅತಿವೃಷ್ಟಿಯಿಂದ ಬಹುತೇಕ ಬೆಳೆಗಳು ನಷ್ಟಕ್ಕೆ ಒಳಗಾಗಿವೆ. ಕೃಷಿ ಇಲಾಖೆ ಪ್ರಕಾರ ರಾಗಿ ಶೇ.80 ಬೆಳೆ ನಷ್ಟ ಉಂಟಾಗಿದ್ದು, ಸರ್ಕಾರ ಮಳೆಯಾಶ್ರಿತ ಪ್ರತಿ ಗುಂಟೆಗೆ 68 ರೂ, ನೀರಾವರಿ ಆಶ್ರಿತ ಪ್ರತಿ ಗುಂಟೆಗೆ 135 ರೂಪಾಯಿಯನ್ನು ರೈತರ ಖಾತೆಗೆ ಜಮೆ ಮಾಡಿದ್ದು, ಈಗ ರಾಗಿ ಖರೀದಿಗೂ ಸಮಸ್ಯೆಯಾಗಿದೆ.

    ಪ್ರತಿನಿತ್ಯ ಅಲೆದಾಟ: ಕಳೆದ ವರ್ಷ 488 ರೈತರಿಂದ 7403 ಕ್ವಿಂಟಾಲ್ ರಾಗಿಯನ್ನು ಎಂಎಸ್‌ಪಿ ದರದಲ್ಲಿ ಖರೀದಿ ಮಾಡಲಾಗಿದ್ದು ಈ ವರ್ಷ 246 ರೈತರು 3495 ಕ್ವಿಂಟಾಲ್ ಖರೀದಿಗೆ ನೋಂದಣಿಯಾಗಿದ್ದು ಉಳಿದ ರೈತರು ಪ್ರತಿನಿತ್ಯ ಪರದಾಡುತ್ತಿದ್ದಾರೆ.

    ಕ್ರಾಪ್ ಸರ್ವೇ ವೇಳೆ ಬೆಳೆ ನೋಂದಣಿಯಾಗಬೇಕಾಗಿದ್ದು, ಪಹಣಿಯಲ್ಲಿ ಕೈ ಬಿಟ್ಟಿದ್ದರೆ ಅಂತಹ ರೈತರು ಅರ್ಜಿ ನೀಡಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
    ಆರ್.ಶೋಭಿತಾ, ತಹಸೀಲ್ದಾರ್ ಮುಳಬಾಗಿಲು

    ಕಂದಾಯ ಇಲಾಖೆ ಸೇರಿ ವಿವಿಧ ಇಲಾಖೆಗಳು ಜಂಟಿ ಬೆಳೆ ಸಮೀಕ್ಷೆ ಮಾಡಿದ್ದು, ಅದರ ಆಧಾರದ ಮೇಲೆ ್ರೂಟ್ಸ್ ಐಡಿ ನೀಡಲಾಗುತ್ತದೆ. ಎಷ್ಟು ಪ್ರದೇಶದಲ್ಲಿ ಬೆಳೆ ಇದೆ ಎಂಬುದರ ಆಧಾರದಲ್ಲಿ ಖರೀದಿ ಮಾಡಲಾಗುತ್ತಿದೆ. ಇದರಲ್ಲಿ ಕೃಷಿ ಇಲಾಖೆ ಪಾತ್ರ ಇಲ್ಲ.
    ಎಸ್.ರವಿಕುಮಾರ್, ಹಿರಿಯ ಸಹಾಯಕ ನಿರ್ದೇಶಕ, ಕೃಷಿ ಇಲಾಖೆ ಮುಳಬಾಗಿಲು

    ಕೂಲಿ ಆಳುಗಳನ್ನು ಇಟ್ಟು 3 ಎಕರೆಯಲ್ಲಿ ರಾಗಿ ಬೆಳೆದಿದ್ದೆವು, ಅದು ಪಹಣಿಯಲ್ಲಿ ನೋಂದಣಿಯಾಗಿಲ್ಲ. 20 ಕ್ವಿಂಟಾಲ್ ರಾಗಿ ಬೆಳೆದಿದ್ದು, 1.3 ಲಕ್ಷ ರೂ. ಖರ್ಚು ಬಂದಿದೆ. ಈಗ ಬೆಂಬಲ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ
    ಡಿ.ಎಂ.ಮೋಹನ್, ಉತ್ತನೂರು ಗ್ರಾಮದ ರೈತ

    ಜ.21ರಿಂದ ಸರ್ವರ್ ಎರರ್ ಉಂಟಾಗಿದ್ದು, ರಾಗಿ ಖರೀದಿಗೆ ನೋಂದಣಿ ಮಾಡಲು ಸಾಧ್ಯವಾಗುತ್ತಿಲ್ಲ, ರೈತರು ಬಂದು ವಾಗ್ವಾದ ಮಾಡುತ್ತಾರೆ.
    ಆರ್.ಮುರಳಿ, ಖರೀದಿ ಕೇಂದ್ರದ ಕಂಪ್ಯೂಟರ್ ಆಪರೇಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts