More

    ಮುರ್ಡೆಶ್ವರದಲ್ಲಿ ನೆರೆ ಆತಂಕ

    ಭಟ್ಕಳ: ಈಗಾಗಲೇ ಕರೊನಾ ಲಾಕ್​ಡೌನ್​ನಿಂದಾಗಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ನಡುವೆಯೇ ಮಳೆಗಾಲ ಆರಂಭವಾಗಿರುವುದು ಮುರ್ಡೆಶ್ವರದ ಜನತೆಯಲ್ಲಿ ಮತ್ತೊಂದು ಭೀತಿಯನ್ನು ಸೃಷ್ಟಿಸಿದೆ. ನೀರು ಹರಿದು ಹೋಗುವ ಕಾಲುವೆಗಳನ್ನು ಸ್ವಚ್ಛ ಮಾಡದಿರುವುದರಿಂದ ನೆರೆಯ ಆತಂಕ ತಲೆದೋರಿದೆ.

    ಪ್ರತಿ ವರ್ಷ ಮಳೆಗಾಲದ ಆರಂಭದಲ್ಲಿ ಮಾವಳ್ಳಿ 1 ಮತ್ತು 2ರ ಪಂಚಾಯಿತಿಯವರು ಜಂಗಲ್ ಕಟಿಂಗ್ ಮಾಡಿ ಹಳ್ಳ ಕೊಳ್ಳಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡುತ್ತಿದ್ದರು. ಆದರೆ, ಈ ಬಾರಿ ಸ್ಥಳೀಯ ಪಂಚಾಯಿತಿ ಇದ್ಯಾವುದಕ್ಕೂ ಮುಂದಾಗಿಲ್ಲ. ಪರಿಣಾಮ ಮುರ್ಡೆಶ್ವರದಲ್ಲಿ ಕೃತಕ ನೆರೆಯ ಭೀತಿ ಎದುರಾಗಿದೆ.

    ಕಾರಿಹಳ್ಳ ಕೆರೆಯು ತುಂಬಿ ಹರಿಯುವ ಎಲ್ಲ ಸೂಚನೆ ನೀಡುತ್ತಿದೆ. ಮುರ್ಡೆಶ್ವರದ ಮಧ್ಯ ಭಾಗದಲ್ಲಿ ಹರಿಯುವ ಕಾರಿಹಳ್ಳ ಕೆರೆಗೆ ಗುಡಿಗಾರಬೋಳೆ, ನೆರೆಕುಳಿ, ಹಿಂದು ರುದ್ರಭೂಮಿ, ನ್ಯಾಷನಲ್ ಕಾಲನಿ, ಜನತಾ ಕ್ವಾರ್ಟರ್ಸ್, ಕೊಂಕಣ್ ರೈಲ್ವೆ ಸ್ಟೇಶನ್ ಕಡೆಯಿಂದ ನೀರು ಹರಿದು ಬರುತ್ತಿದೆ. ಈ ಹಳ್ಳವನ್ನು ಸ್ವಚ್ಛಗೊಳಿಸದ ಪರಿಣಾಮ ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದರಿಂದ ಪ್ರವಾಸಿಗರು, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಅಲ್ಲದೆ, ಸುತ್ತಲಿನ ನೂರಾರು ಎಕರೆ ಕೃಷಿ ಜಮೀನುಗಳಲ್ಲಿ ಮಳೆ ನೀರು ತುಂಬಿದ್ದು, ಕೃಷಿ ಕಾರ್ಯ ಮಾಡಲಾರದ ಸ್ಥಿತಿ ಉಂಟಾಗಿದೆ.

    ಪ್ರತಿ ವರ್ಷ ಮಳೆಗಾಲ ಆರಂಭಕ್ಕೂ ಪೂರ್ವದಲ್ಲಿ ಸ್ಥಳೀಯ ಆಡಳಿತ, ಲೋಕೋಪಯೋಗಿ ಇಲಾಖೆಯು ಹಳ್ಳದಲ್ಲಿ ಬೆಳೆದ ಗಿಡಗಂಟಿಗಳನ್ನು ಕಡಿದು, ಕಸವನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಅನುಕೂಲ ಮಾಡುತ್ತಿದ್ದರು. ಈ ವರ್ಷ ಇದ್ಯಾವುದೂ ನಡೆಯಲಿಲ್ಲ. ತಾಲೂಕಿನಾದ್ಯಂತ ಮುಂಗಾರು ಮಳೆ ಚುರುಕುಗೊಳ್ಳುತ್ತಿದೆ. ತಾಲೂಕಾಡಳಿತ ಈಗಲಾದರೂ ಮುಂಜಾಗ್ರತೆ ವಹಿಸಿ ಜನರ ಆಸ್ತಿ, ಪ್ರಾಣ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಪ್ರತಿವರ್ಷ ಮಳೆಗಾಲದ ಪೂರ್ವದಲ್ಲಿಯೇ ಇಲ್ಲಿನ ಕೆರೆ- ಹಳ್ಳಗಳನ್ನು ಸ್ಥಳೀಯ ಆಡಳಿತ ಸಂಬಂಧಪಟ್ಟ ಇಲಾಖೆಯೊಂದಿಗೆ ಸೇರಿ ಸ್ವಚ್ಛಗೊಳಿಸುವ ಕಾರ್ಯ ಮಾಡುತಿತ್ತು. ಆದರೆ, ಈ ಬಾರಿ ಈ ಕಾರ್ಯಕ್ಕೆ ಕೈ ಹಾಕಿಲ್ಲ. ಪರಿಣಾಮ ಕೃಷಿ ಭೂಮಿ ಮಳೆಯ ನೀರಿನಲ್ಲಿ ಮುಳುಗಡೆಯಾಗಿವೆ. ರಸ್ತೆ ತುಂಬೆಲ್ಲ ಮಳೆ ನೀರು ಹರಿಯುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ತಂದೊಡ್ಡಿದೆ. ಕೂಡಲೆ ಸೂಕ್ತ ಕ್ರಮ ಕೈಗೊಳ್ಳಬೇಕು.
    | ಈಶ್ವರ ನಾಯ್ಕ ದೊಡ್ಮನಿ ಬಿಜೆಪಿ ಮುಖಂಡರು

    ಸಮಸ್ಯೆ ಪರಿಹರಿಸಲು ಈಗಲೆ ಪಿಡಬ್ಲ್ಯುಡಿ ಅಧಿಕಾರಿಯೊಂದಿಗೆ ರ್ಚಚಿಸಿ ಪಿಡಿಒ ಅವರಿಗೂ ಸೂಚನೆ ನೀಡುತ್ತೇನೆ. ಕಾರಿಹಳ್ಳದ ವಿಸ್ತಾರ ದೊಡ್ಡದಿರುವುದರಿಂದ ಪಂಚಾಯಿತಿ ಮತ್ತು ಪಿಡಬ್ಲ್ಯುಡಿ ಇಲಾಖೆ ಜಂಟಿಯಾಗಿ ಸ್ವಚ್ಛಗೊಳಿಸಬೇಕಿದೆ. ಅಲ್ಲಿನ ಸ್ಥಿತಿಯನ್ನು ಅವಲೋಕಿಸಿ ಕೂಡಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    | ಪ್ರಭಾಕರ ಚಿಕ್ಕನಮನೆ ತಾ.ಪಂ ಇಒ ಭಟ್ಕಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts